ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್ಸ್‌ನಲ್ಲಿ ಪ್ರಣೋಯ್‌ಗೆ ಸೋಲು

ಆಕ್ಲೆಂಡ್, ಮೇ 03: ಭಾರತದ ಅನುಭವಿ ಆಟಗಾರ ಎಚ್.ಎಸ್ ಪ್ರಣೋಯ್ ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಸೋಲುಂಡಿದ್ದು, ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಟೂರ್ನಿಯಲ್ಲಿ ಶ್ರೇಯಾಂಕ ರಹಿತವಾಗಿ ಕಣಕ್ಕಿಳಿದಿದ್ದ ಪ್ರಣೋಯ್, ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಮೊದಲ ಗೇಮ್ ಜಯ ದಾಖಲಿಸಿದ್ದರಾದರೂ ಅಂತಿಮವಾಗಿ 21-17, 15-21, 14-21ರ ಗೇಮ್‌ಗಳಿಂದ ವಿಶ್ವದ 11ನೇ ಶ್ರೇಯಾಂಕದ ಆಟಗಾರ ಜಪಾನ್‌ನ ಕಂಟಾ ಸುನೆಯಾಮ ಎದುರು ನಿರಾಸೆ ಅನುಭವಿಸಿದರು.
ಒಂದು ಗಂಟೆ 13 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಪಂದ್ಯದಲ್ಲಿಸಿಕ್ಕ ಆರಂಭಿಕ ಮುನ್ನಡೆಯನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದ ಭಾರತದ ಮಾಜಿ ರಾಷ್ಟ್ರೀಯ ಚಾಂಪಿಯನ್ ಪ್ರಣೋಯ್ ತಮ್ಮ ಹೋರಾಟ ಕೊನೆಗೊಳಿಸಿದರು. ಸುನೆಯಾಮ ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಏಷ್ಯನ್ ಗೇಮ್ಸ್ ಗೋಲ್ಡ್ ಮೆಡಲಿಸ್ಟ್ ಜೊನಾಥನ್ ಕ್ರಿಸ್ಟೀ ಎದುರು ಫೈನಲ್ ಅರ್ಹತೆಗಾಗಿ ಸೆಣಸಲಿದ್ದಾರೆ.
ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ವಿಶ್ವದ 212ನೇ ಶ್ರೇಯಾಂಕದ ಆಟಗಾರ್ತಿ ಎದುರು ಅಚ್ಚರಿಯ ಸೋಲನುಭವಿಸಿ ಸ್ಪರ್ಧೆಯಿಂದ ನಿರ್ಗಮಿಸಿದ್ದರು. ಪುರುಷರ ವಿಭಾಗದಲ್ಲಿ ಬಿ ಸಾಯ್ ಪ್ರಣೀತ್, ಲಕ್ಷ್ಯ ಸೇನ್, ಪರುಪಳ್ಳಿ ಕಶ್ಯಪ್ ಮತ್ತು ಅಜಯ್ ಜಯರಾಮ್ ಕೂಡ ಆರಂಭಿಕ ಹಂತಗಳಲ್ಲೇ ಮುಗ್ಗರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications