ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜರ್ಮನಿ ಪತ್ರಕರ್ತನ ಮೇಲಿನ ನಿಷೇಧ ಹಿಂಪಡೆದ ರಷ್ಯಾ

By Prasad
Russia lifts World Cup ban on German journalist

ಬರ್ಲಿನ್, ಮೇ 25: ಜರ್ಮನಿಯ ಪತ್ರಕರ್ತ ಹಜೋ ಸೆಪೆಲ್ಟ್ ಅವರಿಗೆ ಫುಟ್‌ಬಾಲ್ ವರ್ಲ್ಡ್ ಕಪ್ ವರದಿ ಮಾಡಲು ರಷ್ಯಾ ವೀಸಾ ಮಂಜೂರು ಮಾಡಿದೆ. ಈ ಮುಂಚೆ ಸೆಪೆಲ್ಟ್ ಅವರು ದೇಶದೊಳಗೆ ಬರದಂತೆ ರಷ್ಯಾ ನಿಷೇಧ ಹೇರಿತ್ತು. ರಷ್ಯಾ ದೇಶದಿಂದ ಪ್ರಾಯೋಜಿತ ಉದ್ದೀಪನ ಮದ್ದು ಹಗರಣದ ಬಗ್ಗೆ ಸೆಪೆಲ್ಟ್ ವರದಿ ಮಾಡಿದ್ದರು. ಇದರಿಂದ ಕೆರಳಿದ್ದ ರಷ್ಯಾ, ಪತ್ರಕರ್ತ ಸೆಪೆಲ್ಟ್ ದೇಶದೊಳಗೆ ಬರದಂತೆ ತಡೆ ಒಡ್ಡಿತ್ತು.

ರಷ್ಯಾದಿಂದ ಬಂದ ಮಾಹಿತಿಗಳ ಪ್ರಕಾರ ಸದ್ಯಕ್ಕೆ ಫುಟ್‌ಬಾಲ್ ವರ್ಲ್ಡ್ ಕಪ್ ವರದಿ ಮಾಡಲು ಹಜೋ ಸೆಪೆಲ್ಟ್ ಅವರು ರಷ್ಯಾಕ್ಕೆ ತೆರಳಬಹುದಾಗಿದೆ. ಮಾಧ್ಯಮಗಳ ವರದಿಗಾರಿಕೆಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ನಾವೆಲ್ಲ ಪ್ರಯತ್ನಿಸೋಣ ಎಂದು ರಷ್ಯಾ ಕ್ರಮದ ಬಗ್ಗೆ ಜರ್ಮನಿ ವಿದೇಶಾಂಗ ಮಂತ್ರಿ ಹೆಕೊ ಮಾಸ್ ಟ್ವೀಟ್ ಮಾಡಿದ್ದಾರೆ.

ರಷ್ಯಾ ಮೇಲೆ ನಿರ್ಬಂಧ

ರಷ್ಯಾ ದೇಶದ ಅಥ್ಲೀಟ್ ಗಳ ಉದ್ದೀಪನ ಮದ್ದು ಸೇವನೆಯ ಕುರಿತು ಸೆಪೆಲ್ಟ್ ವಿಸ್ತೃತವಾದ ವರದಿ ಮಾಡಿದ್ದರು. ಈ ವರದಿಯ ಪರಿಣಾಮವಾಗಿ ಪಯೋಂಗ್‌ಚಾಂಗ್ ವಿಂಟರ್ ಓಲಂಪಿಕ್ ನಲ್ಲಿ ಭಾಗವಹಿಸದಂತೆ ರಷ್ಯಾ ಮೇಲೆ ನಿರ್ಬಂಧ ಹೇರಲಾಗಿತ್ತು.

ಕಳೆದ ವಾರ ಸೆಪೆಲ್ಟ್ ಅವರಿಗೆ ವೀಸಾ ನೀಡುವಂತೆ ಕೋರಿ, ಜರ್ಮನಿಯ ಸಾರ್ವಜನಿಕ ಪ್ರಾದೇಶಿಕ ಸುದ್ದಿ ಸಂಸ್ಥೆ ಎಸ್‌ಡಬ್ಲ್ಯೂಆರ್ ಸಲ್ಲಿಸಿದ್ದ ಅರ್ಜಿಯನ್ನು ರಷ್ಯಾ ತಿರಸ್ಕರಿಸಿತ್ತು. ಅಲ್ಲದೆ ಸೆಪೆಲ್ಟ್ ಅವರ ಹೆಸರನ್ನು ದೇಶಕ್ಕೆ ಬೇಡವಾದ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿಸಿರುವುದಾಗಿ ರಷ್ಯಾ ತಿಳಿಸಿತ್ತು.

ಯಾವುದೇ ಕಾರಣಗಳನ್ನು ನೀಡಿರಲಿಲ್ಲ

ಸೆಪೆಲ್ಟ್ ಅವರ ಮೇಲಿನ ನಿಷೇಧಕ್ಕೆ ಅಧಿಕೃತವಾಗಿ ಮಾಸ್ಕೊ ಯಾವುದೇ ಕಾರಣಗಳನ್ನು ನೀಡಿರಲಿಲ್ಲ. ಆದರೆ ಈ ಬಗ್ಗೆ ಸ್ವತಃ ಪ್ರತಿಕ್ರಿಯೆ ನೀಡಿದ್ದ ಸೆಪೆಲ್ಟ್, 'ದೇಶ ಪ್ರಾಯೋಜಿತ ಡೋಪಿಂಗ್ ಹಗರಣದ ವರದಿಯ ಭಾರಿ ಪರಿಣಾಮದಿಂದ ರಷ್ಯಾ ನನ್ನ ಮೇಲೆ ಇಂತಹ ಕ್ರಮಕ್ಕೆ ಮುಂದಾಗಿದೆ' ಎಂದು ತಿಳಿಸಿದ್ದರು.

ಸೆಪೆಲ್ಟ್ ಅವರ ಮೇಲಿನ ನಿಷೇಧ ನಿರ್ಧಾರಕ್ಕೆ ಜರ್ಮನಿಯಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು, ಸೆಪೆಲ್ಟ್ ಮೇಲಿನ ನಿಷೇಧ ಕ್ರಮ ಸಂಪೂರ್ಣ ತಪ್ಪು ಎಂದು ಜರ್ಮನಿ ಹೇಳಿತ್ತು.
"ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯ ಅತಿಥೇಯ ರಾಷ್ಟ್ರ ರಷ್ಯಾ ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡುತ್ತಿದೆ. ಇದರಿಂದ ವಿಶ್ವದಲ್ಲಿ ತನ್ನ ದೇಶದ ಮಾನ ಕಳೆದುಕೊಳ್ಳುತ್ತಿದೆ" ಎಂದು ಜರ್ಮನಿ ಸರಕಾರ ಖಾರವಾಗಿ ಪ್ರತಿಕ್ರಿಯೆ ನೀಡಿತ್ತು.

ಇದಕ್ಕೂ ಮುನ್ನ, ಜರ್ಮನಿ ಫುಟ್‌ಬಾಲ್ ಫೆಡರೇಶನ್ ಮುಖ್ಯಸ್ಥ ರೇನಾರ್ಡ್ ಗ್ರಿಂಡೆಲ್ ಖುದ್ದಾಗಿ ಫೀಫಾ ಮುಖ್ಯಸ್ಥ ಗಿಯಾನಿ ಇನ್ಫಾಂಟಿನೊ ಅವರೊಂದಿಗೆ ಮಾತನಾಡಿ, ಸೆಪೆಲ್ಟ್ ಪ್ರಕರಣವನ್ನು ರಷ್ಯಾದೊಂದಿಗೆ ಚರ್ಚಿಸಿ ಬಗೆಹರಿಸಬೇಕೆಂದು ಕೇಳಿಕೊಂಡಿದ್ದರು.

