ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿರುವ ಯುವ ಆಟಗಾರ ಶುಬ್ಮನ್ ಗಿಲ್ ತಮ್ಮ ಪ್ರಥಮ ಟೆಸ್ಟ್ ಶತಕವನ್ನು 9 ರನ್ಗಳಿಂದ ಕಳೆದುಕೊಂಡಿದ್ದಾರೆ. ಎರಡನೇ ವಿಕೆಟ್ಗೆ ಪೂಜಾರ ಜೊತೆಗೆ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದ ಗಿಲ್ ಶತಕದ ಅಂಚಿನಲ್ಲಿ ಎಡವಿ ವಿಕೆಟ್ ಒಪ್ಪಿಸಿದರು.
ಶುಬ್ಮನ್ ಗಿಲ್ 91 ರನ್ ಹಳಿಸಿದ್ದ ವೇಳೆ ಆಸ್ಟ್ರೇಲಿಯಾ ಅನುಭವಿ ಸ್ಪಿನ್ನರ್ ನಥನ್ ಲಿಯಾನ್ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ಸ್ಟೀವ್ ಸ್ಮಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪ್ರವಾಸ ಮಾಡಿ ನರ್ವಸ್ 90ಗೆ ವಿಕೆಟ್ ಒಪ್ಪಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇದು ಶುಬ್ಮನ್ ಗಿಲ್ ಅವರ ಮೂರನೇ ಟೆಸ್ಟ್ ಪಂದ್ಯವಾಗಿದೆ.
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಬ್ರಿಸ್ಬೇನ್, ಅಂತಿಮ ದಿನದಾಟ Live ಸ್ಕೋರ್
ಶುಬ್ಮನ್ ಗಿಲ್ ಅವರ ಈ ಅದ್ಭುತವಾದ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿತ್ತು. 62ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿರುವ ಯುವ ಬ್ಯಾಟ್ಸ್ಮನ್ 146 ಎಸೆತಗಳನ್ನು ಎದುರಿಸಿ 91 ರನ್ ಗಳಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಎರಡನೇ ಅರ್ಧ ಶತಕವನ್ನು ಬಾರಿಸಿದ್ದಾರೆ ಶುಬ್ಮನ್ ಗಿಲ್.
ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಶುಬ್ಮನ್ ಗಿಲ್ ಆರಂಭದಿಂದಲೇ ಉತ್ತಮ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಲು ಆರಂಭಿಸಿದರು. ಆದರೆ ಅನುಭವಿ ರೋಹಿತ್ ಶರ್ಮಾ ಕೇವಲ 18 ರನ್ ಗಳಿಸಿದ್ದ ವೇಳೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ಬಳಿಕ ಚೇತೇಶ್ವರ್ ಪೂಜಾರ ಜೊತೆಗೂಡಿದ ಗಿಲ್ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡಿದ್ದಲ್ಲದೆ ಶತಕದ ಜೊತೆಯಾಟವನ್ನು ನೀಡಿದರು.
ಮೂರನೇ ವಿಕೆಟ್ಗೆ ಚೇತೇಶ್ವರ್ ಪೂಜಾರಗೆ ನಾಯಕ ಅಜಿಂಕ್ಯ ರಹಾನೆ ಜೋತೆಗೂಡಿದ್ದು ಪಂದ್ಯವನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿದಿದೆ. ಭಾರತದ ಎರಡನೇ ಇನ್ನಿಂಗ್ಸ್ನ 50 ಓವರ್ಗಳ ಆಟದಲ್ಲಿ ಭಾರತ 138-2 ವಿಕೆಟ್ ಕಳೆದುಕೊಂಡಿದ್ದು ಭಾರತದ ಗೆಲುವಿಗೆ 190 ರನ್ಗಳ ಅವಶ್ಯಕತೆಯಿದೆ.