Badminton Asian Team Championship: ಥಾಯ್ಲೆಂಡ್ ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದ ಭಾರತ ಮಹಿಳಾ ತಂಡ
ಭಾನುವಾರ, ಫೆಬ್ರವರಿ 18ರಂದು ಮಲೇಷ್ಯಾದ ಸೆಲಂಗೋರ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮಹಿಳಾ ಬ್ಯಾಡ್ಮಿಂಟನ್ ತಂಡವು ಪ್ರಶಸ್ತಿಯನ್ನು ಗೆದ್ದು ಇತಿಹಾಸ ರಚಿಸಿದೆ.
ಕಠಿಣ ಹೋರಾಟದ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಬ್ಯಾಡ್ಮಿಂಟನ್ ತಂಡವು ಥಾಯ್ಲೆಂಡ್ ತಂಡವನ್ನು 3-2 ಅಂತರದಿಂದ ಸೋಲಿಸಿತು. ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಭಾರತವು ಪ್ರತಿಷ್ಠಿತ ಏಷ್ಯನ್ ಟೀಮ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲ ಬಾರಿಯಾಗಿದೆ.

ಶಾ ಆಲಂ ಕೋರ್ಟ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಭಾರತ 3-2 ಅಂತರದಿಂದ ಗೆಲುವು ಸಾಧಿಸಲು ಪಿವಿ ಸಿಂಧು, ಗಾಯತ್ರಿ ಗೋಪಿಚಂದ್-ಟ್ರೀಸಾ ಜಾಲಿ ಮತ್ತು ಹದಿಹರೆಯದ ಆಟಗಾರ್ತಿ ಅನ್ಮೋಲ್ ಖರ್ಬ್ ತಮ್ಮ ತಮ್ಮ ಪಂದ್ಯಗಳನ್ನು ಗೆದ್ದರು.
ಭಾರತ ಪ್ರತಿಷ್ಠಿತ ಥಾಮಸ್ ಕಪ್ ಗೆದ್ದ ಎರಡು ವರ್ಷಗಳ ನಂತರ, ಭಾರತ ಮಹಿಳಾ ಬ್ಯಾಡ್ಮಿಂಟನ್ ತಂಡವು ಏಷ್ಯನ್ ಪಂದ್ಯಾವಳಿಯಲ್ಲಿ ಸೊಗಸಾಗಿ ಆರಂಭಿಸಿತು. ಚೀನಾ, ಹಾಂಗ್ ಕಾಂಗ್, ಜಪಾನ್ ಮತ್ತು ಫೈನಲ್‌ನಲ್ಲಿ ಥಾಯ್ಲೆಂಡ್‌ನಂಥ ತಂಡಗಳನ್ನು ಸೋಲಿಸಿ ವೈಭವದ ಕ್ಷಣವನ್ನು ತಮ್ಮದಾಗಿಸಿಕೊಂಡಿದೆ.

ಗಾಯದಿಂದ ವಾಪಸಾದ ನಂತರ, ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ತನ್ನ ಮೊದಲ ಪಂದ್ಯಾವಳಿಯನ್ನು ಆಡಿದರು ಮತ್ತು ಸುಪಾನಿಂದಾ ಕಟೆಥಾಂಗ್ ಅವರನ್ನು ಕೇವಲ 39 ನಿಮಿಷಗಳಲ್ಲಿ 21-12, 21-12 ಸೆಟ್‌ಗಳಿಂದ ಸೋಲಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಭಾರತದ ಗಾಯತ್ರಿ ಗೋಪಿಚಂದ್ ಮತ್ತು ಜಾಲಿ ಟ್ರೀಸಾ ಜೋಡಿಯು ಥೈಲ್ಯಾಂಡ್‌ನ ಜೋಂಗ್‌ಕೋಲ್ಫಾಮ್ ಕಿಟಿತಾರಾಕುಲ್ ಮತ್ತು ರಾವ್ವಿಂದಾ ಪ್ರಜೊಂಗ್ಜಲ್ ಜೋಡಿಯನ್ನು ಮೂರು ಗೇಮ್‌ಗಳ ಕಠಿಣ ಹೋರಾಟದಲ್ಲಿ ಸೋಲಿಸಿದಾಗ ಭಾರತ 2-0 ಅಂತರದ ಮುನ್ನಡೆ ಸಾಧಿಸಿತು.
ಗಾಯತ್ರಿ ಗೋಪಿಚಂದ್ ಮತ್ತು ಜಾಲಿ ಟ್ರೀಸಾ ಜೋಡಿ ಅಂತಿಮ ಗೇಮ್‌ನಲ್ಲಿ 6-11 ಅಂತರದಲ್ಲಿ ಹಿನ್ನಡೆ ಸಾಧಿಸಿದ್ದ 5 ಪಂದ್ಯಗಳ ಟೈನ ಮೊದಲ ಡಬಲ್ ಪಂದ್ಯದಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕ ಹಿಂದಿರುಗಿ ಥಾಯ್ಲೆಂಡ್ ಜೋಡಿಯನ್ನು 21-16, 18-21, 21-16 ಅಂತರದಿಂದ ಸೋಲಿಸಿದರು.
ಆದರೆ, ಜಪಾನ್ ವಿರುದ್ಧದ ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ನೊಜೊಮಿ ಒಕುಹರಾ ಅವರನ್ನು ಸೋಲಿಸಿದ್ದ ಅಶ್ಮಿತಾ ಚಲಿಹಾ 11-21, 14-21 ಅಂತರದಿಂದ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೋತರು. ಎರಡನೇ ಡಬಲ್ಸ್ ಪಂದ್ಯದಲ್ಲೂ ಭಾರತ ಸೋಲು ಅನುಭವಿಸಿತು.
ಆದಾಗ್ಯೂ, ವಿಶ್ವ ರ‍್ಯಾಂಕಿಂಗ್‌ನಲ್ಲಿ 472ನೇ ಸ್ಥಾನದಲ್ಲಿರುವ 16ರ ಹರೆಯದ ಅನ್ಮೋಲ್ ಖರ್ಬ್ ಮತ್ತೊಮ್ಮೆ ನಿರ್ಣಾಯಕ ಪಂದ್ಯದಲ್ಲಿ ಮಿಂಚಿದರು.
ಭಾರತದ ಅನುಭವಿ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅಭಿಮಾನಿಯಾಗಿರುವ ಅನ್ಮೋಲ್ ಖರ್ಬ್ ದೊಡ್ಡ ವೇದಿಕೆಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದರು. ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 45ನೇ ಸ್ಥಾನದಲ್ಲಿರುವ ಪೋರ್ನ್‌ಪಿಚಾ ಚೋಯಿಕೀವಾಂಗ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿ ಭಾರತಕ್ಕೆ ನಿರ್ಣಾಯಕ ಗೆಲುವು ತಂದುಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications