ಜುಲೈ 22 ಸೋಮವಾರ, ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದಿಂದ ಸಾಕಷ್ಟು ನಿರೀಕ್ಷೆಗಳಿವೆ. ಟೋಕಿಯೊ ಒಲಿಂಪಿಕ್ಸ್‌ನಿಂದ ಪಾಠ ಕಲಿತ ಭಾರತ ಈ ಬಾರಿ ಗುರಿಯತ್ತ ಗಮನ ಹರಿಸದೆ, ಅಥ್ಲೀಟ್‌ಗಳ ಪ್ರದರ್ಶನ ಮೇಲೆ ಒಲವು ಹೊಂದಿದೆ.
ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಕ್ರೀಡಾ ಸಚಿವಾಲಯವು ಕೋಟ್ಯಂತರ ರೂಪಾಯಿಗಳನ್ನು ಹೆಚ್ಚುವರಿಯಾಗಿ ಖರ್ಚು ಮಾಡಿದೆ. ಇದರಿಂದಾಗಿ ಭಾರತೀಯ ಕ್ರೀಡಾಪಟುಗಳು ಈ ಆಟಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಬಹುದು ಎನ್ನಲಾಗಿದೆ.

ಅದರಲ್ಲೂ ಭಾರತ ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್‌ನಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ. 16 ಆಗಸ್ಟ್ 2001 ರಂದು ಉತ್ತರಾಖಂಡದಲ್ಲಿ ಜನಿಸಿದ ಸೇನ್ ಬ್ಯಾಡ್ಮಿಂಟನ್‌ನಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಇದಕ್ಕಾಗಿ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ಇದಾದ ಬಳಿಕ ಸೇನ್ ಚಿಕ್ಕ ವಯಸ್ಸಿನಲ್ಲೇ ತಮ್ಮ ಅದ್ಭುತ ಪ್ರತಿಭೆಯಿಂದ ಸಾಕಷ್ಟು ಸಾಧನೆ ಮಾಡಿದ್ದಾರೆ. 2016ರ ಜೂನಿಯರ್ ಬ್ಯಾಡ್ಮಿಂಟನ್ ಸರ್ಕ್ಯೂಟ್‌ನಲ್ಲಿ ಲಕ್ಷ್ಯ ಸೇನ್ ಅದ್ಭುತ ಪ್ರದರ್ಶನ ನೀಡಿದ್ದರು. ನಂತರ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ ಲಕ್ಷ್ಯ ಸೇನ್ ಮತ್ತೆ ಹಿಂತಿರುಗಿ ನೋಡಲಿಲ್ಲ.
ಜೂನಿಯರ್ ಹಂತದಿಂದ ಆರಂಭಸಿದ ಲಕ್ಷ್ಯ ಸೇನ್ ಈಗ ಬ್ಯಾಡ್ಮಿಂಟನ್‌ನಲ್ಲಿ ದಿಗ್ಗಜರನ್ನು ಬಿಟ್ಟು ಮುಂದೆ ಹೋಗಲಾರಂಭಿಸಿದ್ದಾರೆ. ಅತ್ಯುನ್ನತ ಮಟ್ಟದಲ್ಲಿ ಪದಕಗಳನ್ನು ಗೆಲ್ಲಲು ಪ್ರಾರಂಭಿಸಿರುವ ಲಕ್ಷ್ಯ ಸೇನ್ ಹಲವು ದಾಖಲೆಗಳನ್ನು ಬರೆದಿದ್ದಾರೆ.
2021ರಲ್ಲಿ ಲಕ್ಷ್ಯ ಸೇನ್ ಅವರ ಕೌಶಲ್ಯ ಮತ್ತು ಕಾರ್ಯಕ್ಷಮತೆ ವೇಗವಾಗಿ ಸುಧಾರಿಸಿತು. ಉನ್ನತ ಶ್ರೇಣಿಯ ಶಟ್ಲರ್‌ಗಳನ್ನು ಸೋಲಿಸುವ ಮೂಲಕ ಸೇನ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಸೇನ್ ತಮ್ಮ 13ನೇ ವಯಸ್ಸಿನಲ್ಲಿ 2014ರ ಸ್ವಿಸ್ ಜೂನಿಯರ್ ಇಂಟರ್ನ್ಯಾಷನಲ್ ಅನ್ನು ಗೆಲ್ಲುವ ಮೂಲಕ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದರು. ಬಳಿಕ ಸೇನ್ 2017ರಲ್ಲಿ ಜೂನಿಯರ್ ನಂಬರ್-1 ಆಗಿದ್ದರು. ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ 2018ರ ಈವೆಂಟ್‌ನಲ್ಲಿ ಭಾಗವಹಿಸಿದ್ದ ಸೇನ್ ಚಿನ್ನದ ಪದಕವನ್ನು ಗೆದ್ದಿದ್ದರು.
ನಂತರ 2018ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಭಾವಶಾಲಿ ಪ್ರದರ್ಶನ ಮುಂದುವರೆಸಿದ ಲಕ್ಷ್ಯ ಸೇನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು. ಇದಲ್ಲದೆ, ಲಕ್ಷ್ಯ ಸೇನ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2021 ರಲ್ಲಿ ಪದಕ ಗೆದ್ದ ನಾಲ್ಕನೇ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಎಂ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
2022ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ಮತ್ತು ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಸಂಚಲನ ಮೂಡಿಸಿದರು. ಜೊತೆಗೆ 2022ರ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು 2023ರ ಕೆನಡಾ ಓಪನ್‌ನಲ್ಲಿ ವಿಜೇತರಾಗಿದ್ದರು.
20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಇಬ್ಬರು ಪುರುಷರ ಸಿಂಗಲ್ಸ್ ಆಟಗಾರರಾದ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಸ್ಪರ್ಧೆ ಮಾಡುತ್ತಿದ್ದಾರೆ. ಸೇನ್ ಅವರಿಂದ ಭಾರತ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ.
ಸೇನ್ ಅವರ ಪ್ರದರ್ಶನ ಅತ್ಯುತ್ತಮವಾಗಿದ್ದು. ತಮ್ಮ ನ್ಯೂನತೆಗಳು ಮತ್ತು ಸೂಕ್ಷ್ಮ ವ್ಯತ್ಯಾಸಗಳ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪದಕ ಗೆಲ್ಲುವ ಭರವಸೆ ಅವರಲ್ಲಿ ಮೂಡಿದೆ.