ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಕನ್ನಡ! ನೀಡುತ್ತಿದೆ ಹೊಸ ಸಂದೇಶ

By ಆನಂದ್ ಜಿ, ಬನವಾಸಿ ಬಳಗ
Star India rolls out Kannada commentary for Star Sports

ಕ್ರೀಡಾಭಿಮಾನಿಗಳು ಸದ್ಯ ರಷ್ಯಾದಲ್ಲಿ ನಡೆದಿರುವ ಫೀಫಾ ವಿಶ್ವಕಪ್ 2018 ಪಂದ್ಯಗಳನ್ನು ಸೋನಿ ಟಿವಿ ಸಮೂಹ ಸಂಸ್ಥೆ ವಾಹಿನಿಯಲ್ಲಿ ನೋಡುತ್ತಾ ಆನಂದಿಸುತ್ತಿದ್ದಾರೆ. ತಮಿಳು, ತೆಲುಗು ಭಾಷೆಯಲ್ಲಿ ಕಾಮೆಂಟ್ರಿ ಲಭ್ಯವಿದೆ. ಕನ್ನಡ ಕಾಮೆಂಟ್ರಿ ಕೇಳಿದರೆ ಚೆನ್ನ ಅಲ್ಲವೇ, ಇತ್ತೀಚೆಗೆ ಈ ಸೌಲಭ್ಯ ಸ್ಟಾರ್ ಸಮೂಹದ ಟಿವಿಗಳಲ್ಲಿ ಲಭ್ಯವಾಗಿದೆ. ಈ ಬಗ್ಗೆ ವಿಸ್ತೃತವಾದ ವರದಿ, ವಿವರಣೆ ಇಲ್ಲಿದೆ.

ಇದೀಗ ಸ್ಟಾರ್ ಸಮೂಹ ಸಂಸ್ಥೆಯ ಆಟಗಳಿಗೆಂದೇ ಮೀಸಲಾದ ಟಿವಿ ವಾಹಿನಿ, ಸ್ಟಾರ್ ಸ್ಪೋರ್ಟ್ಸ್ ತನ್ನ ನೋಡುಗರಿಗೆ ಕನ್ನಡದ ಆಯ್ಕೆ ನೀಡಿದೆ. ಹೌದು.. ಮೊನ್ನೆ ನಡೆದ ಭಾರತ ಆಫ್ಘಾನಿಸ್ಥಾನ್ ನಡುವಿನ ಟೆಸ್ಟ್ ಕ್ರಿಕೆಟ್ಟಿನ ಪ್ರಸಾರವು ಕನ್ನಡದಲ್ಲಿ ಕೂಡಾ ಪ್ರಸಾರವಾಯಿತು.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು

ಹೆಚ್ಚೆಚ್ಚು ಕನ್ನಡಿಗರು ಈ ಆಯ್ಕೆಯನ್ನು ಬಳಸಿದಲ್ಲಿ ಇದನ್ನು ಬೇರೆ ಕಾರ್ಯಕ್ರಮಗಳೂ, ಬೇರೆ ಬೇರೆ ವಾಹಿನಿಗಳೂ ಅನುಸರಿಸುತ್ತವೆ ಅನ್ನುವುದರಲ್ಲಿ ಸಂಶಯವಿಲ್ಲ. ಭಾರತೀಯ ಭಾಷೆಗಳಲ್ಲಿ ಇದುವರೆವಿಗೆ ಹಿಂದೀ ಮತ್ತು ತಮಿಳು ನುಡಿಗಳಲ್ಲಿ ಮಾತ್ರಾ ಇದ್ದ ಈ ವಾಹಿನಿ ಸದ್ಯದಲ್ಲೇ ಕನ್ನಡದಲ್ಲಿಯೂ ದೊರೆಯಲಿದೆ. ಇದೀಗ ಇರುವ ಇಂಗ್ಲೀಶ್ ಚಾನೆಲ್ಲಿನಲ್ಲೇ ಕನ್ನಡ ಭಾಷೆಯ ಆಯ್ಕೆ ದೊರೆಯುತ್ತಿದೆ.

ಪಂದ್ಯದ ಜತೆಗೆ ಜಗತ್ತಿನ ಮನಸ್ಸು ಗೆದ್ದ ಅಜಿಂಕ್ಯ ರಹಾನೆಪಂದ್ಯದ ಜತೆಗೆ ಜಗತ್ತಿನ ಮನಸ್ಸು ಗೆದ್ದ ಅಜಿಂಕ್ಯ ರಹಾನೆ

ಚಾನೆಲ್ಲುಗಳಲ್ಲಿ ಇರುವ ಭಾಷೆಯ ಆಯ್ಕೆಯ ಗುಂಡಿ ಒತ್ತಿದಾಗ ಕನ್ನಡವೂ ಒಂದು ಆಯ್ಕೆಯ ನುಡಿಯಾಗಿ ಕಾಣುತ್ತದೆ. ಅದನ್ನು ಆರಿಸಿಕೊಂಡರೆ ಕನ್ನಡದಲ್ಲೇ ವೀಕ್ಷಕ ವಿವರಣೆ ಮೂಡಿಬರುತ್ತದೆ. ಪೂರ್ಣ ಪ್ರಮಾಣದ ಕನ್ನಡ ವಾಹಿನಿಯ ಆರಂಭಕ್ಕಿದು ಮೊದಲ ಹೆಜ್ಜೆಯಾಗಿದೆ.

ಕನ್ನಡದ ಮಾರುಕಟ್ಟೆ ದೊಡ್ಡದಾಗಬೇಕಿದೆ

ಕನ್ನಡದ ಮಾರುಕಟ್ಟೆ ದೊಡ್ಡದಾಗಬೇಕಿದೆ

ಯಾವುದೇ ಸಂಸ್ಥೆಯ ಪರಮೋದ್ದೇಶವೇ ವ್ಯಾಪಾರ ಎನ್ನುವಾಗ ಕನ್ನಡದಲ್ಲಿ ವಾಹಿನಿಯನ್ನು ಶುರು ಮಾಡುವುದು ಲಾಭದಾಯಕ ಎನ್ನುವುದು ಅವಕ್ಕೆ ಮನವರಿಕೆಯಾಗಿರಲೇಬೇಕು. ಇದು ಯಾವುದೇ ಸಂಸ್ಥೆಯು ಕನ್ನಡದಲ್ಲಿ ಸೇವೆ, ಉತ್ಪನ್ನ ಒದಗಿಸಲು ಇರುವ ದೊಡ್ಡ ಕಾರಣವಾಗಿದೆ.

ಕನ್ನಡದ ಮಾರುಕಟ್ಟೆ ದೊಡ್ಡದಾಗಿದ್ದಲ್ಲಿ ಕನ್ನಡದಲ್ಲಿ ಸಕಲವೂ ದೊರೆಯುವ ಸಾಧ್ಯತೆಗಳು ಹೆಚ್ಚು. ಆದರೆ ಕನ್ನಡಕ್ಕಿಂತ ದೊಡ್ಡ ಮಾರುಕಟ್ಟೆಗಳು ಭಾರತದಲ್ಲಿ ಇನ್ನೂ ಅನೇಕವು ಇವೆ.

ಗ್ರಾಹಕಸೇವೆಯಲ್ಲಿ ಕನ್ನಡದಲ್ಲಿ ನೀಡಲು ಆಗ್ರಹ

ಗ್ರಾಹಕಸೇವೆಯಲ್ಲಿ ಕನ್ನಡದಲ್ಲಿ ನೀಡಲು ಆಗ್ರಹ

ಭಾರತದಲ್ಲಿಯೇ ಕನ್ನಡ ನುಡಿಯಾಡುಗರ ಎಣಿಕೆಗಿಂತ ಹೆಚ್ಚಿರುವ ಅನೇಕ ನುಡಿ ಸಮುದಾಯಗಳು ಇದ್ದಾಗಲೂ ಸ್ಟಾರ್ ಸ್ಪೊರ್ಟ್ಸ್ ಕನ್ನಡದಲ್ಲಿ ಯಾಕಾಗಿ ಈ ಸೇವೆ ಕೊಡಲು ಮುಂದಾಯಿತು ಎನ್ನುವುದನ್ನು ನಾವು ಯೋಚಿಸಬೇಕಿದೆ. ಇಂಥಾ ಬೆಳವಣಿಗೆಗೆ ಕನ್ನಡಿಗರಲ್ಲಿ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಜಾಗೃತಿ ಮುಖ್ಯವಾದ ಕಾರಣ ಎನ್ನಬಹುದು.

