Kohli ನಾಯಕತ್ವ ಬಿಡುವ ಹಿಂದೆ ದೊಡ್ಡ ಮಾಸ್ಟರ್ ಪ್ಲಾನ್ ಇತ್ತಾ! | Oneindia Kannada
ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಹಾಗೂ ವಿವಾದಕ್ಕೆ ಈಡಾಗಿರುವ ಆಟಗಾರ ಯಾರು ಎಂದರೆ ಎಲ್ಲರ ಬಾಯಲ್ಲಿಯೂ ಬರುವ ಏಕೈಕ ಉತ್ತರವೆಂದರೆ ಅದು ವಿರಾಟ್ ಕೊಹ್ಲಿ. ಹೌದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಗೀಡಾಗುತ್ತಿದ್ದು ಹೆಚ್ಚಾಗಿ ವಿವಾದಗಳೇ ಎದುರಾಗುತ್ತಿವೆ. ಇನ್ನು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂತಿಮ ಏಕದಿನ ಪಂದ್ಯದಲ್ಲಿಯೂ ಕೂಡ ವಿರಾಟ್ ಕೊಹ್ಲಿ ವಿವಾದವೊಂದಕ್ಕೆ ಸಿಲುಕಿದ್ದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿದಾಗ ಅನುಷ್ಕಾ ಶರ್ಮಾ ತಮ್ಮ ಮಗಳಾದ ವಾಮಿಕಾಳನ್ನು ಪೆವಿಲಿಯನ್ ಬಳಿ ಕರೆತಂದಿದ್ದರು. ಈ ಸಂದರ್ಭದಲ್ಲಿ ವಾಮಿಕಳ ಚಿತ್ರ ಹಾಗೂ ವಿಡಿಯೋಗಳು ಕ್ಯಾಮೆರಾ ಕಣ್ಣಿಗೆ ಸಿಕ್ಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಈ ಕುರಿತಾಗಿ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ ಮಗಳ ಚಿತ್ರಗಳನ್ನು ಶೇರ್ ಮಾಡಬೇಡಿ ಎಂದು ಹೇಳಿಕೆ ನೀಡುವುದರ ಮೂಲಕ ಭಾರಿ ಟೀಕೆ ಹಾಗೂ ವಿರೋಧವನ್ನು ಎದುರಿಸಿದರು.
ಇವರು ಸರಣಿಯಲ್ಲಿ ಇಲ್ಲದೇ ಇದ್ದುದರಿಂದ ದ.ಆಫ್ರಿಕಾ ವಿರುದ್ಧ ಸೋಲಬೇಕಾಯಿತು ಎಂದ ದ್ರಾವಿಡ್!
ಇನ್ನು ಇದಕ್ಕೂ ಮುನ್ನ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಸರಣಿ ಮುಗಿದ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಹೀಗೆ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ನಾಯಕತ್ವವನ್ನು ಕಳೆದುಕೊಂಡು ಕೇವಲ ಓರ್ವ ಆಟಗಾರನಾಗಿ ಮಾತ್ರ ತಂಡದಲ್ಲಿ ಉಳಿದುಕೊಂಡರು. ಹೌದು, ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಸ್ವಇಚ್ಛೆಯಿಂದ ತ್ಯಜಿಸಿದ ವಿರಾಟ್ ಕೊಹ್ಲಿ ನಂತರ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲ್ಪಟ್ಟರು. ಹೀಗೆ ಏಕದಿನ ನಾಯಕತ್ವವನ್ನು ಕಳೆದುಕೊಂಡ ವಿರಾಟ್ ಕೊಹ್ಲಿ ನಂತರ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಬಿಸಿಸಿಐಗೆ ಪರೋಕ್ಷವಾಗಿ ಟಾಂಗ್ ನೀಡುವಂಥ ಉತ್ತರಗಳನ್ನು ನೀಡಿದರು.
