|
ಮೂಳೆ ಮುರಿದರೂ ಕುಗ್ಗದ ಆತ್ಮವಿಶ್ವಾಸ
2016ರಲ್ಲಿ ಮೋಟಾರ್ ಸ್ಪೋರ್ಟ್ಸ್ ಅಖಾಡಕ್ಕೆ ಧುಮುಕಿದ ಯುವ ಪ್ರತಿಭೆ ಐಶ್ವರ್ಯ, ಮೊದಲ ಪ್ರಯತ್ನದಲ್ಲೇ ಪ್ರತಿಷ್ಠಿತ ದಕ್ಷಿಣ್ ಡೇರ್ ರಾಲಿಯ ಮಹಿಳಾ ವಿಭಾಗದ ಚಾಂಪಿಯನ್ ಎನಿಸಿದರು. ಅಂದಿನಿಂದ ಇಂದಿನವರೆಗೂ ಐಶ್ವರ್ಯ ನಡೆದು ಬಂದ ಹಾದಿ ಭಾರತೀಯ ಮೋಟಾರ್ ಸ್ಪೋಟ್ಸ್ನಲ್ಲಿ ಇತಿಹಾಸದಲ್ಲಿ ನವ ಅಧ್ಯಾಯವಾಗಿದೆ. 2017ರಲ್ಲಿ ಅಪಘಾತವೊಂದರಲ್ಲಿ ಐಶ್ವರ್ಯ ಅವರ ಭುಜದ ಮೂಳೆ ಮುರಿದಿತ್ತು. ಆದರೂ, ರಾಷ್ಟ್ರೀಯ ರೋಡ್ ರೇಸಿಂಗ್ ಚಾಂಪಿಯನ್ಷಿಪ್ ಹತ್ತಿರವಿದ್ದ ಕಾರಣ ಕೇವಲ 2 ವಾರಗಳ ಅಂತರದಲ್ಲಿ ಚೇತರಿಸಿ ಕಾಲರ್ ಬೋನ್ಗೆ 7 ಸ್ಕ್ರೂ ಹಾಕಿರುವ ನೋವಿನ ನಡುವೆಯೂ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಪಡೆದು ಸಮಗ್ರ ವಿಭಾಗದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದರು. ರಾಷ್ಟ್ರೀಯ ರೋಡ್ರೇಸಿಂಗ್ ಮತ್ತು ನ್ಯಾಷನಲ್ ಕ್ರಾಸ್ಕಂಟ್ರಿ ರಾಲಿ ಚಾಂಪಿಯನ್ಷಿಪ್ ಎರಡರಲ್ಲೂ ಒಂದೇ ವರ್ಷ ಚಾಂಪಿಯನ್ ಪಟ್ಟ ಪಡೆದು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿದ್ದರು. ಇದಾದ ಎರಡು ವರ್ಷಗಳ ತರುವಾಯ ವಿಶ್ವಕಪ್ ಗೆದ್ದು ಇತಿಹಾಸ ವರೆದಿದ್ದಾರೆ.
ಮಾಡೆಲಿಂಗ್ನಲ್ಲೂ ರಂಗು
ಕನ್ನಡತಿ ಐಶ್ವರ್ಯ, ಬೈಕ್ ರೇಸಿಂಗ್ನಲ್ಲಿ ವೃತ್ತಿಬದುಕು ರೂಪಿಸಿಕೊಳ್ಳುವುದಕ್ಕು ಮುನ್ನ ಮಾಡೆಲಿಂಗ್ನಲ್ಲೂ ಮಿಂಚಿದ್ದರು. 5.9 ಅಡಿ ಎತ್ತರದ ಚೆಲುವೆ ಪ್ರತಿಷಿತ ಬ್ರಾಂಡ್ಗಳಾದ ಮೋರ್ಗಾ, ಝಾರಾ ಹಾಗೂ ಕ್ಯಾಸಾಪಿಕಾಸದಲ್ಲಿ ರೂಪದರ್ಶಿಯಾಗಿ ಕಂಗೊಳಿಸಿದ್ದರು. ಬಹುಮುಖ ಪ್ರತಿಭೆಯಾಗಿರುವ ಐಶ್ವರ್ಯ ಫ್ಯಾಷನ್ ಡಿಸೈನಿಂಗ್ನಲ್ಲೂ ಪರಿಣತರಾಗಿದ್ದಾರೆ.
|
ಐಶ್ವರ್ಯಪ್ರಮುಖ ಸಾಧನೆಗಳು
* ಬಹು ಬಾರಿ ದಕ್ಷಿಣ್ ಡೇರ್ ರಾಲಿ ಚಾಂಪಿಯನ್.