ಇಡೀ ಕರ್ನಾಟಕದ ತುಂಬೆಲ್ಲಾ "ಕನ್ನಡ ಅಸ್ಮಿತೆ"ಯದ್ದೇ ಮಾತು ಇತ್ತೀಚಿಗೆ. ಕನ್ನಡ ಗ್ರಾಹಕ ಕೂಟ, ಬನವಾಸಿ ಬಳಗ, ಅಂಗಡಿಯಲ್ಲಿ ಕನ್ನಡನುಡಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಗ್ರಾಹಕಸೇವೆಯಲ್ಲಿ ಕನ್ನಡವನ್ನು ಒತ್ತಾಯಿಸುತ್ತಿರುವುದೂ ಕೂಡಾ ಈ ಬೆಳವಣಿಗೆಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಕನ್ನಡ ಗಟ್ಟಿಯಾಗುವೆಡೆಗಿನ ಮಹತ್ವದ ಹೆಜ್ಜೆ

ಕನ್ನಡ ಗಟ್ಟಿಯಾಗುವೆಡೆಗಿನ ಮಹತ್ವದ ಹೆಜ್ಜೆ

ನುಡಿಯೊಂದು ಉಳಿದಿರುವುದು ಅಥವಾ ಅಳಿವಿನತ್ತ ಸಾಗುವುದು, ಆ ನುಡಿಯ ಬಳಕೆಯ ಸಾಧ್ಯತೆಗಳ ಮೇಲೆ ನಿಂತಿದೆ. ಕನ್ನಡವು ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ನಮಗೆ ಸಿಗುವಂತೆ ಇರುವಷ್ಟು ಹೊತ್ತೂ, ಕನ್ನಡಿಗರು ಬಳಸುತ್ತಿರುವಷ್ಟು ಹೊತ್ತೂ ನಮ್ಮ ನುಡಿ ಗಟ್ಟಿಯಾಗುತ್ತಾ ಸಾಗುತ್ತದೆ.

ಹಾಗಾಗಿ ಕನ್ನಡದಲ್ಲಿ ಸ್ಪೊರ್ಟ್ಸ್ ಚಾನೆಲ್ ಶುರುವಾಗುವುದು ನಮ್ಮ ನುಡಿಕಡತಕ್ಕೆ ಹೊಸ ಸೇರ್ಪಡೆ ಮತ್ತು ಕನ್ನಡ ಗಟ್ಟಿಯಾಗುವೆಡೆಗಿನ ಮಹತ್ವದ ಹೆಜ್ಜೆ. ಇದು ಎಲ್ಲಾ ಕನ್ನಡಿಗರ ಸಂಭ್ರಮಕ್ಕೆ ಕಾರಣವಾಗಬೇಕಾದ ಸಂಗತಿ. ಈ ಸಂಭ್ರಮ ಮೈಮರೆವಿಗೆ ಕಾರಣವಾಗದೆ ಮತ್ತಷ್ಟು ಎಚ್ಚರಕ್ಕೆ ಕಾರಣವಾಗಲಿ. ಯಾವುದೇ ಸಂಸ್ಥೆಯು ಕನ್ನಡದಲ್ಲಿ ಸೇವೆ ನೀಡಲು ಮುಂದಾದರೆ ಅದನ್ನು ನಾವು ಹೆಚ್ಚು ಹೆಚ್ಚು ಬಳಸಲು ಮುಂದಾಗಬೇಕಿದೆ.

ಕನ್ನಡದ ಆಯ್ಕೆ ಸಿಕ್ಕರೆ ಬಳಸಿ

ಕನ್ನಡದ ಆಯ್ಕೆ ಸಿಕ್ಕರೆ ಬಳಸಿ

ಯಾವುದೋ ಬ್ಯಾಂಕಿನ ATMನಲ್ಲಿಯೋ, ಚಲನ್ನುಗಳಲ್ಲೋ ಕನ್ನಡದ ಆಯ್ಕೆ ದೊರೆತರೆ.. ಯಾವುದೋ ಗ್ರಾಹಕ ಕರೆಯಲ್ಲಿ ಕನ್ನಡದ ಸೇವೆ ಸಿಕ್ಕರೆ, ಮೊಬೈಲ್ ಸೇವೆ, ಮೊಬೈಲ್ ಆಪ್, ವಿಮಾನದಲ್ಲಿ ಸೇವೆ, ವಿಮಾನದ ಮನೋರಂಜನೆಯಲ್ಲಿ ಸಿನಿಮಾಗಳು..

