RCB vs LSG Eliminator: ಶತಕ ಬಾರಿಸಿ ತಂಡಕ್ಕೆ ನೆರವಾದ ಪಾಟಿದಾರ್‌ಗೆ ಕೊಹ್ಲಿ ಮೆಚ್ಚುಗೆ
By
oi-Srinivasa A
ಕಳೆದ ಮಾರ್ಚ್ ತಿಂಗಳ ಅಂತಿಮ ವಾರದಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮುಂದಿನ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ತೆರೆ ಬೀಳಲಿದೆ. ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಗೆದ್ದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದು, ಈ ಪಂದ್ಯದಲ್ಲಿ ಯಾವ ತಂಡ ಎದುರಾಳಿಯಾಗಲಿದೆ ಎಂಬ ಕುತೂಹಲ ಇದೀಗ ಮೂಡಿದೆ. ಶುಕ್ರವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲಲಿರುವ ತಂಡ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದುಕೊಳ್ಳಲಿದೆ.
ಇನ್ನು ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಬಳಗ ಕೆ ಎಲ್ ರಾಹುಲ್ ಬಳಗದ ವಿರುದ್ಧ 14 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಬಾರಿಸಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 208 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಆದರೆ, ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿ ಸೋಲನ್ನು ಅನುಭವಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ ಅವರ ವಿಕೆಟ್‌ನ್ನು ಮೊದಲನೇ ಓವರ್‌ನಲ್ಲಿಯೇ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಸಂದರ್ಭದಲ್ಲಿ ಕಣಕ್ಕಿಳಿದ ರಜತ್ ಪಾಟಿದಾರ್ ಇನ್ನಿಂಗ್ಸ್ ಮುಗಿಯುವವರೆಗೂ ಕಣದಲ್ಲಿದ್ದು ಅಬ್ಬರಿಸಿದರು. 49 ಎಸೆತಗಳಲ್ಲಿ 101 ರನ್ ಬಾರಿಸಿದ ಪಾಟಿದಾರ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ಲೇಆಫ್ ಸುತ್ತಿನಲ್ಲಿ ಅತಿವೇಗದ ಶತಕ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದರು. ಒಟ್ಟಾರೆ 54 ಎಸೆತಗಳನ್ನು ಎದುರಿಸಿದ ರಜತ್ ಪಾಟಿದಾರ್ 112 ರನ್ ಚಚ್ಚಿ ಅಜೇಯರಾಗಿ ಉಳಿದರು. ಒತ್ತಡದ ವೇಳೆ ಕಣಕ್ಕಿಳಿದ ಪಾಟಿದಾರ್ 12 ಬೌಂಡರಿ ಮತ್ತು 7 ಸಿಕ್ಸರ್ ಬಾರಿಸಿ ಅಬ್ಬರಿಸಿದರು. 207.41 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಇವರು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಸಹ ಭಾಜನರಾದರು. ಹೀಗೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಜತ್ ಪಾಟಿದಾರ್ ಕುರಿತು ಹಲವು ಹಿರಿಯ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಪಟಿದಾರ್ ಇನ್ನಿಂಗ್ಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಟಿದಾರ್ ರೀತಿಯ ಬ್ಯಾಟಿಂಗ್ ನೋಡಿಯೇ ಇಲ್ಲ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹಲವಾರು ಇನ್ನಿಂಗ್ಸ್‌ನ್ನು ನೋಡಿದ್ದೇನೆ ಎಂದು ಹೇಳಿಕೆ ನೀಡಿದ ವಿರಾಟ್ ಕೊಹ್ಲಿ ಇಂಥಹ ಇನ್ನಿಂಗ್ಸ್‌ನ್ನು ನೋಡಿಯೇ ಇಲ್ಲ ಎಂದು ಹೊಗಳಿದರು. ದೊಡ್ಡ ಪಂದ್ಯದಲ್ಲಿ ಒತ್ತಡದ ನಡುವೆ ಪಾಟಿದಾರ್ ಶತಕ ಬಾರಿಸಿದ ಮೊದಲ ಅನ್‌ಕ್ಯಾಪ್ಡ್ ಅಟಗಾರ ಎಂಬ ದಾಖಲೆ ಬರೆದಿದ್ದಾರೆ ಎಂದು ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೊಂಚ ಹಿನ್ನಡೆಯಾಯಿತು
ಇನ್ನೂ ಮುಂದವರೆದು ಮಾತನಾಡಿದ ವಿರಾಟ್ ಕೊಹ್ಲಿ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಆರಂಭಿಸಿದ ನಂತರ ತಂಡಕ್ಕೆ ಕೊಂಚ ಹಿನ್ನಡೆಯಾಗಿತ್ತು, ಆದರೆ ವನಿಂದು ಹಸರಂಗ, ಜೋಶ್ ಹೇಜಲ್‌ವುಡ್ ಮತ್ತು ಹರ್ಷಲ್ ಪಟೇಲ್ ಅವರ ಉತ್ತಮ ಬೌಲಿಂಗ್ ಪ್ರದರ್ಶನ ತಂಡಕ್ಕೆ ನೆರವಾಯಿತು ಎಂದು ವಿರಾಟ್ ಕೊಹ್ಲಿ ಬೌಲಿಂಗ್ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವತ್ತು ಈ ಆಟಗಾರನ ವಿಕೆಟ್ ಬೇಗ ಪಡ್ಕೊಂಡ್ರೆ RCB ಫೈನಲ್ ಗೇರೋದು ಗ್ಯಾರೆಂಟಿ | #cricket | Oneindia Kannada
ಸಾಧಾರಣ ರನ್ ಕಲೆಹಾಕಿದ ಕೊಹ್ಲಿ
ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 54 ಎಸೆತಗಳಲ್ಲಿ 73 ರನ್ ಬಾರಿಸಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಈ ಎಲಿಮಿನೇಟ್ ಪಂದ್ಯದಲ್ಲಿ 24 ಎಸೆತಗಳಿಗೆ ಕೇವಲ 25 ರನ್ ಕಲೆಹಾಕಿದರು. ಕಳೆದ ಪಂದ್ಯದಂತೆಯೇ ಈ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾದದ್ದಂತೂ ನಿಜ.