ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!

T20 World cup: Form of these 5 India cricketers is major concern ahead of ICC T20 World Cup

14ನೇ ಆವೃತ್ತಿಯ ಐಪಿಎಲ್ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಯುಎಇನ ಮೂರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನಗಳು ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಮನರಂಜನೆ ನೀಡುತ್ತಿದೆ. ಈ ಸಂದರ್ಭದಲ್ಲಿ ಟಿ20 ವಿಶ್ವಕಪ್‌ನ ಆರಂಭಕ್ಕೆ ಕೂಡ ದಿನಗಣನೆ ಆರಂಭವಾಗಿದ್ದು ಐಪಿಎಲ್ ಟೂರ್ನಿಯ ಮುಕ್ತಾಯದ ಬಳಿಕ ಈ ಮಹತ್ವದ ಕ್ರಿಕೆಟ್ ವಿಶ್ವಕಪ್‌ಗೆ ಚಾಲನೆ ದೊರೆಯಲಿದೆ. ಆದರೆ ಈ ಸಂದರ್ಭದಲ್ಲಿ ಭಾರತದ ಕ್ರಿಕೆಟ್ ಅಭಿಮಾನಿಗಳು ಕೆಲ ಆಟಗಾರರ ಪ್ರದರ್ಶನದಿಂದ ಕಳವಳಗೊಂಡಿದ್ದಾರೆ.

ಈ ಬಾರಿಯ ಐಪಿಎಲ್ ಹಾಗೂ ಟಿ20 ವಿಶ್ವಕಪ್ ಯುಎಇನಲ್ಲಿ ನಡೆಯಲಿರುವ ಕಾರಣದಿಂದಾಗಿ ಕ್ರಿಕೆಟ್ ಆಟಗಾರರಿಗೆ ಉತ್ತಮ ಪೂರ್ವ ತಯಾರಿ ದೊರೆತಿದೆ. ಐಪಿಎಲ್‌ನಲ್ಲಿ ಭಾಗಿಯಾಗುತ್ತಿರುವ ಎಲ್ಲಾ ದೇಶಗಳ ಆಟಗಾರರಿಗೆ ಕೂಡ ಈ ಲಾಭ ದೊರೆಯುತ್ತಿದೆ. ಆದರೆ ಇಂತಾ ಸಂದರ್ಭದಲ್ಲಿ ಭಾರತೀಯ ತಂಡದ ಆಟಗಾರರು ಕೂಡ ಈ ಅವಕಾಶವನ್ನು ಅದ್ಭುತವಾಗಿ ಬಳಸಿಕೊಳ್ಳಬೇಕಾಗಿತ್ತು. ಈ ಮೂಲಕ ಮುಂಬರುವ ಟಿ20 ವಿಶ್ವಕಪ್‌ಗೆ ಹೆಚ್ಚಿನ ಅತ್ಮವಿಶ್ವಾಸದೊಂದಿಗೆ ತಯಾರಾಗಲು ಅವಕಾಶವಿದೆ.

ಡೆಲ್ಲಿ ವಿರುದ್ಧದ ಸಿಎಸ್‌ಕೆ ಸೋಲಿಗೆ ಕಾರಣ ಯಾರು ಎಂಬುದನ್ನು ಬಿಚ್ಚಿಟ್ಟ ಎಂಎಸ್ ಧೋನಿಡೆಲ್ಲಿ ವಿರುದ್ಧದ ಸಿಎಸ್‌ಕೆ ಸೋಲಿಗೆ ಕಾರಣ ಯಾರು ಎಂಬುದನ್ನು ಬಿಚ್ಚಿಟ್ಟ ಎಂಎಸ್ ಧೋನಿ

ಆದರೆ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾದ ಸದಸ್ಯರಾಗಿ ಆಯ್ಕೆಯಾಗಿರುವ ಪ್ರಮುಖ ಐವರು ಆಟಗಾರರು ಐಪಿಎಲ್‌ನಲ್ಲಿ ಸಂಪೂರ್ಣ ಮಂಕಾಗಿದ್ದಾರೆ. ಈ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರವಲ್ಲ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೂ ತಲೆ ನೋವಾಗಿದೆ. ಹಾಗಾದರೆ ಆ ಐವರು ಆಟಗಾರರು ಯಾರು? ಮುಂದೆ ಓದಿ..

1. ಆರ್ ಅಶ್ವಿನ್

1. ಆರ್ ಅಶ್ವಿನ್

ಈ ಬಾರಿಯ ಟಿ20 ವಿಶ್ವಕಪ್‌ನ ಸ್ಕ್ವಾಡ್‌ಗೆ ಅಚ್ಚರಿಯೆಂಬಂತೆ ಆಯ್ಕೆಯಾಗಿದ್ದರು ಆರ್ ಅಶ್ವಿನ್. ಸುದೀರ್ಘ ಕಾಲ ಅಂತಾರಾಷ್ಟ್ರೀಯ ಮಟ್ಟದ ಸೀಮಿತ ಓವರ್‌ಗಳ ತಂಡದಲ್ಲಿ ಆಡದ ಅಶ್ವಿನ್ ಇತ್ತೀಚಿನ ಐಪಿಎಲ್ ಆವೃತ್ತಿಗಳಲ್ಲಿ ನೀಡಿದ ಪ್ರದರ್ಶನದಿಂದಾಗಿ ಆಯ್ಕೆಗಾರರ ಗಮನಸೆಳೆದಿದ್ದರು. ಆರ್ ಅಶ್ವಿನ್ ಅನುಭವ ತಂಡಕ್ಕೆ ವಿಶ್ವಕಪ್‌ನಂತಾ ವೇದಿಕೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ವಿವರಿಸಿದ್ದರು. "ಆರ್ ಅಶ್ವಿನ್ ತಂಡಕ್ಕೆ ಆಸ್ತಿಯಿದ್ದಂತೆ, ಅವರು ಐಪಿಎಲ್ 2021ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರಂತಾ ಅನುಭವಿ ಆಟಗಾರನ ಅಗತ್ಯ ನಮಗಿದೆ. ವಾಶಿಂಗ್ಟನ್ ಸುಂದರ್ ಗಾಯಗೊಂಡಿರುವ ಕಾರಣದಿಂದಾಗಿ ನಮಗೋರ್ವ ಆಫ್ ಸ್ಪಿನ್ನರ್‌ನ ಅಗತ್ಯವೂ ಇದೆ. ನಮ್ಮ ಸ್ಕ್ವಾಡ್‌ನಲ್ಲಿರುವ ಏಕೈಕ ಆಫ್ ಸ್ಪಿನ್ನರ್ ಆರ್ ಅಶ್ವಿನ್" ಎಂದು ಈ ಆಯ್ಕೆಯನ್ನು ಸಮರ್ಥನೆ ಮಾಡಿಕೊಂಡಿದ್ದರು ಚೇತನ್ ಶರ್ಮಾ.

ಆದರೆ ಈ ಆಯ್ಕೆಯ ನಂತರ ನಡೆದ ಐಪಿಎಲ್‌ನ ಮುಂದುವರಿದ ಆವೃತ್ತಿಯ ಪಂದ್ಯಗಳಲ್ಲಿ ಅಶ್ವಿನ್ ಪ್ರದರ್ಶನ ಗಮನಾರ್ಹವಾಗಿಲ್ಲ. ಈವರೆಗೆ ಆಡಿದ 10 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈ ಅನುಭವಿ ಬೌಲರ್ ಪಡೆದಿರುವುದು ಕೇವಲ 5 ವಿಕೆಟ್ ಮಾತ್ರ. 7.2ರಷ್ಟು ಎಕಾನಮಿಯಲ್ಲಿ ಅಶ್ವಿನ್ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಈ ಪ್ರದರ್ಶನ ಮುಂದಿನ ಟಿ20 ವಿಶ್ವಕಪ್‌ನ ದೃಷ್ಟಿಯಿಂದ ಟೀಮ್ ಕಳವಳಗೊಳ್ಳುವಂತೆ ಮಾಡಿದೆ.

2. ಹಾರ್ದಿಕ್ ಪಾಂಡ್ಯ

2. ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತವಾದ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ. ತನ್ನ ಹಾರ್ಡ್ ಹಿಟ್ಟಿಂಗ್ ಸಾಮರ್ಥ್ಯ, ಫಿನಿಷರ್ ಆಗಿಯೂ ಕಾರ್ಯ ನಿರ್ವಹಿಸಬಲ್ಲ ಕಲೆ ಹಾಗೂ ಬೌಲಿಂಗ್‌ನ ಸಾಮರ್ಥ್ಯದಿಂದಾಗಿ ಹಾರ್ದಿಕ್ ತಂಡಕ್ಕೆ ಈವರೆಗೂ ಗಣನೀಯ ಕೊಡುಗೆ ನೀಡಿಕೊಂಡು ಬಂದಿದ್ದಾರೆ. ಸ್ಪೋಟಕವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯದಿಂದಾಗಿ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯವೂ ಪಾಂಡ್ಯಗಿದೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಮಂಕಾಗಿದ್ದಾರೆ.

ಟಿ20 ವಿಶ್ವಕಪ್‌ 2021: ಟೂರ್ನಿ ಆರಂಭಕ್ಕೂ ಮುನ್ನವೇ ದಾಖಲೆ ಬರೆದ ಭಾರತ vs ಪಾಕಿಸ್ತಾನ ಪಂದ್ಯ!

ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂತಾ ಪ್ರದರ್ಶನ ಹಾರ್ದಿಕ್ ಪಾಂಡ್ಯ ಬ್ಯಾಟ್‌ನಿಂದ ಸಿಡಿದಿಲ್ಲ. ಅಲ್ಲದೆ ಗಾಯದ ಕಾರಣದಿಂದಾಗಿ ಹಾರ್ದಿಕ್ ಈ ಬಾರಿಯ ಐಪಿಎಲ್‌ನಲ್ಲಿಯೂ ಬೌಲಿಂಗ್ ದಾಳಿ ನಡೆಸಿಲ್ಲ. ಹೀಗಾಗಿ ಹಾರ್ದಿಕ್ ಟಿ20 ವಿಶ್ವಕಪ್‌ನಲ್ಲಿಯೂ ಬೌಲಿಂಗ್ ನಡೆಸುವುದು ಬಹುತೇಕ ಅನುಮಾನ. ಹೀಗಾದಲ್ಲಿ ತಂಡದ ಸಂಯೋಜನೆಯೂ ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ 10 ಪಂದ್ಯಗಳನ್ನಾಡಿದ್ದು ಇದರಲ್ಲಿ ಕೇವಲ 112 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ. ಕೇವಲ 14ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಹಾರ್ದಿಕ್ ಪಾಂಡ್ಯ 114.28ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಪ್ರದರ್ಶನ ಸಹಜವಾಗಿಯೇ ಆತಂಕ ಮೂಡಿಸುವಂತಿದೆ.

3. ಇಶಾನ್ ಕಿಶನ್

3. ಇಶಾನ್ ಕಿಶನ್

2019ರ ಐಪಿಎಲ್ ಹಾಗೂ 2020ರ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದ ಆಟಗಾರ ಇಶಾನ್ ಕಿಶನ್ ಸ್ಥಿರವಾಗಿ ಬ್ಯಾಟಿಂಗ್ ನಡೆಸಿ ತಮ್ಮ ದೊಡ್ಡ ಹೊಡೆತಗಳ ಮೂಲಕ ಗಮನ ಸೆಳೆದಿದ್ದರು. ಈ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಕೂಡ ಸ್ಥಾನ ಪಡೆದ ಇಶಾನ್ ಕಿಶನ್ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದರು. ಬಳಿಕ ಇಶಾನ್ ಕಿಶನ್ ಟಿ20 ವಿಶ್ವಕಪ್‌ನ ತಂಡದಲ್ಲಿಯೂ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ ಈ ಬಾರಿಯ ಐಪಿಎಲ್‌ನ ಎರಡನೇ ಚರಣದ ಪಂದ್ಯದಲ್ಲಿ ಮಾತ್ರ ಇಶಾನ್ ಕಿಶನ್ ಸಂಪೂರ್ಣವಾಗಿ ವೈಫಲ್ಯವನ್ನು ಅನುಭವಿಸಿದ್ದಾರೆ. ಇಶಾನ್ ಕಿಶನ್ ನೀಡುತ್ತಿರುವ ಈ ಕಳಪೆ ಪ್ರದರ್ಶನದಿಂದಾಗಿ ಮುಂಬೈ ಇಂಡಿಯನ್ಸ್ ತಂಡ ಆಡುವ ಬಳಗದಿಂದಲೇ ಇಶಾನ್ ಕಿಶನ್‌ರನ್ನು ಹೊರಗಿಟ್ಟಿದ್ದು ಕಳೆದ ನಾಲ್ಕು ಪಂದ್ಯಗಳಲ್ಲಿ ಸೌರಭ್ ತಿವಾರಿಗೆ ಅವಕಾಶ ನೀಡಿದೆ.

ಇಶಾನ್ ಕಿಶನ್ ಈ ಬಾರಿಯ ಐಪಿಎಲ್‌ನಲ್ಲಿ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಆದರೆ ಗಳಿಸಿದ್ದು ಕೇವಲ 107 ರನ್ ಮಾತ್ರ. ಸರಾಸರಿ 13.37ರಷ್ಟು ಶೋಚನೀಯವಾಗಿದ್ದರೆ ಸ್ಟ್ರೈಕ್‌ರೇಟ್ 86.99ಕ್ಕೆ ಇಳಿದಿರುವುದು ಕಳಪೆ ಫಾರ್ಮ್‌ಗೆ ಸಾಕ್ಷಿಯಾಗಿದೆ. ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ಈ ಯುವ ಆಟಗಾರನ ಪ್ರದರ್ಶನ ನಿಜಕ್ಕೂ ಆಘಾತಕಾರಿಯಾಗಿದೆ.

4. ಭುವನೇಶ್ವರ್ ಕುಮಾರ್

4. ಭುವನೇಶ್ವರ್ ಕುಮಾರ್

ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಪರವಾಗಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ಹೊಂದಿದ್ದಾರೆ. ತನ್ನ ಸ್ವಿಂಗ್ ಎಸೆತದ ಮೂಲಹ ಹೊಸ ಚೆಂಡಿನಲ್ಲಿ ಎದುರಾಳಿಗಳಿಗೆ ಅಪಾಯಕಾರಿಯಾಗುವ ಸಾಮರ್ಥ್ಯ ಭುವಿಗಿದೆ. ಆದರೆ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಕಣಕ್ಕಿಳಿಯುತ್ತಿರುವ ಭುವನೇಶ್ವರ್ ಕುಮಾರ್ ಫಾರ್ಮ್ ಕೂಡ ಈಗ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಸನ್‌ರೈಸರ್ಸ್ ಹಯದರಾಬಾದ್ ಪರವಾಗಿ ಭುವನೇಶ್ವರ್ ಕುಮಾರ್ ಕಳೆದ 10 ಪಂದ್ಯಗಳಲ್ಲಿ ಕೇವಲ ಐದು ವಿಕೆಟ್ ಮಾತ್ರವೇ ಗಳಿಸಿದ್ದಾರೆ. ಭುವನೇಶ್ವರ್ ಎಕಾನಮಿ ರೇಟ್ ಕೂಡ 8ಕ್ಕಿಂತ ಹೆಚ್ಚಿದೆ. ನಿರ್ಣಾಯಕ ಹಂತದಲ್ಲಿ ತಮ್ಮ ತಂಡಕ್ಕೆ ವಿಕೆಟ್ ಗಳಿಸಿಕೊಡಲು ಭುವನೇಶ್ವರ್ ಕುಮಾರ್ ವಿಫಲವಾಗುತ್ತಿದ್ದಾರೆ. ಭಾರತೀಯ ಅನುಭವಿ ಆಟಗಾರನ ಈ ಪ್ರದರ್ಶನ ಕೂಡ ಟಿ20 ವಿಶ್ವಕಪ್‌ನ ಆರಂಭಕ್ಕೆ ಮುನ್ನ ಆತಂಕಕ್ಕೆ ಕಾರಣವಾಗಿದೆ.

5. ರಾಹುಲ್ ಚಹರ್

5. ರಾಹುಲ್ ಚಹರ್

ಈ ಬಾರಿಯ ಟಿ20 ವಿಶ್ವಕಪ್‌ನ ತಂಡಕ್ಕೆ ಅನುಭವಿ ಯುಜುವೇಂದ್ರ ಚಾಹಲ್ ಬದಲಿಗೆ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ ಯುವ ಸ್ಪಿನ್ನರ್ ರಾಹುಲ್ ಚಹರ್ ಅದ್ಭುತವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಲ್ಲದೆ ಚಾಹಲ್‌ಗಿಂತ ವೇಗವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ರಾಹುಲ್ ಚಹರ್ ಹೊಂದಿರುವ ಕಾರಣದಿಂದಾಗಿ ಯುಎಇಯ ಮೈದಾನದಲ್ಲಿ ತಂಡಕ್ಕೆ ಹೆಚ್ಚಿನ ಉಪಯುಕ್ತವಾಗಬಲ್ಲರು ಎಂಬ ಲೆಕ್ಕಾಚಾರದೊಂದಿಗೆ ರಾಹುಲ್ ಚಹರ್‌ಗೆ ಅವಕಾಶ ನೀಡಲಾಗಿದೆ ಎಂಬುದನ್ನು ಆಯ್ಕೆ ಮಂಡಳಿ ಕೂಡ ಬಹಿರಂಗ ಪಡಿಸಿತ್ತು. ಆದರೆ ಯುಎಇ ಚರಣದ ಐಪಿಎಲ್‌ನಲ್ಲಿ ಚಹರ್ ಈ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದಾರೆ. 11 ಪಂದ್ಯಗಳ್ನನು ಆಡಿರುವ ಚಹರ್ 13 ವಿಕೆಟ್ ಪಡೆದುಕೊಂಡಿದ್ದರಾದರೂ ರನ್‌ ನಿಯಂತ್ರಣದ ವಿಚಾರದಲ್ಲಿ ಚಹರ್ ಎಡವಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಲೋ ಸ್ಕೋರಿಂಗ್ ಪಂದ್ಯಗಳು ಸಾಮಾನ್ಯವಾಗಿರುವ ನಿರೀಕ್ಷೆಯ ಹಿನ್ನೆಲೆಯಲ್ಲಿ ರಾಹುಲ್ ಚಹರ್ 7.39ರಷ್ಟು ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವುದು ತಂಡಕ್ಕೆ ಹಿನ್ನಡೆಯಾಗಬಹುದು. ಟಿ20 ವಿಶ್ವಕಪ್‌ನಲ್ಲಿ ಇದು ತಂಡದ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುವ ಆತಂಕವೂ ಇದೆ. ಹೀಗಾಗಿ ರಾಹುಲ್ ಚಹರ್ ಪ್ರದರ್ಶನ ಕೂಡ ಸಾಕಷ್ಟು ಕಳವಳ ಮೂಡಿಸಿದೆ.

Story first published: Tuesday, October 5, 2021, 16:34 [IST]
Other articles published on Oct 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X