ನೀವೇ ಮುಂದಾಗಿ ಸಮಸ್ಯೆ ಬಗೆಹರಿಸಿ

"ನೀವೇ ಮುಂದಾಗಿ ರಷ್ಯಾ ಸರಕಾರದೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ನಾವು ನಂಬಿದ್ದೇವೆ ಎಂದು ಫೀಫಾ ಮುಖ್ಯಸ್ಥ ಗಿಯಾನಿ ಇನ್ಫಾಂಟಿನೊ ಅವರಿಗೆ ತಿಳಿಸಿದ್ದೇನೆ" ಎಂದು ರೇನಾರ್ಡ್ ಗ್ರಿಂಡೆಲ್ ಮಾಹಿತಿ ನೀಡಿದ್ದರು.

ಗಂಭೀರ ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಸಿಲುಕಿರುವ ರಷ್ಯಾಗೆ ೨೦೧೦ರ ವಿಶ್ವಕಪ್ ಫುಟ್‌ಬಾಲ್ ಆತಿಥ್ಯ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಈಗ ಸೆಪೆಲ್ಟ್ ಅವರ ವೀಸಾ ಪ್ರಕರಣದಿಂದ ಜೂನ್ ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಪಂದ್ಯಾವಳಿಗೆ ಮತ್ತಷ್ಟು ವಿವಾದಗಳು ಸುತ್ತಿಕೊಳ್ಳುವಂತಾಗಿದೆ.

ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ಸಹಕಾರ

ಈ ಮಧ್ಯೆ ಸೆಪೆಲ್ಟ್ ಅವರು ವಿಶ್ವಕಪ್ ವರದಿಗಾಗಿ ತೆರಳಲು ಮಾಧ್ಯಮ ಮಾನ್ಯತೆ ನೀಡಿರುವುದಾಗಿ ಫೀಫಾ ತನ್ನ ನಿಲುವು ಸ್ಪಷ್ಟಪಡಿಸಿತ್ತು. ಈ ಕುರಿತು ಫೀಫಾ ಪ್ರಕಟಣೆಯೊಂದನ್ನು ಹೊರಡಿಸಿ, "ಮಾಧ್ಯಮ ಸ್ವಾತಂತ್ರ್ಯಕ್ಕೆ ಫೀಫಾ ಅತ್ಯುನ್ನತ ಗೌರವ ನೀಡುತ್ತದೆ. ವಿಶ್ವಕಪ್ ಪಂದ್ಯಾವಳಿಯ ವರದಿಗಾರಿಕೆಗೆ ತೆರಳುವ ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ಫೀಫಾ ಸಕಲ ಸಹಕಾರ ನೀಡಲಿದೆ." ಎಂದು ಹೇಳಿದೆ.

ಜರ್ಮನ್ ಚಾನ್ಸಲರ್ ಎಂಜೆಲಾ ಮರ್ಕೆಲ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡುವ ಕಾರ್ಯಕ್ರಮದ ಕೆಲವೇ ದಿನಗಳ ಮುಂಚೆ ನಡೆದ ಈ ಪ್ರಕರಣ ಕುತೂಹಲ ಕೆರಳಿಸಿದೆ. ಸಿರಿಯಾ ಹಾಗೂ ಉಕ್ರೇನ್ ಗಳಲ್ಲಿಯ ಹಿಂಸಾಚಾರಗಳ ವಿಷಯದಲ್ಲಿ ಪುಟಿನ್, ಪಾಶ್ಚಿಮಾತ್ಯ ರಾಷ್ಟ್ರಗಳ ಮುಖಂಡರೊಂದಿಗೆ ಆಗಾಗ ಸಂಘರ್ಷ ನಡೆಸುತ್ತಿರುವ ವಿಷಯವನ್ನು ಇಲ್ಲಿ ಗಮನಿಸಬಹುದು.

Story first published: Friday, May 25, 2018, 19:06 [IST]
Other articles published on May 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X