"ಈ ಸಲ ಕಪ್ ನಮ್ದೇ" ಪ್ರತಿಯೊಬ್ಬ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗೂ ಈ ಘೋಷಣೆಗೂ ಅವಿನಾಭಾವ ಸಂಬಂಧ. ಎಷ್ಟೇ ಸೀಸನ್ ಬಂದರೂ ಈ ಘೋಷಣೆ ಮಾತ್ರ ನಿಲ್ಲುವುದಿಲ್ಲ, ಪ್ರತಿ ಬಾರಿಯೂ ಈ ಸಲ ಕಪ್ ನಮ್ದೆ, ಈ ಸಲ ಕಪ್ ನಮ್ದೆ ಎನ್ನುತ್ತಾರೆ ಬೆಂಗಳೂರು ಅಭಿಮಾನಿಗಳು. ಗಲ್ಲಿ ಕ್ರಿಕೆಟ್ ಆಡುವ ಚಿಕ್ಕ ಮಕ್ಕಳಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೂ ಸಹ ಈ ಸಲ ಕಪ್ ನಮ್ದೆ ಘೋಷಣೆ ಹರಿದಾಡಿದೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿ ಈಗಾಗಲೇ ಆರಂಭವಾಗಿದ್ದು ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ 2 ವಿಕೆಟ್ಗಳ ಗೆಲುವು ಸಾಧಿಸಿತ್ತು. ಈ ಗೆಲುವಿನ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ತಂಡ ಶುಭಾರಂಭ ಮಾಡಿತು.
ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಅಭಿಮಾನಿಗಳು 'ಮೊದಲನೇ ಪಂದ್ಯ ದೇವ್ರಿಗೆ' ಘೋಷಣೆ ಕೂಗದ ಹಾಗೆ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಬೆಂಗಳೂರು ತಂಡದ ಮೇಲಿನ ಕ್ರೇಜ್ ಮತ್ತಷ್ಟು ಹೆಚ್ಚಿದೆ. ಇಂದು ನಟಿ ಪ್ರಣೀತಾ ಸುಭಾಷ್ ಅವರು ಸಹ 'ಈ ಸಲ ಕಪ್ ನಮ್ದೇ ಆರ್ ಸಿ ಬಿ' ಎಂದು ಟ್ವೀಟ್ ಮಾಡುವ ಮೂಲಕ ಆರ್ ಸಿ ಬಿ ಮೇಲಿನ ತಮ್ಮ ಅಭಿಮಾನವನ್ನು ತೋರಿಸಿದ್ದಾರೆ. ಪ್ರಣೀತಾ ಮಾಡಿರುವ ಈ ಟ್ವೀಟ್ ಟ್ವಿಟರ್ ನಲ್ಲಿ ವೈರಲ್ ಆಗಿದೆ.