ಕೊಹ್ಲಿ ರಾಜೀನಾಮೆ ನೀಡಿ 2 ದಿನ ಕಳೆದ್ರೂ, ನಾವಿಕನೇ ಇಲ್ಲದೆ ನೌಕೆಯಂತಾಗಿದೆ ಭಾರತ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿದರು. ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್‌ಗೆ ರಾಜೀನಾಮೆ ನೀಡಿದ ಕೆಲವು ವಾರಗಳಲ್ಲೇ ಕೊಹ್ಲಿ ದೀರ್ಘ ಸ್ವರೂಪದ ಕ್ರಿಕೆಟ್ ನಾಯಕತ್ವವನ್ನ ಬಿಟ್ಟುಕೊಟ್ಟಿದ್ದಾರೆ.

2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂ.ಎಸ್‌ ಧೋನಿ ಸರಣಿ ಮಧ್ಯದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರು. ಈ ವೇಳೆ ಒಲಿದು ಬಂದ ನಾಯಕತ್ವವನ್ನ ಯಶಸ್ವಿಯಾಗಿ ಮುನ್ನಡೆಸಿದ್ದ ಕೊಹ್ಲಿ, ಭಾರತ ಟೆಸ್ಟ್ ಕ್ರಿಕೆಟ್‌ನ ಸಾರ್ವಕಾಲಿಕ ಬೆಸ್ಟ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ರು. 68 ಪಂದ್ಯಗಳಲ್ಲಿ ಭಾರತವನ್ನ ಮುನ್ನಡೆಸಿದ್ದು, ಇದರಲ್ಲಿ ಭಾರತ 40 ಪಂದ್ಯಗಳನ್ನ ಗೆದ್ದಿದ್ದು, 17 ಪಂದ್ಯಗಳಲ್ಲಿ ಸೋತಿದೆ ಮತ್ತು 11 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.

ಹೀಗೆ ಸಾರ್ವಕಾಲಿಕ ಬೆಸ್ಟ್ ನಾಯಕನನ್ನ ಕಳೆದುಕೊಂಡ ಭಾರತ, ನಾವಿಕನೇ ಇಲ್ಲದೆ ದೋಣಿಯಂತಾಗಿದೆ. ಆದ್ರೆ ಕೊಹ್ಲಿ ಹೊರ ನಡೆದ ಮೇಲೂ ಕೊಹ್ಲಿ ಜಾಗಕ್ಕೆ ಯಾವುದೇ ಹೆಸರನ್ನು ಚರ್ಚಿಸಲಾಗಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಸದ್ಯಕ್ಕೆ ರೋಹಿತ್ ಶರ್ಮಾ ಭಾರತೀಯ ಟೆಸ್ಟ್ ತಂಡದ ಉಪನಾಯಕರಾಗಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಕೊಹ್ಲಿ ಬದಲಿಗೆ ಮುಂದಿನ ಟೆಸ್ಟ್ ನಾಯಕನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಲು ಬಿಸಿಸಿಐಗೆ ಸಾಕಷ್ಟು ಸಮಯವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

"ವಿರಾಟ್ ಕೊಹ್ಲಿ ಸ್ಥಾನಕ್ಕೆ ಇನ್ನೂ ಯಾವುದೇ ಹೆಸರನ್ನು ಚರ್ಚಿಸಲಾಗಿಲ್ಲ. ರೋಹಿತ್ ಶರ್ಮಾ ಅವರು ತಂಡದ ಉಪನಾಯಕರಾಗಿದ್ದಾರೆ. ವಿರಾಟ್ ಕೊಹ್ಲಿ ಬದಲಿಗೆ ಯಾರನ್ನು ಟೆಸ್ಟ್ ನಾಯಕನನ್ನಾಗಿ ಮಾಡಬೇಕೆಂದು ನಿರ್ಧರಿಸಲು ಸಾಕಷ್ಟು ಸಮಯವಿದೆ, "ಎಂದು ಬಿಸಿಸಿಐ ಅಧಿಕಾರಿ ಎನ್‌ಡಿಟಿವಿ ಉಲ್ಲೇಖಿಸಿದ್ದಾರೆ.

