ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಕೊರಿಯಾ ಓಪನ್ ಸೂಪರ್ 500 ಮೊದಲ ಸುತ್ತಿನಲ್ಲಿಯೇ ಸೋಲು ಅನುಭವಿಸಿದ್ದಾರೆ. ಚೈನೀಸ್ ತೈಪೆಯ ಶ್ರೇಯಾಂಕರಹಿತ ಆಟಗಾರ್ತಿ ಯು ಪೊ ಪೈ ವಿರುದ್ಧ 3 ಗೇಮ್‌ಗಳ ಸೋಲಿನೊಂದಿಗೆ ಹೊರಬಿದ್ದಿದ್ದಾರೆ. ದಕ್ಷಿಣ ಕೊರಿಯಾದ ಯೆಯೊಸುನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬೇಗನೆ ಹೊರಬಿದ್ದರು. ಸಿಂಧು ಪ್ರತಿಷ್ಠಿತ ಟೂರ್ನಿಯ ಆರಂಭಿಕ ಸುತ್ತಿನ ಪಂದ್ಯದಲ್ಲಿ 18-21, 21-10, 13-21 ಅಂತರದಿಂದ ಸೋಲು ಕಂಡಿದ್ದಾರೆ.
ಚೈನೀಸ್ ತೈಪೆಯ ವಿಶ್ವ ನಂ. 22 ಷಟ್ಲರ್ ಯು ಪೊ ಪೈ ವಿರುದ್ಧ 6 ಮುಖಾಮುಖಿಯಲ್ಲಿ ಪಿವಿ ಸಿಂಧು ಅವರ ಅವರ ಕೇವಲ ಎರಡನೇ ಸೋಲು ಇದಾಗಿದೆ. ಮೂರು ಗೇಮ್‌ಗಳ ಮುಖಾಮುಖಿಯ ಎರಡನೇ ಗೇಮ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕಮ್‌ಬ್ಯಾಕ್‌ನ ಭರವಸೆ ನೀಡಿದ ಸಿಂಧು ನಂತರ ಅಂತಿಮ ಗೇಮ್‌ನಲ್ಲಿ ತೀವ್ರ ಕುಸಿತವನ್ನು ಕಂಡರು. ಈ ಮೂಲಕ ಸೋಲು ಕಂಡು ನಿರ್ಗಮಿಸಿದ್ದಾರೆ.

ಸೂಪರ್ 500 ಟೂರ್ನಮೆಂಟ್‌ನಲ್ಲಿ ಶ್ರೇಯಾಂಕ ರಹಿತರಾಗಿದ್ದ ಸಿಂಧು ಒಲಿಂಪಿಕ್ ಅರ್ಹತಾ ಸೈಕಲ್‌ನಲ್ಲಿ ತಮ್ಮ ಅತ್ಯುತ್ತಮ ಸಾಧನೆಗೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೊದಲ ಸುತ್ತಿನ ನಿರ್ಗಮನ ಆಘಾತ ನೀಡಿದೆ.
ಮೊಣಕಾಲು ಸ್ಟ್ರೇಸ್ ಫ್ರಾಕ್ಷರ್‌ಗೆ ಒಳಗಾದ ಕಾರಣ ಐದು ತಿಂಗಳ ಕಾಲ ಗಾಯದಿಂದ ಹೊರಗುಳಿದಿದ್ದ ಪಿವಿ ಸಿಂಧು ಕಮ್‌ಬ್ಯಾಕ್ ಮಾಡಿದ ಬಳಿಕ ಸ್ಥಿರ ಪ್ರದರ್ಶನ ನೀಡಲು ಪರದಾಟ ನಡೆಸುತ್ತಿದ್ದಾರೆ. ಇದರ ಪರಿಣಾಮವಾಗಿ ಅವರು ಇತ್ತೀಚಿನ BWF ವಿಶ್ವ ಶ್ರೇಯಾಂಕದಲ್ಲಿ ಐದು ಸ್ಥಾನಗಳ ಕುಸಿತ ಕಂಡಿದ್ದು 17ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದು ಕಳೆದ ಒಂದು ದಶಕದಲ್ಲಿ ಒಂದು ದಶಕದಲ್ಲಿ ಅವರ ಕೆಟ್ಟ ಶ್ರೇಯಾಂಕವನ್ನು ಗುರುತಿಸಿದೆ. ಕೆನಡಾ ಓಪನ್ ಸೆಮಿಫೈನಲ್ ಮತ್ತು ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಫೈನಲ್ ತಲುಪಿ ಈ ಋತುವಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದರೂ 2023ರಲ್ಲಿ ಸಿಂಧು ಈವರೆಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
ಮತ್ತೊಂದೆಡೆ ಕಿಡಂಬಿ ಶ್ರೀಕಾಂತ್ ಅವರು ಮಾಜಿ ವಿಶ್ವ ನಂ. 1 ಕೆಂಟೊ ಮೊಮೊಟಾ ವಿರುದ್ಧ 3 ಗೇಮ್‌ಗಳ ಸೆಣೆಸಾಟದಲ್ಲಿ ಸೋಲುಕಂಡಿದ್ದಾರೆ. ಈ ಪಂದ್ಯ ಸಾಕಷ್ಟು ಪೈಪೊಟಿಯಿಂದ ಕೂಡಿತ್ತು. ಶ್ರೀಕಾಂತ್ ಪಂದ್ಯವನ್ನು ನೇರ ಗೇಮ್‌ಗಳಲ್ಲಿ ಮುಕ್ತಾಯಗೊಳಿಸುವ ಅವಕಾಶಗಳನ್ನು ಹೊಂದಿದ್ದರು ಆದರೆ 2 ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಜಪಾನ್‌ನ ಸ್ಟಾರ್ ಆಟಗಾರನಿರ್ಣಾಯಕ ಹಂತಕ್ಕೆ ಪಂದ್ಯವನ್ನು ಮುನ್ನಡೆಸಿದರು. ಮೂರನೇ ಗೇಮ್‌ಅನ್ನು ತನ್ನ ವಶಕ್ಕೆ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.