
ಜಕಾರ್ತಾ, ಆಗಸ್ಟ್ 26: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಏಷ್ಯನ್ ಗೇಮ್ಸ್ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸುವುದರೊಂದಿಗೆ ಐತಿಹಾಸಿಕ ಕಂಚಿನ ಪದಕ ಖಾತ್ರಿ ಪಡಿಸಿದ್ದಾರೆ. 36 ವರ್ಷಗಳಿಗೆ ಹಿಂದೆ ಭಾರತ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದಿತ್ತು.
ಭಾನುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ಅವರು ಥಾಯ್ಲೆಂಡ್ ಆಟಗಾರ್ತಿ, ವಿಶ್ವ ನಂ. 4ರ ರಾಚ್ಟಾನೋಕ್ ಇಂಟನಾನ್ ಎದುರು 21-18, 21-16ರ ನೇರ ಸೆಟ್ ಗೆಲುವು ದಾಖಲಿಸುವುದರೊಂದಿಗೆ ಸೆಮಿಫೈನಲ್ ಗೆ ಪ್ರವೇಶಿಸಿದರು. ಇಬ್ಬರ ಮಧ್ಯೆ 42 ನಿಮಿಷಗಳ ಕಾದಾಟ ನಡೆಯಿತು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಇದಕ್ಕೂ ಹಿಂದೆ 1982ರಲ್ಲಿ ಬ್ಯಾಡ್ಮಿಂಟನ್ ದಂತಕತೆ ಸೈಯದ್ ಮೋದಿ ಅವರು ಏಷ್ಯನ್ ಗೇಮ್ಸ್ ನಲ್ಲಿ ಭಾರತ ಪರ ವೈಯಕ್ತಿಕ ಪದಕ ಗೆದ್ದಿದ್ದರು. ಏಷ್ಯನ್ ಗೇಮ್ಸ್ ನಲ್ಲಿ ಭಾರತ ಈವರೆಗೆ ಒಟ್ಟು 8 ಪದಕಗಳನ್ನು ಗೆದ್ದಿದೆ, ಇದರಲ್ಲಿ ಆರು ತಂಡ ಪದಕಗಳು, ಮತ್ತೊಂದು ಪುರುಷರ ಡಬಲ್ಸ್ ಗೆ ಲಭಿಸಿದ್ದು.
ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಅವರೂ ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ನ ನೋಜೊಮಿ ಒಕುಹರಾ ಅವರೆದುರು ಗೆಲುವು ದಾಖಲಿಸಿದರು. ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಒಕುಹರಾ ಎದುರು 21-15, 21-10ರ ನೇರ ಸೆಟ್ ಜಯ ಸಾಧಿಸಿದರು.
ಸೆಮಿಫೈನಲ್ ನಲ್ಲಿ ಸೈನಾ ಅವರು ವಿಶ್ವ ನಂ. 1 ಆಟಗಾರ್ತಿ ಚೈನೀಸ್ ತೈಪೆಯ ತೈ ಝು ಯಿಂಗ್ ಅವರನ್ನು ಎದುರುಗೊಂಡರೆ, ಸಿಂಧು ಅವರು ಒಂದೋ ಚೀನಾದ ಚೆನ್ ಯೂಫೀ ಅವರನ್ನು ಇಲ್ಲವೆ ವಿಶ್ವ ನಂ. 2 ಆಟಗಾರ್ತಿ ಜಪಾನ್ ನ ಅಕೆನೆ ಯಮಾಗುಚಿ ಅವರ ಸವಾಲು ಸ್ವೀಕರಿಸಲಿದ್ದಾರೆ.