ಐಪಿಎಲ್ 2020ರ ಆವೃತ್ತಿಯಲ್ಲಿ ಕೇವಲ ಒಂದು ರನ್ಗಳಿಂದ ಕಿಂಗ್ಸ್ ಇಲೆವೆನ್ ಬ್ಯಾಟ್ಸ್ಮನ್ ಕ್ರಿಸ್ಗೇಲ್ ಶತಕ ವಂಚಿತರಾಗಿದ್ದಾರೆ. ಈ ಮೂಲಕ ಕಳೆದ ಸೀಸನ್ನಂತೆ ಮತ್ತೊಮ್ಮೆ ಶತಕ ವಂಚಿತರಾಗಿದ್ದಾರೆ.
ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪರ ನಾಯಕ ಕೆ.ಎಲ್ ರಾಹುಲ್ ಹಾಗೂ ಕ್ರಿಸ್ಗೇಲ್ ಭರ್ಜರಿ ಆಟವಾಡಿದ್ರು. ಮೊದಲ ಓವರ್ನಲ್ಲೇ ಮಂದೀಪ್ ಸಿಂಗ್ ಔಟಾದ ಬಳಿಕ ಕೆ.ಎಲ್ ರಾಹುಲ್ 46ರನ್ಗಳಿಸಿ ಔಟಾದ್ರು.
ಆದರೆ ಛಲಬಿಡದೆ ನಿಂತ ಯೂನಿವರ್ಸಲ್ ಬಾಸ್ ರಾಜಸ್ಥಾನ್ ರಾಯಲ್ಸ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. 19ನೇ ಓವರ್ನಲ್ಲಿ ಕಾರ್ತಿಕ್ ತ್ಯಾಗಿ ಬೌಲಿಂಗ್ನಲ್ಲಿ ವಿಶ್ವದಾಖಲೆಯ 1000ನೇ ಟಿ20 ಸಿಕ್ಸರ್ ಸಿಡಿಸಿದ್ದ ಕ್ರಿಸ್ಗೇಲ್ ನಂತರದ ಕೊನೆಯ ಓವರ್ನಲ್ಲಿ ಜೊಫ್ರಾ ಆರ್ಚರ್ಗೆ ಸಿಕ್ಸರ್ ಸಿಡಿಸಿ 99ರನ್ಗಳಿಗೆ ಬಂದು ನಿಂತರು. ಆದರೆ ನಂತರದ ಎಸೆತದಲ್ಲೇ ಜೊಫ್ರಾ ಯಾರ್ಕರ್ಗೆ ಬಲಿಯಾದರು. ಈ ಮೂಲಕ 63 ಎಸೆತಗಳಲ್ಲಿ 99 ರನ್ಗಳಿಗೆ ಕ್ರಿಸ್ಗೇಲ್ ಇನ್ನಿಂಗ್ಸ್ ಅಂತ್ಯವಾಯಿತು.
ಕ್ರಿಸ್ಗೇಲ್ ಅದ್ಭುತ ಇನ್ನಿಂಗ್ಸ್ನಲ್ಲಿ ಎಂಟು ಭರ್ಜರಿ ಸಿಕ್ಸರ್ ಮತ್ತು ಆರು ಬೌಂಡರಿಗಳಿದ್ದವು. ಆದರೆ 99ರನ್ಗೆ ಔಟಾದ ಕ್ರಿಸ್ಗೇಲ್ ಬ್ಯಾಟ್ ಬೀಸಿ ತಮ್ಮ ಆಕ್ರೋಶ ಹೊರಹಾಕಿದರು.
2019ರಲ್ಲಿ ಆರ್ಸಿಬಿ ವಿರುದ್ಧ ಅಜೇಯ 99ರನ್ಗಳಿಸಿ ಶತಕ ವಂಚಿತನಾಗಿದ್ದ ಗೇಲ್ 2020ರಲ್ಲಿ ಆರ್ಆರ್ ವಿರುದ್ಧ 99ರನ್ಗೆ ಔಟಾಗಿ ನಿರಾಸೆ ಮೂಡಿಸಿದ್ದಾರೆ. ಇನ್ನು ಈ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ ಇಶನ್ ಕಿಶನ್ ಕೂಡ 99ರನ್ಗೆ ಔಟಾಗಿದ್ದರು. ಐಪಿಎಲ್ ಇತಿಹಾಸದಲ್ಲಿ 99ರನ್ಗೆ ಔಟಾಗಿರುವ ವಿರಾಟ್ ಕೊಹ್ಲಿ, ಪೃಥ್ವಿ ಶಾ, ಇಶನ್ ಕಿಶನ್ ಲಿಸ್ಟ್ಗೆ ಇದೀಗ ಕ್ರಿಸ್ಗೇಲ್ ಕೂಡ ಸೇರಿಕೊಂಡಿದ್ದಾರೆ.