ಮೊದಲಾದವುಗಳಲ್ಲಿ ಕನ್ನಡದ ಆಯ್ಕೆ ಸಿಕ್ಕರೆ ನಾವುಗಳು ಅವುಗಳನ್ನೇ ಹೆಚ್ಚು ಹೆಚ್ಚು ಬಳಸಬೇಕು. ಆಯ್ಕೆಯನ್ನು ಬಳಸಿದಷ್ಟೂ ಹೆಚ್ಚು ಹೆಚ್ಚು ಕನ್ನಡದಲ್ಲಿ ಸೇವೆ ಸಿಗುತ್ತದೆ. ಬಳಸದೇ ಹೋದರೆ ಮುಂದಿನದಿನಗಳಲ್ಲಿ ಈಗ ಸೇವೆ ಕೊಡುವವರೂ ಕೈಬಿಡುತ್ತಾರೆ. ಮುಂದೆ ಬರುವವರೂ ಇರುವುದಿಲ್ಲ.

ಕನ್ನಡದಲ್ಲಿ ಬೇಕು ಎನ್ನುವ ದನಿಯೆತ್ತಬೇಕು

ಕನ್ನಡದಲ್ಲಿ ಬೇಕು ಎನ್ನುವ ದನಿಯೆತ್ತಬೇಕು

ಆರೂವರೆ ಕೋಟಿ ಜನಸಂಖ್ಯೆಯ ಕರ್ನಾಟಕ ರಾಜ್ಯ ಜನಸಂಖ್ಯೆಯ ದೃಷ್ಟಿಯಲ್ಲಿ ಜಗತ್ತಿನ 20ನೇ ದೊಡ್ಡ ನಾಡು. ಇರುವ 195 ದೇಶಗಳಲ್ಲಿ ಹೆಚ್ಚಿನ ದೇಶಗಳೆಲ್ಲಾ ಕರ್ನಾಟಕದ ಜನಸಂಖ್ಯೆಗಿಂತಲೂ ಕಡಿಮೆ ಜನಸಂಖ್ಯೆ ಹೊಂದಿವೆ. ಅಲ್ಲೆಲ್ಲೂ ಹೀಗೆ ಅವರ ನುಡಿಯಲ್ಲೊಂದು ಆಟದ ಸುದ್ದಿಗೇ ಮೀಸಲಾದ ಟಿವಿ ವಾಹಿನಿ ಶುರುವಾದೊಡನೆ ಹಿಗ್ಗಿ ಸಂಭ್ರಮಿಸುವ ಪರಿಸ್ಥಿತಿ ಇಲ್ಲ.

ಯಾಕೆಂದರೆ ಆ ನಾಡಗಳು ಅವೆಷ್ಟೇ ಕಡಿಮೆ ಜನಸಂಖ್ಯೆ ಹೊಂದಿದ್ದರೂ, ಅವೆಷ್ಟೇ ಅರ್ಥಿಕ ಬಡತನ ಹೊಂದಿದ್ದರೂ ತಮ್ಮ ತಮ್ಮ ನುಡಿಯಲ್ಲಿ ಸೇವೆಗಳನ್ನು, ಸವಲತ್ತುಗಳನ್ನು ಪಡೆಯುವಲ್ಲಿ ಕನ್ನಡನಾಡಿಗಿಂತ ಸಿರಿವಂತವಾಗಿವೆ.

ಇದು ಇಂದಿನ ವಾಸ್ತವ ಮತ್ತು ಈಗಾಗುತ್ತಿರುವುದು ಯಾವುದೋ ದೊಡ್ಡ ಕ್ರಾಂತಿಯಲ್ಲದೆ ಹಿಂದೆಂದೋ ಆಗಬೇಕಿದ್ದದ್ದು ತಡವಾಗಿ ಆಗಿದೆ, ಈ ಔತಣ ನಮಗೆ ಅತ್ತೂ ಕರೆದು ಸಿಗುತ್ತಿದೆ ಎನ್ನುವ ಅರಿವು ನಮಗಿರಬೇಕು. ಎಚ್ಚೆತ್ತ ಕನ್ನಡಿಗರು ಎಲ್ಲೆಡೆ ಎಲ್ಲ ಬಗೆಯ ಸೇವೆ ಸವಲತ್ತು ಸೌಕರ್ಯ ಪಡೆಯುವಾಗಲೂ ಕನ್ನಡದಲ್ಲಿ ಬೇಕು ಎನ್ನುವ ದನಿಯೆತ್ತಬೇಕು.. ಅಷ್ಟೇ!

Story first published: Sunday, June 17, 2018, 19:44 [IST]
Other articles published on Jun 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X