ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯಾರ್ಕ'ರಾಜನ್'!: ಅಪರೂಪದ ಬೌಲರ್‌ನ ಸ್ಫೂರ್ತಿದಾಯಕ ಕಥೆ

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ನಡುವಿನ ಪಂದ್ಯ ವೀಕ್ಷಿಸಿದವರಿಗೆ ಅಚ್ಚರಿ ಮೂಡಿಸಿದ ಆಟಗಾರನೆಂದರೆ ಎಡಗೈ ವೇಗಿ ಟಿ. ನಟರಾಜನ್. 14ನೇ ಓವರ್ ಮಾಡಲು ನಟರಾಜನ್ ಚೆಂಡು ಕೈಗೆತ್ತಿಕೊಂಡಾಗ ಡೆಲ್ಲಿ ತಂಡಕ್ಕೆ 42 ಎಸೆತಗಳಲ್ಲಿ 85 ರನ್ ಬೇಕಿತ್ತು. ಟಿ20ಯಲ್ಲಿ ಇದು ಅಸಾಧ್ಯವಾದ ಸಂಗತಿಯೇನಲ್ಲ. ಏಕೆಂದರೆ ರಿಷಬ್ ಪಂತ್ ಮತ್ತು ಶಿಮ್ರೋನ್ ಹೆಟ್ಮೇರ್ ಕ್ರೀಸ್‌ನಲ್ಲಿದ್ದರೆ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್ ಮಾರ್ಕಸ್ ಸ್ಟೋನಿಸ್ ಬ್ಯಾಟಿಂಗ್‌ಗೆ ಬರಲು ತಯಾರಾಗಿದ್ದರು.

ಹಿಂದಿನ ಓವರ್‌ನಲ್ಲಷ್ಟೇ ಎರಡು ಸಿಕ್ಸರ್ ಸಿಡಿಸಿದ್ದ ಪಂತ್, ನಟರಾಜನ್ ಬೌಲಿಂಗ್‌ನಲ್ಲಿ ಅಬ್ಬರಿಸುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಟರಾಜನ್ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಆ ಓವರ್‌ನಲ್ಲಿ ಅವರು ಎಸೆದ ಪ್ರತಿ ಎಸೆತವೂ ಯಾರ್ಕರ್ ಆಗಿತ್ತು. ಓವರ್‌ನ ಆರೂ ಎಸೆತಗಳನ್ನು ಯಾರ್ಕರ್ ಮಾಡುವ ಸಾಮರ್ಥ್ಯ ಭಾರತೀಯ ಬೌಲರ್‌ಗಳಲ್ಲಿ ಕಾಣಿಸುವುದು ತೀರಾ ಅಪರೂಪ. 18ನೇ ಓವರ್‌ನಲ್ಲಿಯೂ ಆರು ಎಸೆತಗಳಲ್ಲಿ ನಾಲ್ಕು ಎಸೆತಗಳನ್ನು ಅವರು ಯಾರ್ಕರ್ ಎಸೆದಿದ್ದರು. ಜತೆಗೆ ಸ್ಟೋನಿಸ್ ವಿಕೆಟ್ ಕೂಡ ಕಿತ್ತಿದ್ದರು. ಇದರಿಂದ ಡೆಲ್ಲಿ ತಂಡಕ್ಕೆ ಗೆಲ್ಲುವ ಅವಕಾಶಗಳನ್ನು ತಡೆದರು.

ಐಪಿಎಲ್ 2020: ನಿರಾಸೆ ಮೂಡಿಸಿದ ಕನ್ನಡಿಗರು ಇವರುಐಪಿಎಲ್ 2020: ನಿರಾಸೆ ಮೂಡಿಸಿದ ಕನ್ನಡಿಗರು ಇವರು

ಕಡಿಮೆ ರನ್ ಗಳಿಸಿಯೂ ಸನ್ ರೈಸರ್ಸ್ ಹೈದರಾಬಾದ್ ತಂಡ ಅದನ್ನು ಸಮರ್ಥಿಸಿಕೊಳ್ಳುವಷ್ಟು ಬಿಗುವಿನ ಬೌಲಿಂಗ್ ನಡೆಸಿದ ಬೌಲರ್‌ಗಳು ಪಂದ್ಯವನ್ನು ಗೆಲ್ಲಿಕೊಟ್ಟಿದ್ದರು. ಪಂದ್ಯ ಮುಗಿದ ಬಳಿಕ ಎಲ್ಲರೂ ನಟರಾಜನ್ ಪ್ರಶಂಸೆಯಲ್ಲಿ ತೊಡಗಿದ್ದರು. ಬ್ರೆಟ್ ಲೀ ಅವರಂತಹ ಬೌಲರ್ ಕೂಡ ನಟರಾಜನ್ ಅವರ ಚಾಕಚಕ್ಯತೆ ಬಗ್ಗೆ ಬೆರಗಾಗಿದ್ದರು. ಯಾರು ಈ ತಂಗರಸು ನಟರಾಜನ್? ಮುಂದೆ ಓದಿ...