ಶೀಘ್ರದಲ್ಲೇ ಟೀಂ ಇಂಡಿಯಾಗೆ ಹೊಸ ನಾಯಕನ ಘೋಷಣೆ
ವಿರಾಟ್ ಕೊಹ್ಲಿ ಬದಲಿಗೆ ಭಾರತ ಟೆಸ್ಟ್ ತಂಡದ ನಾಯಕನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಬಿಸಿಸಿಐ ಶೀಘ್ರದಲ್ಲೇ ಘೋಷಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತೀಯ ಹಿರಿಯ ಆಯ್ಕೆ ಸಮಿತಿ ಮಂಡಳಿ ಇನ್ನೂ ಆಯ್ಕೆಗಳ ಕುರಿತು ಚರ್ಚಿಸುತ್ತಿದ್ದಾರೆ ಸರಿಯಾದ ಸಮಯದಲ್ಲಿ ತನ್ನ ಅಂತಿಮ ಶಿಫಾರಸನ್ನು ನೀಡುತ್ತದೆ ಎಂದು ಹೇಳುವ ಮೂಲಕ ಅಧಿಕಾರಿ ತಮ್ಮ ಮಾತನ್ನ ಮುಗಿಸಿದ್ರು.

"ಬಿಸಿಸಿಐ ಆಯ್ಕೆಗಾರರು ಸರಿಯಾದ ಸಮಯದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆಯ್ಕೆದಾರರು ಎಲ್ಲಾ ನಿರ್ಧಾರವನ್ನ ಉದ್ದೇಶಪೂರ್ವಕವಾಗಿ ಮಾಡುತ್ತಾರೆ. ಆಯ್ಕೆ ಸಮಿತಿ ಅಂತಿಮ ಶಿಫಾರಸನ್ನು ನೀಡಲಿದೆ' ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಟೆಸ್ಟ್ ಸರಣಿ ಗೆದ್ದಿರುವ ಭಾರತ ಪರ ಕೊಹ್ಲಿ ನಾಯಕತ್ವದಲ್ಲಿ ಶೇಕಡಾ 58.82ರಷ್ಟು ಗೆಲುವಿನ ಸರಾಸರಿ ಹೊಂದಿದೆ. ಭಾರತ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ನಾಯಕನಾಗಿರುವ ವಿರಾಟ್ ಕೊಹ್ಲಿ, ವಿಶ್ವದಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಆಸ್ಟ್ರೇಲಿಯಾದ ಬೆಸ್ಟ್ ಕ್ಯಾಪ್ಟನ್ ರಿಕಿ ಪಾಂಟಿಂಗ್, ಸ್ಟೀವ್‌ ವ್ಹಾ ನಂತರದಲ್ಲಿ ಅತಿ ಹೆಚ್ಚು ಪಂದ್ಯ ಗೆಲ್ಲಿಸಿಕೊಟ್ಟ ನಾಯಕ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಜೊತೆಗೆ ಕೊಹ್ಲಿಯ ಸಾರಥ್ಯದಲ್ಲಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ನ ಫೈನಲ್‌ಗೆ ಭಾರತ ತಲುಪಿತು. ಭಾರತದ ಮುಂದಿನ ಟೆಸ್ಟ್ ಪಂದ್ಯವು 25 ಫೆಬ್ರವರಿ 2022 ರಂದು ಶ್ರೀಲಂಕಾ ತಂಡದ ವಿರುದ್ಧ ಪ್ರಾರಂಭವಾಗಲಿದೆ. ಈ ಟೆಸ್ಟ ಪಂದ್ಯ ವಿರಾಟ್‌ಗೆ 100ನೇ ಟೆಸ್ಟ್ ಪಂದ್ಯವಾಗಲಿದ್ದು, ಬೆಂಗಳೂರಿನಲ್ಲೇ ಪಂದ್ಯ ನಡೆಯುತ್ತಿರುವುದು ಅತ್ಯಂತ ವಿಶೇಷವಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, January 17, 2022, 17:28 [IST]
Other articles published on Jan 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X