ಬುಧವಾರದಿಂದ ಆರಂಭವಾಗಲಿರುವ ಇಂಡಿಯಾ ಓಪನ್ ಸೂಪರ್ 750 ಟೂರ್ನಿಯಲ್ಲಿ ಭಾರತ ತನ್ನ ಬಲಿಷ್ಠ ಷಟ್ಲರ್‌ಗಳ ತಂಡವನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಸ್ಥಿರ ಪ್ರದರ್ಶನ ನೀಡುತ್ತಿರುವ ಸ್ಟಾರ್ ಷಟ್ಲರ್‌ಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಮಾಜಿ ವಿಶ್ವದ ನಂಬರ್ ಒನ್ ಪುರುಷರ ಡಬಲ್ಸ್ ತಂಡವು 2022ರ ಇಂಡಿಯಾ ಓಪನ್ ಅನ್ನು ಗೆದ್ದಿದೆ. ಕಳೆದ ವಾರ ಮಲೇಷ್ಯಾ ಓಪನ್ ಸೂಪರ್ 1000 ಪಂದ್ಯಾವಳಿಯ ಸೆಮಿಫೈನಲ್ ತಲುಪುವ ಮೂಲಕ 2025 ರ ಋತುವಿಗೆ ಉತ್ತಮ ಆರಂಭವನ್ನು ಮಾಡಿತು.
ಪ್ಯಾರಿಸ್ ಒಲಿಂಪಿಕ್ಸ್ 2024ರ ಕ್ರೀಡಾಕೂಟದಲ್ಲಿ ನಿರಾಸೆಯ ಹೊರತಾಗಿಯೂ, ಕಳೆದ ಎರಡು ವರ್ಷಗಳಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾರತದ ಅತ್ಯಂತ ವಿಶ್ವಾಸಾರ್ಹ ಷಟ್ಲರ್‌ಗಳಾಗಿದ್ದಾರೆ. ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿರುವ ಕೆಡಿ ಜಾಧವ್ ಒಳಾಂಗಣ ಸಭಾಂಗಣದಲ್ಲಿ ನಡೆಯಲಿರುವ ಇಂಡಿಯಾ ಓಪನ್ ಸೂಪರ್ 750 ಟೂರ್ನಿಯಲ್ಲಿ ಚೀನಾ ಮಾಸ್ಟರ್ಸ್ 2024 ರ ಸೆಮಿಫೈನಲ್‌ನಲ್ಲಿ ಆಡಿರುವ ಸಾತ್ವಿಕ್ ಮತ್ತು ಚಿರಾಗ್ ಮೊದಲ ಸುತ್ತಿನಲ್ಲಿ ಮಲೇಷ್ಯಾದ ವೀ ಚಾಂಗ್ ಮನ್ ಮತ್ತು ಕೀ ವುನ್ ಟೀ ಅವರನ್ನು ಎದುರಿಸಲಿದ್ದಾರೆ.

ಇದಲ್ಲದೆ, ಸಾತ್ವಿಕ್ ಮತ್ತು ಚಿರಾಗ್ ಜೋಡಿ ಚೀನಾದ ಒಲಿಂಪಿಕ್ ಬೆಳ್ಳಿ ಪದಕ ವಿಜೇತರಾದ ಲಿಯಾಂಗ್ ವೀಕೆಂಗ್ ಮತ್ತು ವಾಂಗ್ ಚಾಂಗ್, ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಾದ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವುಯಿ ಯಿಕ್, ಡೆನ್ಮಾರ್ಕ್‌ನ ಕಿಮ್ ಆಸ್ಟ್ರಪ್ ಮತ್ತು ಆಂಡರ್ಸ್ ರಾಸ್ಮುಸ್ಸೆನ್ ಮತ್ತು ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂಟೊ ಅವರಿಂದ ಕಠಿಣ ಸವಾಲು ಎದುರಿಸಲಿದ್ದಾರೆ.
ಭಾರತ ತಂಡದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಹೊರೆತುಪಡಿಸಿ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಸೇರಿದ್ದಾರೆ. ಸಿಂಧು ತನ್ನ ಮದುವೆಯಿಂದಾಗಿ ಮಲೇಷ್ಯಾ ಮಾಸ್ಟರ್ಸ್‌ನಿಂದ ಹೊರಗುಳಿದಿದ್ದರು. ಇದೀಗ ಮತ್ತೆ ಆಟಕ್ಕೆ ಮರಳುತ್ತಿದ್ದಾರೆ. ಹೈದರಾಬಾದ್‌ನ 29 ವರ್ಷದ ಸಿಂಧು ಮೊದಲ ಸುತ್ತಿನಲ್ಲಿ ಅನುಪಮಾ ಉಪಾಧ್ಯಾಯರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಸ್ವಿಸ್ ಓಪನ್‌ನಲ್ಲಿ ತನ್ನನ್ನು ಸೋಲಿಸಿದ ಜಪಾನ್‌ನ ಟೊಮೊಕಾ ಮಿಯಾಜಾಕಿ ವಿರುದ್ಧ ಅವರು ಮುಂದಿನ ಪಂದ್ಯದಲ್ಲಿ ಆಡಬಹುದು.
ಲಕ್ಷ್ಯ ಸೇನ್ ಮಲೇಷ್ಯಾದಲ್ಲಿ ನಡೆದ ಆರಂಭಿಕ ಸುತ್ತಿನಲ್ಲೇ ನಿರ್ಗಮಿಸಿದರು. ಮೂರು ವರ್ಷಗಳ ಹಿಂದೆ ಇಂಡಿಯಾ ಓಪನ್ ಪ್ರಶಸ್ತಿ ಗೆದ್ದಿದ್ದ ಲಕ್ಷ್ಯ ಮೊದಲ ಸುತ್ತಿನಲ್ಲಿ ಚೀನಾದ ಹಾಂಗ್ ಯಾಂಗ್ ವೆಂಗ್ ಅವರನ್ನು ಎದುರಿಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಿಂದ ಹೊರಬಿದ್ದ ನಂತರ ಐದು ತಿಂಗಳ ವಿರಾಮ ತೆಗೆದುಕೊಂಡಿದ್ದ ಎಚ್‌ಎಸ್ ಪ್ರಣಯ್ ಮಲೇಷ್ಯಾದಲ್ಲಿ ನಡೆದ ಎರಡನೇ ಸುತ್ತಿನಲ್ಲೇ ನಿರ್ಗಮಿಸಿದರು. ಇದೀಗ ಮೊದಲ ಸುತ್ತಿನಲ್ಲಿ ಅವರು ಚೈನೀಸ್ ತೈಪೆಯ ಲಿ ಯಾಂಗ್ ಹ್ಸು ಅವರನ್ನು ಎದುರಿಸಲಿದ್ದಾರೆ. ಇದರಲ್ಲಿ ಗೆದ್ದರೆ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರಿಂದ ಪೈಪೋಟಿ ನಡೆಸಲಿದ್ದಾರೆ.
ವಿಶ್ವದ ಅಗ್ರ 20 ಪುರುಷರ ಸಿಂಗಲ್ಸ್ ಷಟ್ಲರ್‌ಗಳ ಪೈಕಿ 18 ಹಾಗೂ ಮಹಿಳೆಯರ ಸಿಂಗಲ್ಸ್ ನಲ್ಲಿ 14 ಅಗ್ರ ಷಟ್ಲರ್‌ಗಳು ಇಂಡಿಯಾ ಓಪನ್ ಸೂಪರ್ 750 ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಭಾರತೀಯರ ಪೈಕಿ ಪ್ರಿಯಾಂಶು ರಾಜಾವತ್ ಮೊದಲ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಜಪಾನ್‌ನ ಕೊಡೈ ನರೋಕಾ ಅವರನ್ನು ಎದುರಿಸಲಿದ್ದು, ಮಾಳವಿಕಾ ಬನ್ಸೋಡ್ ಮೂರನೇ ಶ್ರೇಯಾಂಕದ ಚೀನಾದ ಯುಯಿ ಹಾನ್ ವಿರುದ್ಧ ಸೆಣಸಾಡಲಿದ್ದಾರೆ. ಆಕರ್ಷಿ ಕಶ್ಯಪ್ ಎಂಟನೇ ಶ್ರೇಯಾಂಕದ ಥಾಯ್ಲೆಂಡ್‌ನ ಪೋರ್ನ್‌ಪಾವೀ ಚೊಚುವಾಂಗ್ ಅವರೊಂದಿಗೆ ಪೈಪೋಟಿ ನಡೆಸಲಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ತ್ರಿಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಜಪಾನ್‌ನ ಅರಿಸಾ ಇಗರಾಶಿ ಮತ್ತು ಅಯಾಕೊ ಸಕುರಮೊಟೊ ಅವರನ್ನು ಎದುರಿಸಲಿದ್ದಾರೆ. ಬ್ರಿಟನ್‌ನ ಚೋಲೆ ಕೋನ್ ಮತ್ತು ಎಸ್ಟೆಲ್ಲೆ ವ್ಯಾನ್ ಲೀವೆನ್ ವಿರುದ್ಧ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಆಡಲಿದ್ದಾರೆ.