ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಭಾರತೀಯ ಶಟ್ಲರ್ ಲಕ್ಷ್ಯ ಸೇನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹತ್ವದ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಕೆನಡಾ ಓಪನ್ ಟೂರ್ನಿಯ ಫೈನಲ್‌ನಲ್ಲಿ ಗೆಲುವು ಸಾಧಿಸಿರುವ ಈ ಯುವ ಭಾರತೀಯ ಆಟಗಾರ BWF ವರ್ಲ್ಡ್ ಟೂರ್ನಿನಲ್ಲಿ ಎರಡನೇ ಟೈಟಲನ್ನು ಮುಡಿಗೇರಿಸಿಕೊಂಡಂತಾಗಿದೆ.
ಫೈನಲ್‌ನಲ್ಲಿ ಚೀನಾದ ಶಟ್ಲರ್ ಲಿ ಶಿ ಫೆಂಗ್ ವಿರುದ್ಧ ಕಣಕ್ಕಿಳಿದ ಲಕ್ಷ್ಯ ಸೇನ್ ನೇರ ಸೆಟ್‌ಗಳ ಅಂತರದ ಗೆಲುವು ಸಾಧಿಸಿ ಪರಾಕ್ರಮಗೈದರು. 21ರ ಹರೆಯದ ಈ ಯುವ ಆಟಗಾರ ಫೈನಲ್ ಸೆಣೆಸಾಟದಲ್ಲಿ ಅದ್ಬುತ ಕೌಶಲ್ಯ ಹಾಗೂ ವೇಗವನ್ನು ಪ್ರದರ್ಶಿಸಿದ್ದು ಎದುರಾಳಿಗೆ ಹೆಚ್ಚಿನ ಅವಕಾಶವನ್ನು ನೀಡಲಿಲ್ಲ. ಈ ಮೂಲಕ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಬೀಗಿದ್ದಾರೆ. ಈ ಮೂಲಕ ಪುರುಷರ ವಿಭಾಗದ ಸಿಂಗಲ್ಸ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ ಲಕ್ಷ್ಯ ಸೇನ್.

21-18, 22-20 ಅಂಕಗಳೊಂದಿಗೆ ಎದುರಾಳಿಯನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಸೇನ್ ತನ್ನ ಅಸಾಧಾರಣ ಕೌಶಲ್ಯ ಮತ್ತು ಛಲವನ್ನು ಪ್ರದರ್ಶಿಸಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.ಈ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಾಧನೆಗಳ ಪಟ್ಟಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯನ್ನು ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಟೂರ್ನಮೆಂಟ್‌ನಲ್ಲಿ ಲಕ್ಷ್ಯ ಗೆಲುವು ಅವರ ಎರಡನೇ BWF ವರ್ಲ್ಡ್ ಟೂರ್ ಪ್ರಶಸ್ತಿ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಜನವರಿ 2022 ರಲ್ಲಿ ಇಂಡಿಯಾ ಓಪನ್‌ನಲ್ಲಿ ಗೆದ್ದು ಮೊದಲ ಬಾರಿಗೆ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಇನ್ನು ಈ ಟೂರ್ನಿಯಲ್ಲಿ ಲಕ್ಷ್ಯ ಸೇನ್ ಹಲವು ಕಠಿಣ ಅಗ್ನಿ ಪರೀಕ್ಷೆಗಳನ್ನು ಎದುರಿಸಿ ಈ ಪಟ್ಟವನ್ನು ಅಲಂಕರಿಸಿದ್ದಾರೆ ಎಂಬುದು ಗಮನಾರ್ಹ. ಪ್ರಸ್ತುತ 19ನೇ ಶ್ರೇಯಾಂಕ ಹೊಂದಿರುವ ಲಕ್ಷ್ಯ ಸೇನ್ 32 ಘಟ್ಟದಲ್ಲಿ ವಿಶ್ವದ ನಾಲ್ಕನೇ ಶ್ರೇಯಾಂಕದ ಆಟಗಾರ ಕುನ್ಲವುಟ್ ವಿತಿಡ್ಸರ್ನ್ ಅವರನ್ನು ಮಣಿಸಿ ಗಮನಸೆಳೆದಿದ್ದರು.
ಸೆಮಿಫೈನಲ್‌ನಲ್ಲಿ ಸೇನ್‌ಗೆ ಎದುರಾಳಿಯಾಗಿ ಸವಾಲೊಡ್ಡಿದ್ದು ಪ್ರಸ್ತುತ ವಿಶ್ವದ 11ನೇ ಶ್ರೇಯಾಂಕದ ಜಪಾನ್‌ನ ಶಟ್ಲರ್ ಕೆಂಟೊ ನಿಶಿಮೊಟೊ. ಇವರ ವಿರುದ್ಧ ಪ್ರಬಲ ಜಯ ಸಾಧಿಸುವ ಮೂಲಕ ಈ ಗೆಲುವು ಲಕ್ಷ್ಯ ತನ್ನ ಎರಡನೇ ಸೂಪರ್ 500 ಫೈನಲ್‌ಗೆ ಪ್ರವೇಶಿಸಲು ಕಾರಣವಾಯಿತು. ಈ ಪಂದ್ಯದಲ್ಲಿ ಭಾರತೀಯ ಆಟಗಾರ 21-17, 21-14 ಅಂಕಗಳಿಂದ ಗೆಲುವು ಸಾಧಿಸಿ ಮಿಂಚಿದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ನಂತರ ಮೂಗು ಶಸ್ತ್ರಚಿಕಿತ್ಸೆಗೆ ಒಳಗಾಗಿದದ್ದ ಲಕ್ಷ್ಯ ಸೇನ್ ನಂತರ ಚೇತರಿಸಿಕೊಳ್ಳಲು ಸಾಕಷ್ಟು ಸಮಯದ ಅಗತ್ಯವಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್‌ನಲ್ಲಿ ಗೆಲುವು ಸಾಧಿಸಿದ್ದು ಇತ್ತೀಚಿನ ಅವರ ಶ್ರೇಷ್ಠ ಸಾಧನೆಯಾಗಿದೆ.