
ಮಾರ್ಕಾಮ್, ನವೆಂಬರ್ 17: ಕೆನಡಾದ ಮಾರ್ಕಾಮ್ ನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ವರ್ಲ್ಡ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಲಕ್ಷಯ್ ಸೇನ್ ಅವರು ಸೆಮಿಫೈನಲ್ ಗೆ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಲಕ್ಷಯ್ ಅವರು ಮಲೇಷ್ಯಾದ ಆದಿಲ್ ಶೋಲೆ ಆಲಿ ಸಾದಿಕಿನ್ ಅವರನ್ನು 21-8, 21-18ರ ನೇರ ಸೆಟ್ ನಿಂದ ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡರು. ಇಬ್ಬರ ಮಧ್ಯೆ 31 ನಿಮಿಷಗಳ ಕಾದಾಟ ನಡೆಯಿತು.
ವಿಶ್ವ ನಂ. 3 ಶ್ರೇಯಾಂಕಿತ ಸೇನ್, ಆರಂಭಿಕ ಸೆಟ್ ಅನ್ನು ಸುಲಭವಾಗಿ ಗೆದ್ದುಕೊಂಡರು. ದ್ವಿತೀಯ ಸೆಟ್ ನಲ್ಲಿ ಮಾತ್ರ ಎದುರಾಳಿ ಭರ್ಜರಿ ಪೈಪೋಟಿ ನೀಡಿದರು. ಆದರೂ ರೋಚಕ ರೀತಿಯಲ್ಲಿ ಅಕ್ಷಯ್ ಗೆಲುವು ತನ್ನದಾಗಿಸಿಕೊಂಡರು.