ಪುಟ್ಟ ಹಳ್ಳಿಯಲ್ಲಿ ಜನಿಸಿದ ನಟ್ಟು

ಪುಟ್ಟ ಹಳ್ಳಿಯಲ್ಲಿ ಜನಿಸಿದ ನಟ್ಟು

ಚೆನ್ನೈನಿಂದ ಸುಮಾರು 340 ಕಿ.ಮೀ. ದೂರದ ಸೇಲಂನ ಜಿಲ್ಲೆಯಲ್ಲಿರುವ ಸಣ್ಣ ಹಳ್ಳಿ ಚಿನ್ನಪ್ಪಂಪಟ್ಟಿ. ಈ ಕುಗ್ರಾಮದಲ್ಲಿ ಜನಿಸಿದ ತಂಗರಸು ನಟರಾಜನ್, ಊರಿನವರ ಪಾಲಿಗೆ ಹೀರೋ. ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ನಟರಾಜನ್, ಅದರಲ್ಲಿಯೇ ತಮ್ಮ ಕೌಶಲವನ್ನು ಬೆಳೆಸಿಕೊಂಡವರು. ಯುವಜನರು ತಮ್ಮ ಕನಸುಗಳನ್ನು ಕೈಬಿಡಬಾರದು. ಪ್ರಯತ್ನ ಮಾಡಿದರೆ ಯಾವ ಕ್ಷೇತ್ರದಲ್ಲಿಯಾದರೂ ಯಶಸ್ಸು ಗಳಿಸಲು ಸಾಧ್ಯ ಎಂಬುದಕ್ಕೆ ಈಗ ನಟರಾಜನ್ ಪ್ರೇರಣೆಯಾಗುತ್ತಿದ್ದಾರೆ.

ದಿನಗೂಲಿ ಕಾರ್ಮಿಕರು

ದಿನಗೂಲಿ ಕಾರ್ಮಿಕರು

29 ವರ್ಷದ ನಟರಾಜನ್ ಬಗ್ಗೆ ಕೆದುಕುತ್ತಾ ಹೋದರೆ ಅನೇಕ ಆಸಕ್ತಿಕರ ಸಂಗತಿಗಳು ಹೊರಬೀಳುತ್ತವೆ. ಎಷ್ಟೋ ಕ್ರಿಕೆಟಿಗರಂತೆ ಮನೆಯವರ ಪ್ರೋತ್ಸಾಹ, ಹಣ ಇದ್ದು ಅವರು ಕ್ರಿಕೆಟ್ ಜಗತ್ತಿಗೆ ಬಂದವರಲ್ಲ. ಅವರ ಪ್ರತಿ ಹೆಜ್ಜೆಗೂ ಹತ್ತಾರು ಸವಾಲು, ಕಷ್ಟಗಳಿದ್ದವು. ನಟರಾಜನ್ ತಾಯಿ ದಿನಗೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದವರು. ತಂದೆ ಸೀರೆ ತಯಾರಿಕಾ ಕಂಪೆನಿಯಲ್ಲಿ ದುಡಿಯುತ್ತಿದ್ದರು.

ಐಸಿಸಿ ನಿಯಮ ಉಲ್ಲಂಘನೆ: ಶಿಕ್ಷೆಗೆ ಒಳಗಾಗುತ್ತಾರಾ ಉತ್ತಪ್ಪ? ವೈರಲ್ ವಿಡಿಯೋ

ಗಮನ ಸೆಳೆದ ಟಿಎನ್‌ಪಿಎಲ್

ಗಮನ ಸೆಳೆದ ಟಿಎನ್‌ಪಿಎಲ್

ಮನೆಯಲ್ಲಿ ಕಡುಬಡತನ ಹಾಗೂ ಹೆಗಲ ಮೇಲೆ ದೊಡ್ಡ ಜವಾಬ್ದಾರಿಗಳನ್ನು ಹೊತ್ತುಕೊಂಡೇ ನಟರಾಜನ್ ಕ್ರಿಕೆಟ್ ಜೀವನದಲ್ಲಿ ಕನಸು ಕಂಡರು. ಅವರ ದೆಸೆ ಬದಲಾಗಿದ್ದು ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ (ಟಿಎನ್‌ಪಿಎಲ್). ಡಿಂಡಿಗಲ್ ಡ್ರ್ಯಾಗನ್ಸ್ ಜತೆ ಒಪ್ಪಂದ ಮಾಡಿಕೊಂಡಿದ್ದ ಅವರು, ಬಳಿಕ ಲಿಕಾ ಕೋವೈ ಕಿಂಗ್ಸ್ ತಂಡ ಸೇರಿಕೊಂಡರು. 2017ರಲ್ಲಿ ದಿಂಡಿಗಲ್ ಪರ ಆರು ಪಂದ್ಯಗಳಲ್ಲಿ ಕೇವಲ 5.4ರ ಎಕಾನಮಿಯಲ್ಲಿ 9 ವಿಕೆಟ್ ಕಿತ್ತಿದ್ದರು.

ಸೇಲಂನಿಂದ ಸುಮಾರು 36 ಕಿ.ಮೀ. ದೂರದ ಈ ಹಳ್ಳಿಯಲ್ಲಿ ಸರಿಯಾಗಿ ಮೂಲಭೂತ ಸೌಕರ್ಯಗಳೇ ಇಲ್ಲ. ಇನ್ನು ಕ್ರಿಕೆಟ್ ಆಡಲು ಸೌಲಭ್ಯ ಎಲ್ಲಿ ಸಿಗಬೇಕು? ಗೆಳೆಯರ ಜತೆಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುವಾಗಲೂ ನಟರಾಜನ್ ಯಾರ್ಕರ್‌ಗೆ ಹೆಸರುವಾಸಿ. ಅದರ ನಡುವೆಯೂ ನಟರಾಜನ್ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಮತ್ತಷ್ಟು ತಿದ್ದಿಕೊಂಡರು. 2014-15ರಲ್ಲಿ ಅವರಿಗೆ ತಮಿಳುನಾಡು ರಣಜಿ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು.

ಸಹೋದರಿಯರಿಗೆ ಶಿಕ್ಷಣ, ಪೋಷಕರಿಗೆ ಮನೆ

ಸಹೋದರಿಯರಿಗೆ ಶಿಕ್ಷಣ, ಪೋಷಕರಿಗೆ ಮನೆ

ದಿಂಡಿಗಲ್ ತಂಡದಲ್ಲಿ ಅವರು ನೀಡಿದ ಅಮೋಘ ಪ್ರದರ್ಶನ ಅವರ ಬದುಕಿನ ದಿಕ್ಕು ಬದಲಿಸಿತು. 2017ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 3 ಕೋಟಿ ರೂ ನೀಡಿ ಅವರನ್ನು ಖರೀದಿಸಿತು. ಈ ಹಣದಿಂದ ನನ್ನ ಪೋಷಕರಿಗೆ ಮೊದಲು ಚೆಂದದ ಮನೆ ಕಟ್ಟಿಸಿಕೊಡಬೇಕು. ಅವರು ನನಗಾಗಿ ತಮ್ಮ ಜೀವಮಾನವಿಡೀ ದುಡಿದಿದ್ದಾರೆ. ಅವರು ಇನ್ನು ಕೆಲಸ ಮಾಡುವುದು ನನಗೆ ಇಷ್ಟವಿಲ್ಲ ಎಂದು ಮೊದಲ ಐಪಿಎಲ್ ಒಪ್ಪಂದದ ಬಳಿಕ ನಟರಾಜನ್ ಹೇಳಿಕೊಂಡಿದ್ದರು.

ಕೊಹ್ಲಿ, ರೈನಾ ಜೊತೆ ವಿಶೇಷ ಪಟ್ಟಿ ಸೇರಲು ರೋಹಿತ್ ಶರ್ಮಾಗೆ ಬೇಕು ಕೇವಲ 2 ರನ್

ನನ್ನ ಸಹೋದರಿಯರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಅವರಿಗೆ ಶಿಕ್ಷಣ ಸಿಕ್ಕರೆ ತಮ್ಮ ಜೀವನವನ್ನು ಅವರೇ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾವ ಮಟ್ಟಕ್ಕೆ ಬೇಕಾದರೂ ಅವರಿಗೆ ನಾನು ಸಹಾಯ ಮಾಡುತ್ತೇನೆ. ಯಾವುದೋ ಫ್ಯಾನ್ಸಿ ಕಾರ್‌ನಲ್ಲಿ ಡ್ರೈವ್ ಹೋಗುವುದಕ್ಕಿಂತಲೂ ಅವರಿಗೆ ಶಿಕ್ಷಣ ನೀಡುವುದೇ ನನಗೆ ದೊಡ್ಡ ಸಂಗತಿ ಎಂದು ಹೇಳಿದ್ದರು.

ಆಯ್ಕೆ ಆದರೂ ಆಡಿಸಲಿಲ್ಲ

ಆಯ್ಕೆ ಆದರೂ ಆಡಿಸಲಿಲ್ಲ

ಆರು ಪಂದ್ಯಗಳಲ್ಲಿ 9ರ ಎಕಾನಮಿಯಲ್ಲಿ ಎರಡು ವಿಕೆಟ್‌ಗಳನ್ನು ಮಾತ್ರವೇ ಪಡೆದುಕೊಂಡಿದ್ದರು. ನಂತರದ ಟಿಎನ್‌ಪಿಎಲ್‌ನಲ್ಲಿ ಲಿಕಾ ಕೋವೈ ಕಿಂಗ್ಸ್ ಪರ ಆಡಿದ ನಟರಾಜನ್, ಎಂಟು ಪಂದ್ಯಗಳಿಂದ 12 ವಿಕೆಟ್ ಕಬಳಿಸಿದರು. ಹೀಗಾಗಿ ಐಪಿಎಲ್‌ನಲ್ಲಿ ಮತ್ತೆ ಅವರು ಫ್ರಾಂಚೈಸಿಗಳ ಕಣ್ಣಿಗೆ ಬಿದ್ದರು. ಸನ್ ರೈಸರ್ಸ್ ಹೈದರಾಬಾದ್ ತಂಡ ಅವರನ್ನು ಖರೀದಿಸಿದಾಗ ಮುತ್ತಯ್ಯ ಮುರಳೀಧರನ್ ಕಣ್ಣಿಗೆ ಬಿದ್ದರು. ಆದರೆ 2018, 2019ರ ಎರಡು ಆವೃತ್ತಿಗಳಲ್ಲಿ ಅವರಿಗೆ ಒಂದೂ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ರಣಜಿ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ಕರ್ನಾಟಕ ಸೇರಿದಂತೆ ವಿವಿಧ ತಂಡಗಳ ವಿರುದ್ಧ ಅವರು ಉತ್ತಮ ಪ್ರದರ್ಶನ ನೀಡಿದ್ದರು.

ನಟರಾಜನ್ ಬೆಳೆಸಿದ ಪ್ರತಿಭೆ

ನಟರಾಜನ್ ಬೆಳೆಸಿದ ಪ್ರತಿಭೆ

ಈಗ ನಟರಾಜನ್ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಿದ್ದಾರೆ. ವಿಶೇಷವೆಂದರೆ ತಮ್ಮದೇ ಊರಿನ ಮತ್ತೊಬ್ಬ ಮಹತ್ವಾಕಾಂಕ್ಷಿ ಬೌಲರ್ ಪೆರಿಯಾಸ್ವಾಮಿ ಕ್ರಿಕೆಟ್‌ನಲ್ಲಿ ಅವಕಾಶ ಗಿಟ್ಟಿಸುವ ಭರವಸೆ ಕಳೆದುಕೊಂಡಿದ್ದಾಗ, ನಟರಾಜನ್ ಅವರ ಮನೆಗೆ ತೆರಳಿ ಕುಟುಂಬದವರೊಂದಿಗೆ ಮಾತನಾಡಿ ಅವರ ಮನವೊಲಿಸಿದ್ದರು. ಕ್ರಿಕೆಟ್‌ನಲ್ಲಿ ಆತನಿಗೆ ಉತ್ತಮ ಭವಿಷ್ಯ ಇದೆ ಎಂದು ಅವರಲ್ಲಿ ಸ್ಥೈರ್ಯ ಮೂಡಿಸಿದ್ದರು. ಪೆರಿಯಾಸ್ವಾಮಿ ಟಿಎನ್‌ಪಿಎಲ್‌ನಲ್ಲಿ ಆಡಿದ್ದಲ್ಲದೆ, ಈಗ ಕೆಕೆಆರ್ ತಂಡದ ನೆಟ್ ಪ್ರಾಕ್ಟೀಸ್ ಬೌಲರ್ ಆಗಿದ್ದಾರೆ. ನಟರಾಜನ್ ಅವರನ್ನು ಸ್ಫೂರ್ತಿಯನ್ನಾಗಿಸಿಕೊಂಡಿರುವ ಅನೇಕ ಕ್ರಿಕೆಟಗರು ಹಳ್ಳಿಗಳಲ್ಲಿ ಬೆಳೆಯುತ್ತಿದ್ದಾರೆ. ಅವರ ಮೊದಲ ಗುರಿ ಟಿಎನ್‌ಪಿಎಲ್. ಅಲ್ಲಿ ಗಮನ ಸೆಳೆದರೆ ಐಪಿಎಲ್ ಬಾಗಿಲು ತೆರೆಯುತ್ತದೆ ಎಂಬ ಭರವಸೆ.

