ಜುಲೈ 31 ಬುಧವಾರ, ಪ್ಯಾರಿಸ್ ಕ್ರೀಡಾಕೂಟದಲ್ಲಿ 2024ರಲ್ಲಿ ನಿರಾಶಾದಾಯಕ ಫಲಿತಾಂಶಗಳ ನಂತರ ಐದು ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಅವರು ತಮ್ಮ ಒಲಿಂಪಿಕ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಪ್ಯಾರಿಸ್ ಕ್ರೀಡಾಕೂಟದ ಮಹಿಳೆಯರ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಸತತ ಮೂರನೇ ಬಾರಿಗೆ ಸೋಲನ್ನು ಎದುರಿಸಬೇಕಾಯಿತು. ಮಂಗಳವಾರ ನಡೆದ ಸಿ ಗುಂಪಿನ ಅಂತಿಮ ಪಂದ್ಯದಲ್ಲಿ ಅಶ್ವಿನಿ ಮತ್ತು ತನಿಶಾ 15-21, 10-21 ರಲ್ಲಿ ಆಸ್ಟ್ರೇಲಿಯಾದ ಸೆಟಿಯಾನಾ ಮಪಾಸಾ ಮತ್ತು ಏಂಜೆಲಾ ಯು ವಿರುದ್ಧ ಸೋಲು ಅನುಭವಿಸಬೇಕಾಯಿತು.

ಮೂರನೇ ಒಲಿಂಪಿಕ್ಸ್ ಆಡುತ್ತಿರುವ 34 ವರ್ಷದ ಅಶ್ವಿನಿ 2028ರ ಲಾಸ್ ಏಂಜಲೀಸ್ ಗೇಮ್ಸ್‌ನಲ್ಲಿ ಆಡಲು ಬಯಸುತ್ತೀರಾ ಎಂದು ಕೇಳಿದಾಗ, 'ಇದು ನನ್ನ ಕೊನೆಯ ಒಲಿಂಪಿಕ್ಸ್ ಆಗಿರುತ್ತದೆ. ಆದರೆ ತನಿಶಾ ಇನ್ನೂ ಬಹಳ ದೂರ ಸಾಗಬೇಕಾಗಿದೆ' ಎಂದು ಹೇಳಿದ್ದಾರೆ.
'ಈ ಸೋಲು ಭಾವನಾತ್ಮಕ ಮತ್ತು ಮಾನಸಿಕವಾಗಿ ತುಂಬಾ ಪ್ರಭಾವ ಬೀರಿದೆ. ಇಂತಹ ಪರಿಸ್ಥಿತಿಯನ್ನು ಮತ್ತೆ ನಾನು ಎದುರಿಸಲಾರೆ. ಇದು ಸುಲಭವಲ್ಲ, ಸ್ವಲ್ಪ ಚಿಕ್ಕವರಾಗಿದ್ದರೆ ಎಲ್ಲವನ್ನೂ ಸಹಿಸಿಕೊಳ್ಳಬಹುದು. ಸಾಕಷ್ಟು ವರ್ಷಗಳಿಂದ ಆಡಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಆಟವಾಡಲು ನನಗೆ ಸಾಧ್ಯವಿಲ್ಲ' ಎಂದು ಅಶ್ವಿನಿ ಭಾವುಕರಾಗಿದ್ದಾರೆ.
ಇದೇ ವೇಳೆ ಮಾತನಾಡಿದ ತನಿಶಾ ಅವರು, 'ಅಶ್ವಿನಿ ನನಗೆ ಬೆಂಬಲವಾಗಿ ನನ್ನೊಂದಿಗಿದ್ದರು. ಪ್ರತಿ ಬಾರಿ ನನ್ನನ್ನು ಹುರಿದುಂಬಿಸುತ್ತಿದ್ದರು. ಇಂದು ನಾವು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೆವು. ಆದರೆ ಇದು ಸಾಧ್ಯವಾಗಿಲ್ಲ' ಎಂದು ತಿಳಿಸಿದ್ದಾರೆ.
2001ರಲ್ಲಿ ತನ್ನ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಅಶ್ವಿನಿ, 2017 ರವರೆಗೆ ಜ್ವಾಲಾ ಗುಟ್ಟಾ ಅವರೊಂದಿಗೆ ಮಹಿಳೆಯರ ಡಬಲ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದರು. 2010ರ ದೆಹಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ, ಉಬರ್ ಕಪ್ (2014 ಮತ್ತು 2016) ಹಾಗು ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ (2014) ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಿದ್ದಾರೆ.
ಅಲ್ಲದೆ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ 2011ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದು ಅವರ ವೃತ್ತಿ ಜೀವನದ ಅತಿ ದೊಡ್ಡ ಪ್ರಶಸ್ತಿಯಾಗಿತ್ತು.
ಜ್ವಾಲಾ-ಅಶ್ವಿನಿ ಜೋಡಿ ಸತತವಾಗಿ ವಿಶ್ವದ ಟಾಪ್ 20 ರ ರ‍್ಯಾಕಿಂಗ್‌ನಲ್ಲಿದ್ದು, ಒಂದು ಬಾರಿ 10ನೇ ಸ್ಥಾನಕ್ಕೂ ತಲುಪಿದ್ದರು. ಅಶ್ವಿನಿ ಮತ್ತು ಜ್ವಾಲಾ ಎರಡು ಒಲಿಂಪಿಕ್ಸ್‌ಗಳಲ್ಲಿ (2012 ಮತ್ತು 2016 ರಲ್ಲಿ) ಒಟ್ಟಿಗೆ ಆಡಿದರು. ಆದರೆ ಪ್ರಾಥಮಿಕ ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗಿರಲಿಲ್ಲ.