Hylo Open: ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಚಿರಾಗ್ ಶೆಟ್ಟಿ- ಸಾತ್ವಿಕ್ ಜೋಡಿ

ಭಾರತದ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಗೆಲುವಿನ ಓಟ ಹೈಲೋ ಓಪನ್‌ನಲ್ಲಿಯೂ ಮುಂದುವರಿದಿದೆ. ಗುರುವಾರ ಜರ್ಮನಿಯ ಸಾರ್ಬ್ರುಕೆನ್‌ನಲ್ಲಿ ನಡೆದ ಹೈಲೋ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪಂದ್ಯದಲ್ಲಿ ಭಾರತದ ಈ ಜೋಡಿ ಕಠಿಣ ಪೈಪೋಟಿಯನ್ನು ಎದುರಿಸಿದ ಬಳಿಕ ಗೆಲುವು ಸಾಧಿಸಿದ್ದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಈ ಟೂರ್ನಮೆಂಟ್‌ನ ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿಗೆ ಇಂಗ್ಲಿಷ್ ಜೋಡಿಯಾದ ರೋರಿ ಈಸ್ಟನ್ ಮತ್ತು ಝಾಕ್ ರಸ್ ಎದುರಾಳಿಯಾಗಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಕದನ ಒಂದು ಗಂಟೆ ಎರಡು ನಿಮಿಷಗಳ ಕಾಲ ನಡೆಯಿತು. ಈ ಪಂದ್ಯದಲ್ಲಿ ಭಾರತದ ಈ ಜೋಡಿ 22-24 21-15 21-11ರಲ್ಲಿ ರೋರಿ ಈಸ್ಟನ್ ಮತ್ತು ಝಾಕ್ ರಸ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.
ಭಾರತದ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿಯನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಹೈಲೋ ಓಪನ್‌ನಲ್ಲಿಯೂ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಇವರಿಗೆ ಏಳನೇ ಶ್ರೇಯಾಂಕದ ಇಂಗ್ಲಿಷ್ ಜೋಡಿಯಾದ ಬೆನ್ ಲೇನ್ ಮತ್ತು ಸೀನ್ ವೆಂಡಿ ಸವಾಲೊಡ್ಡಲಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ 16ರ ಸುತ್ತಿನಲ್ಲಿ ಡೆನ್ಮಾರ್ಕ್‌ನ ಲೈನ್ ಕ್ಜೆರ್ಸ್‌ಫೆಲ್ಡ್ ಅವರನ್ನು ಎದುರಿಸಿದರು. ಆದರೆ 13-21 14-21 ಈ ಮುಖಾಮುಖಿಯಲ್ಲಿ ಭಾರತದ ಆಟಗಾರ್ತಿ ಸೋಲು ಅನುಭವಿಸಿದ್ದಾರೆ.
ಮತ್ತೊಂದೆಡೆ ಮಹಿಳೆಯರ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ 21-18 21-19 ಅಂತರದಿಂದ ಡಚ್ ಜೋಡಿಯಾದ ಡೆಬೊರಾ ಜಿಲೆ ಮತ್ತು ಚೆರಿಲ್ ಸೈನೆನ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಟ್ರೀಸಾ ಮತ್ತು ಗಾಯತ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಹ್ಸು ಯಾ ಚಿಂಗ್ ಮತ್ತು ಲಿನ್ ವಾನ್ ಚಿಂಗ್ ಅವರನ್ನು ಎದುರಿಸಲಿದ್ದಾರೆ.
ಆದರೆ ಋತುಪರ್ಣ ಪಾಂಡಾ ಮತ್ತು ಶ್ವೇತಪರ್ಣ ಪಾಂಡಾ ಅವರು ಮಹಿಳೆಯರ ಡಬಲ್ಸ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಹು ಲಿಂಗ್ ಫಾಂಗ್ ಮತ್ತು ಲಿನ್ ಕ್ಸಿಯಾವೊ ಮಿನ್ ವಿರುದ್ಧ 16-21 7-21 ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications