ಇಂಡೋನೇಷ್ಯಾ ಓಪನ್‌ನಲ್ಲಿ ಭಾರತೀಯ ಶಟ್ಲರ್‌ಗಳಿಗೆ ಬುಧವಾರ ಶುಭವಾರವಾಗಿತ್ತು. ಯಾಕೆಂದರೆ ಕಿಡಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಉನ್ನತ ಶ್ರೇಯಾಂಕದ ಎದುರಾಳಿಗಳ ವಿರುದ್ಧ ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಲಕ್ಷ್ಯ ಸೇನ್ ಮಾಜಿ ವಿಶ್ವದ ನಂ. 2 ಲೀ ಜಿ ಜಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೆ ಶ್ರೀಕಾಂತ್ ಚೀನಾದ ಲು ಗುವಾಂಗ್ ಜು ಭರ್ಜರಿ ಅಂತರಗಳಿಂದ ಮಣಿಸಿದ್ದಾರೆ. ಈ ಮೂಲಕ ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಆದರೆ ಎರಡನೇ ಸುತ್ತಿನ್ಲಲಿ ಈ ಇಬ್ಬರು ಭಾರತೀಯ ಆಟಗಾರರೇ ಮುಖಾಮುಖಿಯಾಗಲಿದ್ದಾರೆ.
ಮಾಜಿ ವಿಶ್ವದ ನಂ. 2 ಲೀ ಜಿ ಜಿಯಾ ವಿರುದ್ಧ ಸೆಣೆಸಾಟದಲ್ಲಿ ಸೇನ್ 21-17, 21-13 ಅಂತರದಿಂದ ನೇರ ಸೆಟ್‌ಗಳ ಗೆಲುವು ಸಾಧಿಸಿ ಮಿಂಚಿದ್ದಾರೆ. ಮೊದಲ ಗೇಮ್‌ನಲ್ಲಿ ಸ್ಕೋರ್ 17-17 ಅಂತರದಿಂದ ಸಮವಾದಾಗ ಜಿಯಾ ಅವರನ್ನು ಹಿಂದಿಕ್ಕಲು ಅತ್ಯದ್ಭುತ ಹೋರಾಟವನ್ನು ಪ್ರದರ್ಶಿಸಿದರು ಲಕ್ಷ್ಯ ಸೇನ್. ಈ ಸೆಟ್‌ನಲ್ಲಿ ಭಾರತದ ಆಟಗಾರ ನಾಲ್ಕು ಅಂಕಗಳನ್ನು ಗೆದ್ದು ಸೆಟ್ ತಮ್ಮ ವಶಕ್ಕೆ ಪಡೆದುಕೊಂಡರು. ಅದಾದ ಬಳಿಕ ಕೇವಲ 33 ನಿಮಿಷಗಳಲ್ಲಿ ಪಂದ್ಯವನ್ನು ಮುಗಿಸಿದರು.

ಮತ್ತೊಂದೆಡೆ ಮತ್ತೊಂದೆಡೆ ಶ್ರೀಕಾಂತ್ ಈ ಪಂದ್ಯದಲ್ಲಿ ತೀವ್ರ ಪೈಪೋಟಿಯ ಸೆಣೆಸಾಟವನ್ನು ಎದುರಿಸಿದರು. ಹಾಗಿದ್ದೂ ನೇರ ಸೆಟ್‌ಗಳ ಗೆಲುವು ಸಾಧಿಸಿ ಚೀನೀ ಆಟಗಾರಮ ವಿರುದ್ಧ ತಮ್ಮ ಮುನ್ನಡೆಯನ್ನು 5-0ಕ್ಕೆ ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. 21-13, 21-19 ಅಂತರದಿಂದ ಕಿಡಂಬಿ ಶ್ರೀಕಾಂತ್ ಗೆಲುವು ಸಾಧಿಸಿದ್ದಾರೆ. ಇನ್ನು ಎರಡನೇ ಸುತ್ತಿನಲ್ಲಿ ಲಕ್ಷ್ಯ ಸೇನ್ ಅವರನ್ನು ಎದುರಿಸಲಿದ್ದಾರೆ ಕಿಡಂಬಿ ಶ್ರೀಕಾಂತ್.
ಇನ್ನು ಇದಕ್ಕೂ ಮುನ್ನ ಮಂಗಳವಾರ ನಡೆದ ಪಂದ್ಯದಲ್ಲಿ ಪಿವಿ ಸಿಂಧು ಮೊದಲ ಸುತ್ತಿನಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶಿಸಿದರು. BWFನ ಇತ್ತೀಚಿನ ಶ್ರೇಯಾಂಕ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿರುವ ಪಿವಿ ಸಿಂಧು ಈ ವರ್ಷ ಹೆಚ್ಚು ನಿರಾಸೆ ಕಂಡಿದ್ದಾರೆ. ಥಾಯ್ಲೆಂಡ್ ಮತ್ತು ಸಿಂಗಾಪುರ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ನಿರ್ಗಮಿಸುವ ಮೂಲಕ ಭಾರೀ ನಿರಾಸೆ ಅನುಭವಿಸಿದ್ದರು. ಆದರೆ ಇಂಡೋನೇಷ್ಯಾ ಓಪನ್‌ನಲ್ಲಿ ಭರ್ಜರಿ ಗೆಲುವಿನೊಂದಿಗೆ ಅವರು ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.
ವಿಶ್ವದ ಒಂಬತ್ತನೇ ಶ್ರೇಯಾಂಕದ ಆಟಗಾರ್ತಿಯಾಗಿರುವ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಪಿವಿ ಸಿಂಧು ನೇರ ಗೇಮ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಇನ್ನು ಇಂಡೋನೇಷ್ಯಾದ ಈ ಶಟ್ಲರ್ ವಿರುದ್ಧ ಕಳೆದ ಎರಡು ಪಂದ್ಯಗಳಲ್ಲಿ ಸೋಲುಕಂಡಿದ್ದ ಭಾರತೀಯ ಅನುಭವಿ ಆಟಗಾರ್ತಿ ಅದ್ಭುತ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಈ ಮೂಲಕ ಮುಂದಿನ ಹಂತಕ್ಕೆ ದಾಪುಗಾಲಿಟ್ಟಿದ್ದಾರೆ.