ಭಾರತದ ಬ್ಯಾಡ್ಮಿಂಟನ್‌ನ ಸ್ಟಾರ್ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಇಂಡೋನೇಷ್ಯಾ ಓಪನ್ ಗೆದ್ದು ತಮ್ಮ ಮೊದಲ ಸೂಪರ್ 1000 ಪುರುಷರ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಧನೆ ಮಾಡಿದ್ದರು. ಇದೀಗ BWF ಶ್ರೇಯಾಂಕ ಪಟ್ಟಿಯಲ್ಲಿಯೂ ಈ ಜೋಡಿ ಅದ್ಭುತ ಸಾಧನೆ ಮಾಡಿದ್ದು 3ನೇ ಸ್ಥಾನಕ್ಕೇರಿದ್ದಾರೆ. ಇದು ಈ ಜೋಡಿಯ ಈವರೆಗಿನ ಅತ್ಯುನ್ನತ ಶ್ರೇಯಾಂಕವೆನಿಸಿಕೊಂಡಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತರಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಹಾಲಿ ವಿಶ್ವ ಚಾಂಪಿಯನ್ ಆರೋನ್ ಚಿಯಾ ಮತ್ತು ಮಲೇಷ್ಯಾದ ಸೊಹ್ ವೂಯಿ ಯಿಕ್ ಮಣಿಸಿದ್ದರು. ಫೈನಲ್ ಪಂದ್ಯದಲ್ಲಿ ಈ ಜೋಡಿಯನ್ನು ನೇರ ಗೇಮ್‌ಗಳಲ್ಲಿ ಸೋಲಿಸಿ ಇಂಡೋನೇಷ್ಯಾ ಓಪನ್ ಸೂಪರ್ 1000 ಈವೆಂಟ್ ಗೆದ್ದ ಭಾರತದ ಮೊದಲ ಜೋಡಿ ಎನಿಸಿಕೊಂಡರು

ಸ್ವಿಸ್ ಓಪನ್ ಜೊತೆಗೆ ಈಗಾಗಲೇ ಎರಡು ವಿಶ್ವ ಟೂರ್ ಪ್ರಶಸ್ತಿಗಳನ್ನು ಗೆದ್ದಿರುವ ಭಾರತೀಯ ಜೋಡಿ 2023ರ ಋತುವಿನಲ್ಲಿ ಸ್ಮರಣೀಯ ಸಾಧನೆ ಮಾಡಿದೆ. ಇವುಗಳ ಜೊತೆಗೆ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಕೂಡ ಈ ಜೋಡಿ ಗೆದ್ದ ಸಾಧನೆ ಮಾಡಿದ್ದಾರೆ.
ಇನ್ನು ಸಿಂಗಲ್ಸ್ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ಮೂರು ಸ್ಥಾನಗಳ ಏರಿಕೆ ಕಂಡಿದ್ದು ಟಾಪ್ 20ಗೆ ಪ್ರವೇಶಿಸಿದ್ದಾರೆ. ಈ ಮೂಲಕ 18ನೇ ಶ್ರೇಯಾಂಕದಲ್ಲಿರುವ ಲಕ್ಷ್ಯ ಸೇನ್ ಅವರ ನಂತರದ ಸ್ಥಾನದಲ್ಲಿದ್ದಾರೆ. ಸೇನ್ ಎರಡು ಸ್ಥಾನಗಳ ಏರಿಕೆ ಕಂಡಿದ್ದಾರೆ. ಸೆಮಿಫೈನಲ್‌ನಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕದ ವಿಕ್ಟರ್ ಅಕ್ಸೆಲ್‌ಸೆನ್ ವಿರುದ್ಧ ಸೋಲು ಕಂಡು ನಿರ್ಗಮಿಸಿದ ಎಚ್‌ಎಸ್ ಪ್ರಣಯ್ ಸಿಂಗಲ್ಸ್ ವಿಭಾಗದಲ್ಲಿ ಭಾರತೀಯ ಶಟ್ಲರ್‌ಗಳ ಪೈಕಿ ಅತ್ಯುನ್ನತ ಶ್ರೇಯಾಂಕದ ಹೊಂದಿದವರಾಗಿದ್ದು 9ನೇ ಸ್ಥಾನದಲ್ಲಿದ್ದಾರೆ. ಇನ್ನು ಉದಯೋನ್ಮುಖ ಶಟ್ಲರ್ ಪ್ರಿಯಾಂಶು ರಾಜಾವತ್ ಅವರು ನಾಲ್ಕು ಸ್ಥಾನಗಳ ಏರಿಕೆ ಕಂಡಿದ್ದು 30ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದು ತಮ್ಮ ಅತ್ಯುತ್ತಮ ಸಾಧನೆ ಮಾಡಿದ್ದಾರೆ
ರಾಜಾವತ್ ಸೇರಿದಂತೆ ಒಟ್ಟು ನಾಲ್ವರು ಪುರುಷ ಶಟ್ಲರ್‌ಗಳು ಶ್ರೇಯಾಂಕ ಪಟ್ಟಿಯಲ್ಲಿ ಟಾಪ್ 30ಯಲ್ಲಿ ಸ್ಥಾನ ಪಡೆದಂತಾಗಿದೆ. ಇನ್ನು ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡು ಸ್ಥಾನಗಳನ್ನು ಮೇಲಕ್ಕೆರಿದ್ದು 12ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಒಂದು ಸ್ಥಾನ ಮೇಲೇರಿದ್ದು 31 ಶ್ರೇಯಾಂಕವನ್ನು ಹೊಂದಿದ್ದಾರೆ.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ 16ನೇ ಸ್ಥಾನ ಪಡೆದರು. ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್ ಬಿಡಬ್ಲ್ಯೂಎಫ್ ಶ್ರೇಯಾಂಕದಲ್ಲಿ ಮುಂದಿನ ಭಾರತೀಯರಾಗಿದ್ದು, ಕ್ರಮವಾಗಿ 41 ಮತ್ತು 42 ನೇ ಸ್ಥಾನದಲ್ಲಿದ್ದಾರೆ. ಭಾರತದ ಮಿಶ್ರ ಜೋಡಿಯಾದ ರೋಹನ್ ಕಪೂರ್ ಮತ್ತು ಸಿಕ್ಕಿ ರೆಡ್ಡಿ ಎರಡು ಸ್ಥಾನಗಳ ಮೂಲಕ ವಿಶ್ವದ 33 ನೇ ಸ್ಥಾನಕ್ಕೆ ತಲುಪಿದ್ದಾರೆ. ತನಿಶಾ ಕ್ರಾಸ್ಟೊ ಮತ್ತು ಇಶಾನ್ ಭಟ್ನಾಗರ್ ನಂತರದ ಭಾರತೀಯರಾಗಿದ್ದು, ವಿಶ್ವದಲ್ಲಿ 38 ನೇ ಸ್ಥಾನಕ್ಕೆ ಒಂದು ಸ್ಥಾನವನ್ನು ಕಳೆದುಕೊಂಡಿದ್ದಾರೆ.