* ಕ್ರಾಸ್ ಕಂಟ್ರಿ ರಾಲಿ ಮತ್ತು ರೋಡ್ ರೇಸಿಂಗ್ನಲ್ಲಿಒಂದೇ ವರ್ಷ ಚಾಂಪಿಯನ್ ಪಟ್ಟ.
* ಅಂತಾರಾಷ್ಟ್ರೀಯ ರಾಲಿ ರೇಸ್ಗಳಲ್ಲಿ ಸ್ಪರ್ಧಿಸಿದ ಭಾರತದ ಪ್ರಥಮ ಮಹಿಳೆ.
* ಅಂತಾರಾಷ್ಟ್ರೀಯ ಮೋಟಾರ್ ಸೈಕಲ್ಸ್ ಒಕ್ಕೂಟದ (ಎಫ್ಐಎಮ್) ವಿಶ್ವಕಪ್ನಲ್ಲಿ ಚಾಂಪಿಯನ್.
* ಮೋಟಾರ್ ಸ್ಪೋರ್ಟ್ಸ್ ವಿಶ್ವಕಪ್ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಮಹಿಳೆ.
|
ರಾಲಿಪಟು ವಿಶ್ವಾಸ್ ಗುರು
ಇತ್ತೀಚೆಗಷ್ಟೇ ನಡೆದ ರಾಷ್ಟ್ರೀಯ ರಾಲಿ ಚಾಂಪಿಯನ್ಷಿಪ್ನಲ್ಲಿ ಟೈರ್ ಪಂಚರ್ ಆದರು ರೇಸ್ ಪೂರೈಸಿ ಪ್ರಶಸ್ತಿ ಗೆದ್ದ ಬೆಂಗಳೂರಿನ ಅನುಭವಿ ರೇಸರ್ ವಿಶ್ವಾಸ್ ಎಸ್.ಡಿ, ಐಶ್ವರ್ಯ ಪಿಸೇ ಅವರನನ್ನು ಒಳಗೊಂಡಂತೆ ಹಲವು ಯುವ ಉದಯೋನ್ಮುಖ ರೈಡರ್ಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರು. 2016ರಲ್ಲಿ ಐಶ್ವರ್ಯ ಪಿಸೇ ದಕ್ಷಿಣ್ ಡೇರ್ ರಾಲಿ ಗೆದ್ದು, ಮೋಟಾರ್ಸ್ಪೋರ್ಟ್ಸ್ ವೃತ್ತಿ ಬದುಕಿಗೆ ಭರ್ಜರಿ ಎಂಟ್ರಿ ನೀಡಿದ್ದರ ಹಿಂದೆ ವಿಶ್ವಾಸ್ ಅವರ ಪಾತ್ರ ಮಹತ್ವದ್ದು. ಐಶ್ವರ್ಯಗೆ ರಾಲಿ ರೇಸ್ಗಳಲ್ಲಿ ಬೈಕ್ ಓಡಿಸುವ ಕಲೆಯ ಪಾಠ ಹೇಳಿಕೊಟ್ಟಿದ್ದು ವಿಶ್ವಾಸ್. ಮಹಿಳೆಯರು ಕೂಡ ಮೋಟಾರ್ ಸ್ಪೋರ್ಟ್ಸ್ನಲ್ಲಿ ಮಿಂಚಬಲ್ಲರು ಎಂಬುದನ್ನು ಅರಿತು ಹಲವರಿಗೆ ವಿಶ್ವಾಸ್ ಉಚಿತವಾಗಿ ಮಾರ್ಗದರ್ಶನ ನೀಡಿದ್ದಾರೆ. ಇಂದು ಐಶ್ವರ್ಯ ಅವರ ಐತಿಹಾಸಿಕ ಸಾಧನೆಯ ಶ್ರೇಯಸ್ಸು ವಿಶ್ವಾಸ್ ಅವರಂತಹ ಗುರುಗಳಿಗೂ ಲಭ್ಯವಾಗುತ್ತದೆ.