ಕೌಲಾಲಂಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ನಿರಾಸೆ ಅನುಭವಿಸಿದ್ದಾರೆ.
ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಪಿವಿ ಸಿಂಧು ಅವರು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಅಕ್ಟೋಬರ್‌ನಲ್ಲಿ ಗಾಯಕ್ಕೆ ತುತ್ತಾದ ಬಳಿಕ ಅವರು ಬಹುದಿನಗಳ ಕಾಲ ಮೈದಾನದಿಂದ ದೂರ ಉಳಿದಿದ್ದರು. ಆದರೆ ಪ್ರಸಕ್ತ ವರ್ಷದ ಆರಂಭದಲ್ಲಿ ಸಿಂಧು ಉತ್ತಮ ಪ್ರದರ್ಶನ ನೀಡಿದ್ದರು. 2026ರಲ್ಲಿ ಆಡಿದ ಮೊದಲ ಟೂರ್ನಿಯಲ್ಲಿ ಸಿಂಧು ಸ್ಥಿರ ಪ್ರದರ್ಶನ ನೀಡಿದ್ದರು. ಆದರೆ ಇವರು ಉಪಾಂತ್ಯ ಪಂದ್ಯದಲ್ಲಿ ನಿರಾಸೆಯನ್ನು ಅನುಭವಿಸಿದರು.

ಮೊದಲ ಗೇಮ್‌ನಲ್ಲಿ ಸಿಂಧು ಹಾಗೂ ವಾಂಗ್ ಜಿಹಿ ಅವರ ನಡುವೆ ಜಿದ್ದಾಜಿದ್ದಿನ ಕಾಳಗ ಕಂಡು ಬಂದಿತು. ಈ ಅವಧಿಯಲ್ಲಿ ಉಭಯ ಆಟಗಾರ್ತಿಯರು ಸುಲಭವಾಗಿ ಅಂಕಗಳನ್ನು ಬಿಟ್ಟುಕೊಡಲಿಲ್ಲ. ಮೊದಲಾವಧಿಯಲ್ಲಿ ಚೀನಾ ಆಟಗಾರ್ತಿ 11-10 ರಿಂದ ಅಲ್ಪ ಮುನ್ನಡೆ ಸಾಧಿಸಿದ್ದರು. ಇನ್ನು ಮುಂದಿನ ಆಟದಲ್ಲಿ ಉಭಯ ಆಟಗಾರ್ತಿಯರು ತಲಾ 14 ಅಂಕಗಳನ್ನು ಕಲೆ ಹಾಕಿ ರೋಚಕತೆ ಹೆಚ್ಚಿಸಿದ್ದರು. ಈ ಅವಧಿಯಲ್ಲಿ ಚೀನಾ ಆಟಗಾರ್ತಿ ಸತತ ಐದು ಅಂಕಗಳನ್ನು ಕಲೆ ಹಾಕಿ ಅಂತರವನ್ನು ಹಿಗ್ಗಿಸಿಕೊಂಡರು. ಪರಿಣಾಮ ವಾಂಗ್ ಜಿಹಿ 21-16 ರಿಂದ ಗೆಲುವು ದಾಖಲಿಸಿದರು.
ಎರಡನೇ ಗೇಮ್‌ನಲ್ಲಿ ಪುಟಿದೇಳುವ ಸೂಚನೆಯನ್ನು ನೀಡಿದ ಪಿವಿ ಸಿಂಧು ಅವರು ಆರಂಭದಲ್ಲಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದರು. ಈ ಗೇಮ್‌ನಲ್ಲಿ ಸಿಂಧು 11-6 ರಿಂದ ಮುನ್ನಡೆ ಸಾಧಿಸಿದ್ದರು. ಸಿಂಧು ಈ ಪಂದ್ಯದಲ್ಲಿ 13-9 ರಿಂದ ಮುನ್ನಡೆದಿದ್ದರು. ಆದರೆ ಬಳಿಕ ವಾಂಗ್ ಜಿಹಿ ಸತತ 9 ಅಂಕಗಳನ್ನು ಕಲೆ ಹಾಕಿ ಅಂತರವನ್ನು ಹಿಗ್ಗಿಸಿಕೊಂಡು ಜಯ ಸಾಧಿಸಿದರು. ಈ ಗೇಮ್‌ನ್ನು ವಾಂಗ್ ಜಿಹಿ 21-15 ರಿಂದ ಜಯ ಸಾಧಿಸಿದರು.