ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಗೆ ಮತ್ತು ಟೀಕೆಗೊಳಗಾಗಿರುವ ಆಟಗಾರ ಯಾರು ಎಂದರೆ ಎಲ್ಲರ ಬಾಯಲ್ಲಿಯೂ ಬರುವ ಏಕೈಕ ಉತ್ತರ ವಿರಾಟ್ ಕೊಹ್ಲಿ ಎಂದು. ಹೌದು, ಕಳೆದ ವರ್ಷ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಸ್ವಇಚ್ಛೆಯಿಂದ ತ್ಯಜಿಸಿದ ವಿರಾಟ್ ಕೊಹ್ಲಿ ನಂತರ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲ್ಪಟ್ಟರು. ಹೀಗೆ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ ಬಿಸಿಸಿಐ ವಿರುದ್ಧವಾಗಿ ಹೇಳಿಕೆಗಳನ್ನು ನೀಡುವುದರ ಮೂಲಕ ಭಾರೀ ವಿವಾದ ಹಾಗೂ ಟೀಕೆಗಳಿಗೆ ಒಳಗಾದರು.
ಹೀಗೆ ಕಳೆದ ವರ್ಷ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ ಈ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಮುಕ್ತಾಯಗೊಂಡ ಟೆಸ್ಟ್ ಸರಣಿ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಕೂಡ ರಾಜೀನಾಮೆಯನ್ನು ಸಲ್ಲಿಸಿದರು. ಹೀಗೆ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜಿನಾಮೆಯನ್ನು ನೀಡಲು ಬಿಸಿಸಿಐ ಕಾರಣ ಎಂಬ ಮಾತುಗಳು ಕೂಡ ಹರಿದಾಡಿದವು. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿಯನ್ನು ಎಲ್ಲಾ ಮಾದರಿಯ ನಾಯಕತ್ವದಿಂದಲೂ ಕೂಡ ಷಡ್ಯಂತ್ರವನ್ನು ನಡೆಸಿ ಕೆಳಗಿಳಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು.
ನಾಯಕತ್ವ ತ್ಯಜಿಸಿದ ಕುರಿತು ಒಂದೆಡೆ ವಿವಾದಕ್ಕೆ ಒಳಗಾದರೆ, ಮತ್ತೊಂದೆಡೆ ವಿರಾಟ್ ಕೊಹ್ಲಿ ಈ ಹಿಂದಿನ ರೀತಿ ಬ್ಯಾಟ್ ಬೀಸುತ್ತಿಲ್ಲ, ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಳಪೆಯಾಗುತ್ತಿದೆ ಎಂಬೆಲ್ಲಾ ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ಜತೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಏಕದಿನ ಪಂದ್ಯದಲ್ಲಿ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರ ಕುರಿತು ಬೇಸರ ವ್ಯಕ್ತಪಡಿಸಿದ ಕೊಹ್ಲಿ ಮತ್ತೊಮ್ಮೆ ಟೀಕೆಗೊಳಗಾದರು. ಹೀಗೆ ಕಳೆದೆರಡು ವರ್ಷಗಳಿಂದ ಸಾಲುಸಾಲಾಗಿ ಟೀಕೆಗಳಿಗೆ ಒಳಗಾಗಿರುವ ವಿರಾಟ್ ಕೊಹ್ಲಿ ಒತ್ತಡದಲ್ಲಿ ಸಿಲುಕಿರುವುದಂತು ನಿಜ. ಹೀಗೆ ಒತ್ತಡಕ್ಕೆ ಸಿಲುಕಿರುವ ವಿರಾಟ್ ಕೊಹ್ಲಿ ಕುರಿತು ಭಾರತದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಮಾತನಾಡಿದ್ದು ಈ ಕೆಳಕಂಡಂತೆ ಸಲಹೆಗಳನ್ನು ನೀಡಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಬಿಟ್ಟು ದೂರ ಉಳಿಯಲಿ ಎಂದ ರವಿಶಾಸ್ತ್ರಿ
ಕೊಹ್ಲಿಗೆ ಈಗ 33 ವರ್ಷ. ಹೀಗಾಗಿ ಆತ ಇನ್ನೂ ಐದಾರು ವರ್ಷಗಳ ಕಾಲ ಕ್ರಿಕೆಟ್ ಆಡಬಹುದಾಗಿದ್ದು, ಈ ಕುರಿತಾಗಿ ಆತ ಯೋಚಿಸಬೇಕಿದೆ. ಹಾಗೂ ಇನ್ನೂ ದೊಡ್ಡ ಸಮಯವಿರುವ ಕಾರಣ ವಿರಾಟ್ ಕೊಹ್ಲಿ 3 ತಿಂಗಳುಗಳ ಕಾಲ ಕ್ರಿಕೆಟ್ ಬಿಟ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ರವಿ ಶಾಸ್ತ್ರಿ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಯಾವುದಾದರೊಂದು ಸರಣಿಯಿಂದ ಹೊರಗುಳಿದು ವಿಶ್ರಾಂತಿಯನ್ನು ಪಡೆದು ಮತ್ತೆ ತಂಡಕ್ಕೆ ಮರಳಲಿ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ಕೊಹ್ಲಿ ಅಪ್ಪಟ ರಾಜನಂತೆ ಬ್ಯಾಟ್ ಬೀಸಬೇಕು
ಹೀಗೆ ವಿರಾಟ್ ಕೊಹ್ಲಿ ಸುಮಾರು 3 ತಿಂಗಳುಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಹೇಳಿಕೆ ನೀಡಿರುವ ರವಿಶಾಸ್ತ್ರಿ ಕೊಹ್ಲಿ ವಿಶ್ರಾಂತಿ ಮುಗಿಸಿ ಮತ್ತೆ ತಂಡ ಸೇರಿದ ನಂತರ ಮೂರ್ನಾಲ್ಕು ವರ್ಷಗಳ ಕಾಲ ಅಪ್ಪಟ ರಾಜನಂತೆ ಕ್ರಿಕೆಟ್ ಆಡಬೇಕು ಎಂದಿದ್ದಾರೆ. ವಿರಾಟ್ ಕೊಹ್ಲಿ ಸಾಮರ್ಥ್ಯವೇನು ಎಂಬುದು ಎಲ್ಲರಿಗೂ ತಿಳಿದೇ ಇದೆ, ಆತನ ಕರ್ತವ್ಯವನ್ನು ಆತ ಮೊದಲಿನಂತೆ ಮುಂದುವರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು. ಇಂತಹ ಉನ್ನತ ಸ್ಥಾನದಲ್ಲಿ ಕೊಹ್ಲಿಯನ್ನು ನೋಡಲು ನಾನು ಇಚ್ಛಿಸುತ್ತೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
Shikhar Dhawan ಕೆನ್ನೆಗೆ ಹೊಡೆದು ಅವಮಾನ ಮಾಡಿದ್ದು ಯಾರು? | Oneindia Kannada
ನಾಯಕತ್ವದ ಒತ್ತಡವಿಲ್ಲದೇ ವಿರಾಟ್ ಅಬ್ಬರಿಸಲಿದ್ದಾರಾ?
ಇನ್ನು ಒತ್ತಡಕ್ಕೊಳಗಾಗಿರುವ ವಿರಾಟ್ ಕೊಹ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯತೆ ಕಡಿಮೆ ಇದೆ ಎನ್ನಬಹುದು. ಏಕೆಂದರೆ ಈಗಾಗಲೇ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ನಾಯಕತ್ವವನ್ನು ತ್ಯಜಿಸಿರುವುದರಿಂದ ತನ್ನ ಹೆಗಲ ಮೇಲಿದ್ದ ದೊಡ್ಡ ಜವಾಬ್ದಾರಿಯನ್ನು ಕಳೆದುಕೊಂಡಿದ್ದು ವಿಶ್ರಾಂತಿ ಬೇಕೇ ಬೇಕೆಂಬ ಅನಿವಾರ್ಯತೆಯಿಲ್ಲ. ಅದರಲ್ಲಿಯೂ ಟೀಮ್ ಇಂಡಿಯಾದ ಸರಣಿಗಳ ನಡುವೆ ಸಾಕಷ್ಟು ದಿನಗಳ ಅಂತರಗಳಿದ್ದು ವಿರಾಟ್ ಕೊಹ್ಲಿಗೆ ಪ್ರತ್ಯೇಕವಾಗಿ ವಿಶ್ರಾಂತಿ ಬೇಕಿಲ್ಲ ಎನ್ನಬಹುದು.