ಕೆಎಲ್ ರಾಹುಲ್ಗೆ ಮತ್ತೆ ನಾಯಕತ್ವ; ಸುಳಿವು ಕೊಟ್ಟ ಕೋಚ್ ರಾಹುಲ್ ದ್ರಾವಿಡ್
ಹೌದು, ಮೊದಲಿಗೆ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾದಾಗ ಬಿಸಿಸಿಐ ವಿರೋಧ ವ್ಯಕ್ತಪಡಿಸಿತ್ತು ಎಂಬ ಹೇಳಿಕೆಯನ್ನು ನೀಡಿದ್ದರು. ಆದರೆ ಗಂಗೂಲಿಯ ಈ ಹೇಳಿಕೆಗಳನ್ನು ತಳ್ಳಿ ಹಾಕಿದ ವಿರಾಟ್ ಕೊಹ್ಲಿ ತಾನು ನಾಯಕತ್ವವನ್ನು ತ್ಯಜಿಸಲು ಮುಟ್ಟಾದಾಗ ಬಿಸಿಸಿಐನಿಂದ ಯಾವುದೇ ರೀತಿಯ ವಿರೋಧ ಬರಲಿಲ್ಲ ಎಂದು ನೇರವಾಗಿ ಹೇಳುವುದರ ಮೂಲಕ ಬಿಸಿಸಿಐ ಮತ್ತು ತನ್ನ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಜನರಿಗೆ ತಿಳಿಯುವಂತೆ ಮಾಡಿದರು. ಇನ್ನು ವಿರಾಟ್ ಕೊಹ್ಲಿ ಹೇಳಿಕೆ ನಂತರ ಬಿಸಿಸಿಐ ಹಾಗೂ ಸೌರವ್ ಗಂಗೂಲಿ ವಿರುದ್ಧ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಕಿಡಿಕಾರಿದರು. ಬೇಕಂತಲೇ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದು ಹಾಕಿದೆ ಎಂಬ ಆರೋಪವನ್ನು ಮಾಡತೊಡಗಿದ್ದರು. ಇದೀಗ ಈ ಕುರಿತಾಗಿಯೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಮಾತನಾಡಿದ್ದು, ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.
ಕೊಹ್ಲಿ ತಾನಾಗೇ ನಾಯಕತ್ವ ಬಿಡಲಿಲ್ಲ
ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನ ನಂತರ ಟೀಮ್ ಇಂಡಿಯಾ ಕುರಿತು ಮಾತನಾಡಿರುವ ಶೋಯಬ್ ಅಖ್ತರ್ ತಂಡದಲ್ಲಿ ಮನಸ್ತಾಪವಿದೆ ಹಾಗೂ ಬಿರುಕುಗಳು ಮೂಡಿವೆ ಎಂದಿದ್ದಾರೆ. ವಿರಾಟ್ ಕೊಹ್ಲಿ ವಿಚಾರದಲ್ಲಿ ಕೂಡ ಇದೇ ರೀತಿ ನಡೆದಿದ್ದು, ಕೊಹ್ಲಿ ತಾನಾಗಿಯೇ ನಾಯಕತ್ವವನ್ನು ಬಿಡಲಿಲ್ಲ ಬದಲಾಗಿ ಕೊಹ್ಲಿ ರಾಜೀನಾಮೆ ಸಲ್ಲಿಸುವಂತೆ ವಾತಾವರಣವನ್ನು ತಂಡದೊಳಗೆ ರಚಿಸಲಾಯಿತು ಹಾಗೂ ಕೊಹ್ಲಿ ರಾಜೀನಾಮೆ ಸಲ್ಲಿಸಲು ಹಲವಾರು ಕಾರಣಗಳಿವೆ ಆದರೆ ಅದನ್ನು ಗೌಪ್ಯತೆಯ ಕಾರಣದಿಂದಾಗಿ ನಾನು ತಿಳಿಸಲಾಗುವುದಿಲ್ಲ ಎಂದು ಶೋಯಬ್ ಅಖ್ತರ್ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಟೀಮ್ ಇಂಡಿಯಾಗೆ ಅವಮಾನ
ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ನೀಡಿರುವ ಪ್ರದರ್ಶನ ತೀರಾ ಕಳಪೆ ಮಟ್ಟದ್ದಾಗಿದೆ ಎಂದಿರುವ ಶೋಯಬ್ ಅಕ್ತರ್ ಅದರಲ್ಲಿಯೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿರುವುದು ಭಾರತ ಕ್ರಿಕೆಟ್ಗೆ ಅವಮಾನವಾಗಿದೆ ಎಂದಿದ್ದಾರೆ.
ಈ ಸಮಸ್ಯೆ ಬಗೆಹರಿಯಬೇಕಿದೆ
ಇನ್ನೂ ಮುಂದುವರೆದು ಮಾತನಾಡಿರುವ ಶೋಯಬ್ ಅಖ್ತರ್ ಬಿಸಿಸಿಐ, ಭಾರತ ತಂಡದ ಕೋಚ್ ಹಾಗೂ ಭಾರತ ತಂಡದ ನಾಯಕ ಒಂದೆಡೆ ಸೇರಿ ಈ ಸಮಸ್ಯೆಗಳ ಕುರಿತು ಚರ್ಚಿಸಬೇಕಿದೆ. ಹೀಗೆ ಚರ್ಚೆ ನಡೆಸುವುದರಿಂದ ತಂಡದಲ್ಲಿ ಉಂಟಾಗಿರುವ ಬಿರುಕನ್ನು ಸರಿಪಡಿಸಿಕೊಂಡು ಉತ್ತಮ ಪ್ರದರ್ಶನವನ್ನು ನೀಡಬಹುದು ಎಂದು ಶೋಯಬ್ ಅಖ್ತರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed