ಪ್ರತಿಸಲ ಭಾರತ ಗೆಲ್ಲುತ್ತದೆ ಎಂದೇನಿಲ್ಲ; ಭಾರತ vs ಪಾಕ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ಗಂಗೂಲಿ

ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳೆಲ್ಲಾ ಮುಗಿದಿದ್ದು ಇಂದಿನಿಂದ ( ಅಕ್ಟೋಬರ್ 23 ) ಸೂಪರ್ 12 ಹಂತ ಆರಂಭವಾಗುತ್ತಿದೆ. ಇಂದು 2 ಪಂದ್ಯಗಳು ನಡೆಯಲಿದ್ದು ಮಧ್ಯಾಹ್ನ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಣಸಾಡಲಿದ್ದರೆ, ಸಂಜೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ. ಇನ್ನು ಸೂಪರ್ 12 ಹಂತ ಇಂದು ಆರಂಭವಾಗುತ್ತಿದ್ದರೂ ಸಹ ಬಹುತೇಕ ಕ್ರಿಕೆಟ್ ಅಭಿಮಾನಿಗಳ ಚಿತ್ತ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ಪಂದ್ಯದ ಮೇಲಿದೆ.

ಹೌದು, ಸೂಪರ್ 12 ಸುತ್ತಿನಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಗ್ರೂಪ್ 2ರಲ್ಲಿದ್ದು ಟೂರ್ನಿಯಲ್ಲಿ ತಮ್ಮ ಮೊದಲನೇ ಪಂದ್ಯದಲ್ಲಿಯೇ ಮುಖಾಮುಖಿಯಾಗುತ್ತಿವೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೂಪರ್ 12 ಹಂತದ ಪಂದ್ಯ ಅಕ್ಟೋಬರ್ 24ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸೆಣಸಾಟ ಏರ್ಪಟ್ಟರೆ ಆ ಪಂದ್ಯದ ಕುರಿತು ಕ್ರಿಕೆಟ್ ಅಭಿಮಾನಿಗಳಲ್ಲಿ ಎಷ್ಟರ ಮಟ್ಟಿಗಿನ ಕುತೂಹಲ ಮತ್ತು ನಿರೀಕ್ಷೆಗಳು ಹುಟ್ಟುಕೊಳ್ಳುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ.

ಆಸ್ಟ್ರೇಲಿಯಾಗಿದೆ ಆ ತಂಡಗಳ ಹೊಡೆತ; ಕಪ್ ಗೆಲ್ಲಬಹುದಾದ 2 ಬಲಿಷ್ಠ ತಂಡಗಳಿವು: ಶೇನ್ ವಾರ್ನ್ಆಸ್ಟ್ರೇಲಿಯಾಗಿದೆ ಆ ತಂಡಗಳ ಹೊಡೆತ; ಕಪ್ ಗೆಲ್ಲಬಹುದಾದ 2 ಬಲಿಷ್ಠ ತಂಡಗಳಿವು: ಶೇನ್ ವಾರ್ನ್

ಕೇವಲ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪಂಡಿತರಿಗೂ ಕೂಡ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ವಿಶ್ವಕಪ್ ಹಣಾಹಣಿಯ ಮೇಲೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಇರುತ್ತವೆ. ಹೀಗಾಗಿಯೇ ಈ ಎರಡೂ ತಂಡಗಳ ನಡುವಿನ ಪಂದ್ಯದ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಈಗಾಗಲೇ ಚರ್ಚೆಗಳನ್ನು ನಡೆಸಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಸಾಲಿಗೆ ಇದೀಗ ಬಿಸಿಸಿಐನ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಸೇರಿಕೊಂಡಿದ್ದು ಈ ಕೆಳಕಂಡಂತೆ ತಮ್ಮ ಪಾಲಿನ ಅಭಿಪ್ರಾಯವನ್ನು ತಿಳಿಸಿದ್ದಾರೆ.

"ಭಾರತ ಗೆಲುವಿನ ಸರಪಳಿಯನ್ನು ಮುಂದುವರೆಸಲಿದೆ"

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಹಣಾಹಣಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 12-0 ಪಂದ್ಯಗಳಿಂದ ಮುನ್ನಡೆಯನ್ನು ಸಾಧಿಸಿದೆ. ಇದುವರೆಗೂ ಯಾವುದೇ ವಿಶ್ವಕಪ್ ಪಂದ್ಯದಲ್ಲಿಯೂ ಪಾಕಿಸ್ತಾನ ಭಾರತ ತಂಡವನ್ನು ಸೋಲಿಸಿಯೇ ಇಲ್ಲ. ಇದೇ ವಿಷಯದ ಕುರಿತು ಸೌರವ್ ಗಂಗೂಲಿ ಕೂಡ ಮಾತನಾಡಿದ್ದು ಭಾರತ ಈ ಬಾರಿಯ ಪಂದ್ಯವನ್ನು ಕೂಡ ಗೆಲ್ಲುವ ಮೂಲಕ ಪಾಕಿಸ್ತಾನದ ವಿರುದ್ಧದ ಗೆಲುವಿನ ಸರಪಳಿಯನ್ನು 13-0 ಮಾಡಿಕೊಳ್ಳುವ ಮೂಲಕ ಮುಂದುವರೆಸುವ ಸಾಧ್ಯತೆಗಳು ಹೆಚ್ಚಿವೆ ಎಂದಿದ್ದಾರೆ. ಭಾರತ ತಂಡದಲ್ಲಿರುವ ಎಲ್ಲ ಆಟಗಾರರೂ ಸಹ ಉತ್ತಮ ಪ್ರದರ್ಶನ ನೀಡುವ ಆಟಗಾರರಾಗಿದ್ದರು ಈ ಬಾರಿ ಟ್ರೋಫಿ ಗೆಲ್ಲುವ ನಿರೀಕ್ಷೆಯಿದೆ ಎಂದು ಗಂಗೂಲಿ ಹೇಳಿದ್ದಾರೆ.

"ಪಾಕಿಸ್ತಾನದ ಒಂದಿಬ್ಬರು ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಏನು ಬೇಕಾದರೂ ಆಗಬಹುದು"

ಭಾರತ ಮತ್ತು ಪಾಕಿಸ್ತಾನದ ವಿಶ್ವಕಪ್ ಹಣಾಹಣಿಯ ಕುರಿತು ಮಾತನಾಡಿರುವ ಸೌರವ್ ಗಂಗೂಲಿ ಪಾಕಿಸ್ತಾನ ತಂಡ ಕೂಡ ಉತ್ತಮ ಆಟಗಾರರಿಂದ ಕೂಡಿದೆ, ಪಾಕಿಸ್ತಾನದ ಯಾರಾದರೂ ಒಂದಿಬ್ಬರು ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಯಾವ ರೀತಿಯ ಫಲಿತಾಂಶ ಬೇಕಾದರೂ ಹೊರಬೀಳಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒತ್ತಡವನ್ನು ಎದುರಿಸಿ ಮಾನಸಿಕ ಕದನವನ್ನು ಗೆಲ್ಲುವುದು ಇಲ್ಲಿ ಬಹುಮುಖ್ಯವಾಗಲಿದೆ, ಖಂಡಿತವಾಗಿಯೂ ಈ ಪಂದ್ಯ ಒಂದೊಳ್ಳೆ ಹಣಾಹಣಿಯಾಗಲಿದೆ ಎಂಬ ನಂಬಿಕೆಯಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

Virat Kohliಗೆ‌ ಒಂದು ಕಿವಿಮಾತು ಹೇಳಿದ Sunil Gavaskar | Oneindia Kannada

"ಪ್ರತಿ ಬಾರಿಯೂ ಭಾರತವೇ ಗೆಲ್ಲುತ್ತದೆ ಎಂದೇನಿಲ್ಲ"

"ಪ್ರತಿ ಬಾರಿಯೂ ಭಾರತ ತಂಡವೇ ಗೆಲ್ಲಬೇಕು ಎಂದೇನಿಲ್ಲ. 2007 ಮತ್ತು 2011ರಲ್ಲಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದ ಭಾರತ 2003 ಮತ್ತು 2014ರಲ್ಲಿ ಫೈನಲ್ ಹಂತ ತಲುಪಿ ಸೋಲುಂಡಿತು. ಅಷ್ಟೇ ಅಲ್ಲದೆ 2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ಸೋತಿತ್ತು. ಭಾರತ ಕ್ರಿಕೆಟ್ ತಂಡ ಬಲಿಷ್ಠವಾಗಿದೆ, ಹೀಗಾಗಿಯೇ ಹೆಚ್ಚು ಫೈನಲ್ ಪಂದ್ಯಗಳನ್ನು ಆಡುವ ಅವಕಾಶ ತಂಡಕ್ಕೆ ಲಭಿಸುತ್ತಿದೆ. ಈ ಬಾರಿಯೂ ಕೂಡ ಅದೇ ರೀತಿಯ ಪ್ರದರ್ಶನವನ್ನು ತಂಡ ನೀಡಲಿದೆ ಎಂಬ ನಂಬಿಕೆ ಇದ್ದು ಏನಾಗುತ್ತದೆಯೋ ನೋಡೋಣ" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, October 23, 2021, 15:56 [IST]
Other articles published on Oct 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X