
ನಾನ್ಜಿಂಗ್, ಜುಲೈ 30: ಚೀನಾದ ನಾನ್ಜಿಂಗ್ ನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್ ಶಿಪ್ ನ ಪುರುಷರ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಎಚ್.ಎಸ್. ಪ್ರಣಯ್ ಮತ್ತು ಸಮೀರ್ ವರ್ಮಾ ದ್ವಿತೀಯ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
ವಿಶ್ವ ನಂ. 11 ಆಟಗಾರ ಪ್ರಣಯ್, ಭಾರತದ ಮತ್ತೊಬ್ಬ ಆಟಗಾರ ಅಭಿನವ್ ಅವರನ್ನು 21-12, 21-11ರ ನೇರ ಸೆಟ್ ನಿಂದ ಮಣಿಸಿದರು. ಇಬ್ಬರ ನಡುವಿನ ಕಾದಾಟ ಬರೀ 28 ನಿಮಿಷಗಳಲ್ಲೇ ಕೊನೆಗೊಂಡಿತು. ಮತ್ತೊಂದು ಪಂದ್ಯದಲ್ಲಿ ಸಮೀರ್ ಅವರು ಫ್ರಾನ್ಸ್ ನ ಲ್ಯೂಕಾಸ್ ಕಾರ್ವೆ ಅವರನ್ನು 21-13, 21-10ರ ನೇರ ಸೆಟ್ ನಿಂದ ಹಿಮ್ಮೆಟ್ಟಿಸಿದರು.
ಇತ್ತೀಚೆಗೆ ಲಾಗೋಸ್ ಇಂಟರ್ ನ್ಯಾಷನಲ್ ಪ್ರಶಸ್ತಿ ಜಯಿಸಿದ್ದ ಭಾರತದ ಪುರುಷರ ಡಬಲ್ಸ್ ನ ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಜೋಡಿಯು ಬಲ್ಗೇರಿಯಾದ ಡೇನಿಯಲ್ ನಿಕೊಲೋವ್ ಮತ್ತು ಇವಾನ್ ರುಸೆವ್ ಜೋಡಿಯನ್ನು 21-13, 21-18ರಿಂದ ಸೋಲಿಸಿ ಮುನ್ನಡೆ ಸಾಧಿಸಿತು.
ಚೈನೀಸ್ ಸೂಪರ್ ಸ್ಟಾರ್ ಲಿನ್ ಡಾನ್ ಈ ಪಂದ್ಯದಲ್ಲಿ ಹೆಚ್ಚು ಮಿಂಚಿದ್ದು ಕಂಡುಬಂತು. ಆರನೇ ಬಾರಿಗೆ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಳ್ಳುವತ್ತ ಕಣ್ಣಿಟ್ಟಿರುವ ಲಿನ್, ಡಚ್ ಆಟಗಾರ ಮಾರ್ಕ್ ಕಾಲ್ಜೌವ್ ಅವರನ್ನು 21-14, 21-14ರಿಂದ ಸೋಲಿಸಿದರು.
ಭಾರತದ ಮಿಶ್ರ ಡಬಲ್ಸ್ ಜೋಡಿ ಸೌರಭ್ ವರ್ಮ ಮತ್ತು ಅನೌಷ್ಕ ಪತ್ರಿಕ್ ಜೋಡಿ ನೇಜೀರಿಯಾ ಜೋಡಿಯನ್ನು 21-13, 21-12 ಅಂತರದಿಂದ ಸೋಲಿಸಿ ಎಡರನೇ ಸುತ್ತಿಗೆ ಪ್ರವೇಶ ಪಡೆದಿದೆ.