ಮತ್ತೆ ಅಬ್ಬರಿಸಿದ ನಬಿ: ಟಿ20ಯಲ್ಲಿ ದಾಖಲೆ ಬರೆದ ಅಫ್ಘಾನಿಸ್ತಾನ

ಢಾಕಾ, ಸೆಪ್ಟೆಂಬರ್ 16: ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡವನ್ನು 25 ರನ್‌ಗಳಿಂದ ಸೋಲಿಸುವ ಮೂಲಕ 'ಕ್ರಿಕೆಟ್ ಶಿಶು' ಅಫ್ಘಾನಿಸ್ತಾನ, ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದೆ.

ಬಾಂಗ್ಲಾದೇಶ-ಜಿಂಬಾಬ್ವೆ-ಅಫ್ಘಾನಿಸ್ತಾನ ನಡುವಿನ ತ್ರಿಕೋನ ಸರಣಿಯ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಬಗ್ಗುಬಡಿದ ಅಫ್ಘಾನಿಸ್ತಾನ ತಂಡವು ಟಿ20ಯಲ್ಲಿ ಸತತ 12 ಪಂದ್ಯಗಳಲ್ಲಿ ಗೆಲುವು ಕಂಡ ದಾಖಲೆ ಬರೆದಿದೆ. ವಿಶೇಷವೆಂದರೆ 2016-17ರಲ್ಲಿ ಸತತವಾಗಿ 11 ಪಂದ್ಯಗಳನ್ನು ಗೆಲ್ಲುವ ಮೂಲಕ ಅಫ್ಘಾನಿಸ್ತಾನವೇ ದಾಖಲೆ ಬರೆದಿತ್ತು. ಈಗ ತನ್ನದೇ ದಾಖಲೆಯನ್ನು ಅದು ಮತ್ತಷ್ಟು ಉತ್ತಮಪಡಿಸಿದಂತಾಗಿದೆ. ಅಲ್ಲದೆ, ಏಷ್ಯಾದಲ್ಲಿ ತಾನಾಡಿದ ಕಳೆದ ಎಲ್ಲ 21 ಪಂದ್ಯಗಳಲ್ಲಿಯೂ ಅಫ್ಘಾನಿಸ್ತಾನ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನದ ನಿರ್ಣಯ ತಪ್ಪಾದಂತೆ ಅನಿಸಿತ್ತು. ಮೊದಲನೆಯ ಎಸೆತದಲ್ಲಿಯೇ ರಹಮಾನುಲ್ಲಾ ಗುರ್ಬಾಜ್ ಶೂನ್ಯಕ್ಕೆ ಔಟಾದರು. 6 ಓವರ್ ಮುಗಿಯುವ ವೇಳೆಗೆ ಕೇವಲ 40 ರನ್‌ಗೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಾಂಗ್ಲಾದ ವೇಗಿ ಮೊಹಮ್ಮದ್ ಸೈಫುದ್ದೀನ್ ಅಫ್ಘಾನಿಸ್ತಾನ ಬ್ಯಾಟ್ಸ್‌ಮನ್‌ಗಳಿಗೆ ಆಘಾತ ನೀಡಿದರು.

ಅಫ್ಘನ್-ನಬಿ ಜತೆಯಾಟ

ಐದನೇ ವಿಕೆಟ್‌ಗೆ ಜತೆಯಾದ ಅಸ್ಗರ್ ಅಫ್ಘನ್ ಮತ್ತು ಮೊಹಮ್ಮದ್ ನಬಿ 79 ರನ್ ಪೇರಿಸಿ ತಂಡಕ್ಕೆ ಬಲ ನೀಡಿದರು. ಕಳೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ್ದ ಮೊಹಮ್ಮದ್ ನಬಿ, ಈ ಪಂದ್ಯದಲ್ಲಿ ಕೂಡ ಬಾಂಗ್ಲಾ ಬೌಲರ್‌ಗಳನ್ನು ಚೆಂಡಾಡಿದರು. ಅಫ್ಘನ್ 37 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 40 ರನ್‌ಗಳ ಕಾಣಿಕೆ ನೀಡಿದರು.

ನಬಿ ಅಬ್ಬರದ ಬ್ಯಾಟಿಂಗ್

ಅಫ್ಘನ್ ಔಟಾದ ಬಳಿಕ ಬಂದ ಗುಲ್ಬದೀನ್ ನೈಬ್ ಶೂನ್ಯಕ್ಕೆ ಔಟಾದರು. ಆದರೆ ನಿರಾತಂಕವಾಗಿ ಬ್ಯಾಟ್ ಬೀಸುತ್ತಿದ್ದ ನಬಿ ಅಬ್ಬರಕ್ಕೆ ಕಡಿವಾಣ ಹಾಕಲು ಬಾಂಗ್ಲಾಕ್ಕೆ ಸಾಧ್ಯವಾಗಲಿಲ್ಲ. ಮುರಿಯದ ಆರನೇ ವಿಕೆಟ್‌ಗೆ ಕರೀಮ್ ಜನತ್ ಜತೆಗೂಡಿ ಕೇವಲ 19 ಎಸೆತಗಳಲ್ಲಿ 43 ರನ್ ಸೇರಿಸಿದರು. ಇದರಲ್ಲಿ ಜನತ್ ಕೊಡುಗೆ 6 ಎಸೆತಗಳಲ್ಲಿ ಕೇವಲ 5 ರನ್. ಉಳಿದ ರನ್‌ ನಬಿ ಬ್ಯಾಟ್‌ನಿಂದ ಹರಿದುಬಂತು. 54 ಎಸೆತಗಳನ್ನು ಎದುರಿಸಿದ ನಬಿ, ಏಳು ಸಿಕ್ಸರ್ ಮತ್ತು ಮೂರು ಬೌಂಡರಿಗಳೊಂದಿಗೆ 84 ರನ್ ಚಚ್ಚಿದರು.

ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಬಾಂಗ್ಲಾ ಪರ ಮೊಹಮ್ಮದ್ ಸೈಫುದ್ದೀನ್ 33 ರನ್ ನೀಡಿ 4 ವಿಕೆಟ್ ಕಿತ್ತರು. ನಾಯಕ ಶಕೀಬ್ ಅಲ್ ಹಸನ್ 18 ರನ್ ನೀಡಿದ 2 ವಿಕೆಟ್ ಕಬಳಿಸಿದರು.

ಮುಜೀಬ್ ದಾಳಿಗೆ ಬಾಂಗ್ಲಾ ತತ್ತರ

ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾ ಹುಲಿಗಳಿಗೆ ಅಫ್ಘನ್ ಬೌಲರ್‌ಗಳು ಆರಂಭದಿಂದಲೇ ಪೆಟ್ಟು ನೀಡಿದರು. ಮುಜೀಬ್ ಉರ್ ರೆಹಮಾನ್ ಸ್ಪಿನ್ ದಾಳಿಗೆ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳ ಬಳಿ ಉತ್ತರವಿರಲಿಲ್ಲ. ಮಹಮದುಲ್ಲಾ ಮಾತ್ರ ಕೊಂಚ ಪ್ರತಿರೋಧ ತೋರಿದರು. ಅಂತಿಮವಾಗಿ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ 139 ರನ್‌ಗಳಿಗೆ ಬಾಂಗ್ಲಾ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 25 ರನ್‌ಗಳ ಸೋಲೊಪ್ಪಿಕೊಂಡಿತು.

ಮಹಮದುಲ್ಲಾ ಏಕಾಂಗಿ ಹೋರಾಟ

ಮಹಮದುಲ್ಲಾ 44 ರನ್ ಗಳಿಸಿದರೆ, ಶಬ್ಬೀರ್ ರಹಮಾನ್ 24 ರನ್ ಬಾರಿಸಿದರು. ಅಫ್ಘನ್ ಪರ ಮುಜೀಬ್ ಕೇವಲ 15 ರನ್ ನೀಡಿ 4 ವಿಕೆಟ್ ಪಡೆದರು. ಫರೀದ್ ಮಲಿಕ್, ನಾಯಕ ರಶೀದ್ ಖಾನ್ ಮತ್ತು ಗುಲ್ಬದೀನ್ ನೈಬ್ ತಲಾ 2 ವಿಕೆಟ್ ಕಬಳಿಸಿ ಬಾಂಗ್ಲಾ ತಂಡವನ್ನು ಹೆಡೆಮುರಿಗೆ ಕಟ್ಟಿದರು.

READ SOURCE