
ನಿರಾಶಾದಾಯಕ ಆಟಗಾರ
ಆಸ್ಟ್ರೇಲಿಯಾ ನಾಯಕ, ಬ್ಯಾಟ್ಸ್ಮನ್ ಆ್ಯರನ್ ಫಿಂಚ್ ಅವರನ್ನು ಐಪಿಎಲ್ 2020ರ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅತ್ಯಂತ ನಿರಾಶಾದಾಯಕ ಆಟಗಾರ ಎಂದು ಮಾಜಿ ಬ್ಯಾಟ್ಸ್ಮನ್ ಆಕಾಶ್ ಚೋಪ್ರಾ ಕರೆದಿದ್ದಾರೆ. ಫಿಂಚ್ ಈ ಬಾರಿ ಆರ್ಸಿಬಿ ಪಾಲಾಗಿ ಕುತೂಹಲ ಮೂಡಿಸಿದ್ದರಾದರೂ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ.

ದುಬಾರಿ ಬೆಲೆಗೆ ಖರೀದಿ
ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಆ್ಯರನ್ ಫಿಂಚ್ ಅವರನ್ನು ಈ ಬಾರಿಯ ಆಟಗಾರರ ಹರಾಜಿನ ವೇಳೆ ಆರ್ಸಿಬಿ 4.4 ಕೋಟಿ ರೂ.ಗೆ ಖರೀದಿಸಿತ್ತು. ಪಿಂಚ್ ಮೇಲೆ ಆರ್ಸಿಬಿ ಬಹಳಷ್ಟು ನಿರೀಕ್ಷೆಯೂ ಇಟ್ಟುಕೊಂಡಿತ್ತು. ಆದರೆ ಒಟ್ಟು 12 ಪಂದ್ಯಗಳನ್ನಾಡಿದ್ದ ಫಿಂಚ್ 22.33ರ ಸರಾಸರಿ, 111.20 ಸ್ಟ್ರೈಕ್ ರೇಟ್ನಂತೆ ಕೇವಲ 268 ರನ್ ಗಳಿಸಿದ್ದರು.

ಮೋಹೀನ್ ಅಲಿಗೆ ಅವಕಾಶ ನೀಡಿಲ್ಲ
ಫೇಸ್ಬುಕ್ ಪೇಜ್ನ ವಿಡಿಯೋದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, 'ಈ ಸೀಸನ್ನಲ್ಲಿ ಆರ್ಸಿಬಿ ಪಾಲಿಗೆ ಆ್ಯರನ್ ಫಿಂಚ್ ಬಲು ದೊಡ್ಡ ನಿರಾಶಾದಾಯಕ ಆಟಗಾರ. ಅವರಿಗೆ ಬ್ಯಾಟಿಂಗ್ಗಾಗಿ ಬಹಳಷ್ಟು ಅವಕಾಶಗಳನ್ನು ನೀಡಲಾಗಿತ್ತು. ಹೀಗಾಗಿ ಅವರಿಗೆ ಅವಕಾಶ ನೀಡಿರಲಿಲ್ಲ ಅಂತ ಯಾರೂ ಹೇಳೋಹಾಗಿಲ್ಲ. ನೀವು ಬೇಕಾದರೆ ಮೋಯೀನ್ ಅಲಿಗೆ ಅವಕಾಶ ನೀಡಿಲ್ಲ ಅಂತ ಹೇಳಬಹುದು,' ಎಂದಿದ್ದಾರೆ.

ಉತ್ತಮ ಬ್ಯಾಟಿಂಗ್ ರೆಕಾರ್ಡ್
34ರ ಹರೆಯದ ಆ್ಯರನ್ ಫಿಂಚ್ ಬ್ಯಾಟಿಂಗ್ ರೆಕಾರ್ಡ್ ಚೆನ್ನಾಗಿಯೇ ಇದೆ. 5 ಟೆಸ್ಟ್ ಪಂದ್ಯಗಳಲ್ಲಿ 278 ರನ್, 129 ಏಕದಿನ ಪಂದ್ಯಗಳಲ್ಲಿ 4983 ರನ್, 64 ಟಿ20ಐ ಪಂದ್ಯಗಳಲ್ಲಿ 2114 ರನ್, 87 ಐಪಿಎಲ್ ಪಂದ್ಯಗಳಲ್ಲಿ 2005 ರನ್ ಬಾರಿಸಿದ್ದಾರೆ. ಏಕದಿನದಲ್ಲಿ 16 ಶತಕ, 27 ಅರ್ಧ ಶತಕ, ಟಿ20ಐನಲ್ಲಿ 2 ಶತಕ, 12 ಅರ್ಧಶತಕಗಳನ್ನು ಬಾರಿಸಿದ್ದಾರೆ.