ಐಸಿಸಿ Ranking: ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ಸ್ಥಾನದಲ್ಲಿ ವಿರಾಟ್ ಕೊಹ್ಲಿ


ಲಂಡನ್, ಸೆಪ್ಟೆಂಬರ್ 12: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ವಿಶ್ವ ನಂ.1 ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯದ ಬಳಿಕ ಪ್ರಕಟಿಸಲಾಗಿರುವ ಹೊಸ ರ್ಯಾಂಕ್ ಪಟ್ಟಿಯಲ್ಲಿ ಕೊಹ್ಲಿ ಅಗ್ರ ಸ್ಥಾನವನ್ನಾವರಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಎದುರು ಟೆಸ್ಟ್ ಸರಣಿ ಸೋತರೂ Rankingನಲ್ಲಿ ಭಾರತವೇ ನಂ.1

ಇಂಗ್ಲೆಂಡ್ ವಿರುದ್ಧದ ಎಜ್ ಬಾಸ್ಟನ್ ಟೆಸ್ಟ್ ಬಳಿಕ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನಂ. 1 ಸ್ಥಾನಕ್ಕೇರಿದ್ದರು. ಟ್ರೆಂಟ್ ಬ್ರಿಡ್ಜ್‌ (3ನೇ) ಟೆಸ್ಟ್ ಬಳಿಕ ಕುಸಿದಿದ್ದ ಕೊಹ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಗಟ್ಟಿಯಾಗಿದ್ದಾರೆ. ವೆಸ್ಟ್‌ ಇಂಡೀಸ್ ಎದುರು ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಅಕ್ಟೋಬರ್ 4ರಿಂದ ಆಂರಂಭಗೊಳ್ಳಲಿರುವುದರಿಂದ ನಂ. 1 ಸ್ಥಾನದಲ್ಲೇ ಉಳಿಯಲು ಕೊಹ್ಲಿಗೆ ಅವಕಾಶವಿದೆ. ಏಕದಿನ ರ್ಯಾಂಕಿಂಗ್ ನಲ್ಲಿ ಹೇಗೂ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ.ಇಂಗ್ಲೆಂಡ್-ಭಾರತ ಟೆಸ್ಟ್ ನಲ್ಲಿ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು.

ಭಾರತ ಯುವ ಬ್ಯಾಟ್ಸ್ಮನ್ ಗಳಾದ ಲೋಕೇಶ್ ರಾಹುಲ್ ಮತ್ತು ರಿಷಬ್ ಪಂತ್ ಕೂಡ ಹೊಸ ರ್ಯಾಂಕಿಂಗ್ ನಲ್ಲಿ ಗಮನಾರ್ಹ ಜಿಗಿತ ಕಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಬಳಿಕ ರ್ಯಾಂಕಿಂಗ್ ನಲ್ಲಿ 16 ಸ್ಥಾನ ಜಿಗಿತ ಕಂಡಿರುವ ರಾಹುಲ್ ಸದ್ಯ 19ನೇ ಸ್ಥಾನದಲ್ಲಿದ್ದಾರೆ.

ರಿಷಬ್ ಪಂತ್ ಕೂಡ ರ್ಯಾಂಕಿಂಗ್ ನಲ್ಲಿ ಭರ್ಜರಿ ಜಿಗಿತದ ಸಾಧನೆ ತೋರಿದ್ದಾರೆ. ಒಟ್ಟು 63 ಸ್ಥಾನ ಜಿಗಿದಿರುವ ಪಂತ್ ಈಗಿನ ರ್ಯಾಂಕಿಂಗ್ ನಲ್ಲಿ 111ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಎದುರಿನ ಕೊನೆಯ ಟೆಸ್ಟ್ ನಲ್ಲಿ 114 ರನ್ ಗಳಿಸಿದ್ದರಿಂದ, ಅದೂ ತನ್ನ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿದ್ದರಿಂದ ಪಂತ್ ರ್ಯಾಂಕ್ ಜಿಗಿತಕ್ಕೆ ಕಾರಣ.

ಇನ್ನು ಟೆಸ್ಟ್ ರ್ಯಾಂಕಿಗ್ ನ ದ್ವಿತೀಯ ಸ್ಥಾನದಲ್ಲಿ ನಿಷೇಧಿತ ಆಟಗಾರ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಇದ್ದರೆ, ಮೂರನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ ನ ಕೇನ್ ವಿಲಿಯಮ್ಸನ್, 4ನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಜೋ ರೂಟ್, 5ನೇ ಸ್ಥಾನದಲ್ಲಿ ನಿಷೇಧಿತ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಇದ್ದಾರೆ.

Have a great day!
Read more...

English Summary

India captain Virat Kohli finished as the number-one ranked batsman in the world in the latest ICC Player Rankings for Test Batsmen after the completion of the five-match series against England at London.