ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿ ಮುಕ್ತಾಯವಾಗಿದ್ದು, ಭಾರತ ಕ್ರಿಕೆಟ್ ಅಭಿಮಾನಿಗಳ ಚಿತ್ತ ಇದೀಗ ಇದೇ ತಿಂಗಳು ನಡೆಯಲಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು ಮುಂದಿನ ತಿಂಗಳು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಗಳತ್ತ ಇದೆ. ಕೇವಲ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ಈ ಸರಣಿಗಳತ್ತ ಟೀಮ್ ಇಂಡಿಯಾ ಆಯ್ಕೆಗಾರರ ಸಮಿತಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ಕೂಡ ಕಣ್ಣಿಟ್ಟಿದ್ದಾರೆ.
ಹೌದು, ಅಕ್ಟೋಬರ್ ತಿಂಗಳಿನಿಂದ ಆಸ್ಟ್ರೇಲಿಯಾ ನೆಲದಲ್ಲಿ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಎತ್ತಿ ಹಿಡಿಯಬೇಕೆಂಬ ಗುರಿಯನ್ನು ಹೊಂದಿದೆ. ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಕಾರಣ ಈ ಬಾರಿ ಬಲಿಷ್ಟ ತಂಡವನ್ನು ರಚಿಸುವತ್ತ ಚಿತ್ತ ನೆಟ್ಟಿದೆ ಬಿಸಿಸಿಐ. ಹೀಗಾಗಿಯೇ ಇದಕ್ಕೂ ಮುನ್ನ ನಡೆಯಲಿರುವ ಟಿ ಟ್ವೆಂಟಿ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರತ್ತ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಆಯ್ಕೆಗಾರರು ಕಣ್ಣಿಡಲಿದ್ದಾರೆ.
ಇತ್ತ ಆಟಗಾರರ ನಡುವೆಯೂ ಸಹ ಟಿ ಟ್ವೆಂಟಿ ವಿಶ್ವಕಪ್ ತಂಡದ ಅವಕಾಶ ಗಿಟ್ಟಿಸಿಕೊಳ್ಳವುದರಲ್ಲಿ ಒಳ ಪೈಪೋಟಿ ಏರ್ಪಟ್ಟಿದೆ. ಅದರಲ್ಲಿಯೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ನಂತರ ಹಲವಾರು ಆಟಗಾರರು ಕಮ್ಬ್ಯಾಕ್ ಮಾಡಿರುವ ಕಾರಣ ಈ ಪೈಪೋಟಿ ಇದೀಗ ದುಪ್ಪಟ್ಟಾಗಿದೆ ಎಂದೇ ಹೇಳಬಹುದು. ಇದೀಗ ಈ ಕುರಿತಾಗಿ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದು, ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಾಗಿ ತಂಡವನ್ನು ಯಾವ ರೀತಿ ಆರಿಸಲಾಗುವುದು ಹಾಗೂ ಎಷ್ಟು ಆಟಗಾರರ ತಂಡವನ್ನು ಅಂತಿಮಗೊಳಿಸಲಾಗುವುದು ಎಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.
20 ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಬೇಕಿದೆ
ಟಿ ಟ್ವೆಂಟಿ ವಿಶ್ವಕಪ್ನಲ್ಲಿ ಕಣಕ್ಕಿಳಿಯಬಹುದಾದ ಟೀಮ್ ಇಂಡಿಯಾದ ಕುರಿತು ಮಾತನಾಡಿದ ದ್ರಾವಿಡ್ ಟೂರ್ನಿ ಸಮೀಪಿಸುತ್ತಿದ್ದು, 15 ಆಟಗಾರರ ತಂಡವನ್ನು ಪ್ರಕಟಿಸಬೇಕಿದೆ. ಹೀಗಾಗಿ ಆದಷ್ಟು ಬೇಗ 18 - 20 ಸೂಕ್ತ ಆಟಗಾರರನ್ನು ಆರಿಸಿ ಅಂತಿಮ ಪಟ್ಟಿ ರಚಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಮೂಲಕ 18 - 20 ಉತ್ತಮ ಆಟಗಾರರನ್ನು ಆರಿಸಿ ನಂತರ 15 ಆಟಗಾರರ ತಂಡವನ್ನು ಅಂತಿಮಗೊಳಿಸಲಾಗುವುದು ಎಂಬ ಮಾಹಿತಿಯನ್ನು ಕೋಚ್ ರಾಹುಲ್ ದ್ರಾವಿಡ್ ಬಾಯ್ಬಿಟ್ಟಿದ್ದಾರೆ.
ಮುಂದಿನ ಸರಣಿ/ ತದನಂತರದ ಸರಣಿಯಲ್ಲಿ ಅಂತಿಮ ಪಟ್ಟಿ
ಇನ್ನೂ ಮುಂದುವರೆದು ಮಾತನಾಡಿರುವ ರಾಹುಲ್ ದ್ರಾವಿಡ್ ವಿಶ್ವಕಪ್ ಟೂರ್ನಿಗೆ ಸಲ್ಲಿಸಬೇಕಿರುವ ಅಂತಿಮ ಪಟ್ಟಿ ಮುಂದಿನ ಸರಣಿ ಅಥವಾ ತದನಂತರದ ಸರಣಿಯಲ್ಲಿ ಸಿದ್ಧವಾಗಬಹುದು ಎಂದಿದ್ದಾರೆ. ಈ ಮೂಲಕ ಇದೇ ತಿಂಗಳು ನಡೆಯಲಿರುವ ಐರ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಆಂಗ್ಲರ ವಿರುದ್ಧದ ನಡೆಯಲಿರುವ ಸೀಮಿತ ಓವರ್ಗಳ ಸರಣಿಗಳಲ್ಲಿ ಆಟಗಾರರನ್ನು ಆರಿಸಲಾಗುವುದು ಎಂಬುದನ್ನು ಪರೋಕ್ಷವಾಗಿ ದ್ರಾವಿಡ್ ತಿಳಿಸಿದ್ದಾರೆ.
ಟೆಸ್ಟ್ ಸರಣಿ ರೋಹಿತ್ ಪಾಲಿಗೆ ದೊಡ್ಡ ಸವಾಲು | *Cricket | OneIndia Kannada
ಕಳಪೆ ಪ್ರದರ್ಶನ ನೀಡಿರುವ ಆಟಗಾರರಿಗೆ ಇನ್ನೂ ಇದೆ ಅವಕಾಶ
ಇನ್ನು ರಾಹುಲ್ ದ್ರಾವಿಡ್ ಅವರ ಈ ಹೇಳಿಕೆಯನ್ನು ಗಮನಿಸಿದರೆ ಇತ್ತೀಚೆಗಷ್ಟೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರಿಗೆ ಇನ್ನೂ ಅವಕಾಶವಿದೆ ಎಂದು ಹೇಳಬಹುದು. ಹೀಗಾಗಿ ಸದ್ಯ ಫಾರ್ಮ್ ಕಳೆದುಕೊಂಡು ನೆಲಕಚ್ಚಿರುವ ಆಟಗಾರರು ಮುಂದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರು ಮತ್ತು ರಾಹುಲ್ ದ್ರಾವಿಡ್ ಅವರ ಗಮನವನ್ನು ತಮ್ಮತ್ತ ಸೆಳೆಯುವ ಕೆಲಸ ಮಾಡಬೇಕಿದೆ.