ಕಷ್ಟಗಳಿಂದ ಪಾರಾಗಿ ಬಂದಿದ್ದ ನಿಕೋಲಸ್
ಹೌದು, ನಿಕೋಲಸ್ ಈ ಮಟ್ಟಿನ ಫಿಟ್ನೆಸ್ ಕಾಪಾಡಿಕೊಳ್ಳಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅಭಿಮಾನಿಗಳು ಆತನ ಫೀಲ್ಡಿಂಗ್ ಕಂಡು 'ವಾವ್....ಸೂಪರ್...ಅಮೋಘ ಫೀಲ್ಡಿಂಗ್' ಎಂದು ಮೆಚ್ಚುಗೆ ಸೂಚಿಸಿದರು. ಆದರೆ ನಿಕೋಲಸ್ ಪೂರಾನ್ ಇಷ್ಟೆಲ್ಲ ಫಿಟ್ನೆಸ್ ಅನ್ನು ವಾಪಸ್ ಪಡೆದುಕೊಳ್ಳುವುದರ ಹಿಂದೆ ಎಷ್ಟು ಕಷ್ಟಪಟ್ಟಿರಬಹುದು? ಅವರು ಬದುಕಿನಲ್ಲಿ ಅನುಭವಿಸಿದ ಕಷ್ಟಗಳೇನು? ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ.
ನಿಕೋಲಸ್ ಕ್ಯಾಚ್ ನೋಡಿ ಜಾಂಟಿ ರೋಡ್ಸ್ ಕೂಡ ಒಮ್ಮೆ ಬೆಚ್ಚಿ ಬಿದ್ದರು
ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಎಂ.ಅಶ್ವಿನ್ ಬೌಲಿಂಗ್ಗೆ ರಾಜಸ್ಥಾನ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ದೊಡ್ಡ ಹೊಡೆತವನ್ನು ಬಾರಿಸಿದರು. ಇನ್ನೇನು ಸಿಕ್ಸರ್ ಆಗಬೇಕು ಎನ್ನುವಷ್ಟರಲ್ಲಿ ಚೆಂಡನ್ನು ಅದ್ಭುತವಾಗಿ ತಡೆದ ಪೂರಾನ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಪೂರಾನ್ ಅಮೋಘ ಫೀಲ್ಡಿಂಗ್ ಕಂಡು ಸ್ವತಃ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಮೂಕವಿಸ್ಮಿತರಾಗಿದ್ದರು.
tweet:
|
ನನ್ನ ಜೀವನದಲ್ಲಿ ಇಂತಹ ರನ್ ಸೇವ್ ನೋಡಿರ್ಲಿಲ್ಲ-ಸಚಿನ್
ವಿಂಡೀಸ್ ಕ್ರಿಕೆಟಿಗನ ಚುರುಕಿನ ಕ್ಷೇತ್ರ ರಕ್ಷಣೆಗೆ ಅನೇಕರು ಶಹಬ್ಬಾಸ್ ಎಂದಿದ್ದರು. ಆದರೆ ಕ್ರಿಕೆಟ್ ದೇವರು ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಕ್ರಿಕೆಟ್ ಜೀವನದಲ್ಲಿ ನಾನು ನೋಡಿದ ಅತ್ಯದ್ಭುತ ರನ್ ಸೇವ್ ಇದು ಎಂದು ಗುಣಗಾನ ಮಾಡಿದ್ದರು.
ಇಷ್ಟೆಲ್ಲಾ ಅದ್ಭುತ ಫಿಟ್ನೆಸ್ಗೂ ಮುನ್ನ ಭೀಕರ ಕಾರು ಅಪಘಾತವಾಗಿತ್ತು!
ಸರಿಯಾಗಿ 5 ವರ್ಷಗಳ ಹಿಂದಿನ ಕಥೆಯಿದು. 2015 ಟ್ರೆನಿಡಾಡ್ನಿಂದ ಕ್ರಿಕೆಟ್ ತರಬೇತಿ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ, ಪೂರಾನ್ ಚಲಾಯಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ತುತ್ತಾಗುತ್ತದೆ. ಪೂರಾನ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಜೊತೆಗೆ ಬಲಗಾಲಿಗೆ ಗಂಭೀರ ಪೆಟ್ಟು ತಗುಲಿತು. 6 ತಿಂಗಳು ಕ್ರಿಕೆಟ್ ಆಡಲು ಸಾಧ್ಯವಾಗದೆ ವಿಶ್ರಾಂತಿಯಲ್ಲಿದ್ದರು.
ಎರಡು ಮೇಜರ್ ಸರ್ಜರಿಗೂ ಒಳಗಾಗಿ ಹೆಚ್ಚಿನ ದಿನಗಳನ್ನು ವೀಲ್ಚೇರ್ನಲ್ಲಿಯೇ ಕಳೆದಿದ್ದರು. ಆದರೆ ಛಲ ಬಿಡದ ಪೂರನ್ ನಿಧಾನವಾಗಿ ಚೇತರಿಸಿಕೊಳ್ಳುತ್ತಾ ಬಂದರು. ದಿನನಿತ್ಯ ಗಂಟೆಗಟ್ಟಲೇ ಜಿಮ್ನಲ್ಲಿ ಬೆವರು ಸುರಿಸಿ ಮತ್ತೆ ಸ್ಪರ್ಧಾತ್ಮತ ಕ್ರಿಕೆಟ್ಗೆ ಮರಳಿದರು.
ತನ್ನ ಕಾಲಿನ ಸರ್ಜರಿಯನ್ನೂ ಮರೆತು ಡೈ ಹೊಡೆದ ಪೂರನ್
ಹೌದು, ನಿಕೋಲಸ್ ಅದ್ಭುತ ಫೀಲ್ಡಿಂಗ್ ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದರು. ಆದರೆ ನಿಕೋಲಸ್ ಯಾವ ಧೈರ್ಯದಿಂದ ಈ ಡೈ ಹೊಡೆದರು ಎಂದು ಅನೇಕ ಕ್ರಿಕೆಟ್ ವಿಶ್ಲೇಷಕರು ಆಶ್ಚರ್ಯ ವ್ಯಕ್ತಪಡಿಸಿದರು. ಅದಾಗಲೇ ಕಾಲಿಗೆ ಎರಡು ಸರ್ಜರಿ ಆಗಿರುವಾಗ ಮತ್ತೇನಾದ್ರೂ ಆಗಿದ್ರೆ ಏನು ಗತಿ ಅನ್ನೋದನ್ನು ಅವರು ಚಿಂತಿಸದೇ ನೂರಕ್ಕೆ ನೂರರಷ್ಟು ಮೈದಾನದಲ್ಲಿ ಬದ್ಧತೆ ಪ್ರದರ್ಶಿಸಿದ್ದಾರೆ ಎಂಬ ಹೊಗಳಿಕೆಗೆ ಕಾರಣರಾಗಿದ್ದಾರೆ.