ಗೆಳೆಯನಿಗೆ ಗೌರವ

ಗೆಳೆಯನಿಗೆ ಗೌರವ

ನಟರಾಜನ್‌ಗೆ ಆರೂ ಎಸೆತಗಳನ್ನು ಯಾರ್ಕರ್ ಎಸೆಯುವ ತಾಕತ್ತಿದೆ ಎನ್ನುತ್ತಾರೆ ನಟರಾಜನ್ ಅವರನ್ನು ಕ್ರಿಕೆಟ್ ವೃತ್ತಿಯಲ್ಲಿ ಮುಂದುವರಿಯಲು ಉತ್ತೇಜನ ನೀಡಿದ ಅವರ ಗೆಳೆಯ ಜಯಪ್ರಕಾಶ್. ಐಪಿಎಲ್‌ನಲ್ಲಿ ನಟರಾಜನ್ ಅವರ ಜೆರ್ಸಿ ನೋಡಿದರೆ ಈ ಗೆಳೆಯನಿಗೆ ಅವರು ನೀಡಿರುವ ಗೌರವ ಅರ್ಥವಾಗುತ್ತದೆ. ಏಕೆಂದರೆ ನಟರಾಜನ್ ಜೆರ್ಸಿಯಲ್ಲಿ ಇರುವ ಹೆಸರು 'ಜೆಪಿ ನಟ್ಟು'. ಜೆಪಿ ಎನ್ನುವುದು ಅವರ ಸ್ನೇಹಿತ ಜಯಪ್ರಕಾಶ್ ಹೆಸರಿನ ಸಂಕ್ಷಿಪ್ತ ರೂಪ.

ತಮ್ಮದೇ ಕ್ರಿಕೆಟ್ ಅಕಾಡೆಮಿ

ತಮ್ಮದೇ ಕ್ರಿಕೆಟ್ ಅಕಾಡೆಮಿ

ಈಗ ತಮ್ಮ ಊರಿನಲ್ಲಿಯೇ ಅವರು ಕ್ರಿಕೆಟ್ ಅಕಾಡೆಮಿ ಸ್ಥಾಪನೆ ಮಾಡಿದ್ದಾರೆ. ಟೆನ್ನಿಸ್ ಬಾಲ್ ಕ್ರಿಕೆಟ್ ಆಡುವ ಹುಡುಗರನ್ನು ಅಲ್ಲಿ ಕರೆದುಕೊಂಡು ಬಂದು ಲೆದರ್ ಬಾಲ್ ತರಬೇತಿ ನೀಡುತ್ತಿದ್ದಾರೆ. ಅದೂ ಉಚಿತವಾಗಿ. ಐಪಿಎಲ್‌ಗೆ ಆಯ್ಕೆಯಾದಾಗ ಸಿಕ್ಕ ಹಣದಲ್ಲಿ ಮೊದಲು ಮಾಡಿದ ಕೆಲಸವಿದು. ಲಾಕ್‌ಡೌನ್ ಅವಧಿಯಲ್ಲಿ ಕ್ರಿಕೆಟ್ ಚಟುವಟಿಕೆ ಇಲ್ಲದಿದ್ದಾಗ ತಮ್ಮದೇ ಅಕಾಡೆಮಿಯಲ್ಲಿ ಪಿಚ್ ಹದಗೊಳಿಸಿದರು. ತಾವೇ ನೀರು ಹೊತ್ತು ತಂದು ರೋಲರ್ ಓಡಿಸಿ ಅಭ್ಯಾಸ ಮಾಡಿಕೊಂಡರು. ನಟರಾಜನ್ ಪಟ್ಟ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತಿದೆ. ಅದೂ 29ನೇ ವಯಸ್ಸಿನಲ್ಲಿ.

Story first published: Thursday, October 1, 2020, 17:34 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X