ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ 2024; ಚಿನ್ನದ ಪದಕ ಗೆದ್ದ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ
ಭಾನುವಾರ, ಫೆಬ್ರವರಿ 25ರಂದು ಥಾಯ್ಲೆಂಡ್‌ನ ಪಟ್ಟಾಯದಲ್ಲಿ ನಡೆದ ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸುಹಾಸ್ ಯತಿರಾಜ್, ಪ್ರಮೋದ್ ಭಗತ್ ಮತ್ತು ಕೃಷ್ಣ ನಗರ ಅವರು ಕ್ರಮವಾಗಿ ಪುರುಷರ ಸಿಂಗಲ್ಸ್ ಎಸ್‌ಎಲ್ 4, ಎಸ್‌ಎಲ್ 3 ಮತ್ತು ಎಸ್‌ಎಚ್ 6 ವಿಭಾಗಗಳಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡುವ ಮೂಲಕ ತಮ್ಮ ಅದ್ಭುತ ಓಟವನ್ನು ಪೂರ್ಣಗೊಳಿಸಿದರು.
ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ವಿಶ್ವದ ನಂ.3 ಬ್ಯಾಡ್ಮಿಂಟನ್ ತಾರೆ ಸುಹಾಸ್ ಯತಿರಾಜ್ ಅವರು ತಮ್ಮ ಚೊಚ್ಚಲ ವಿಶ್ವ ಪ್ರಶಸ್ತಿಗಾಗಿ SL4 ಫೈನಲ್‌ನಲ್ಲಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವಾನ್ ಅವರನ್ನು 21-18, 21-18 ಅಂತರದಿಂದ ಸೋಲಿಸಿದರು.

2007ರ ಉತ್ತರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಕರ್ನಾಟಕದ ಹಾಸನ ಜಿಲ್ಲೆ ಮೂಲದ 40 ವರ್ಷದ ಸುಹಾಸ್ ಯತಿರಾಜ್, 'ಚಿನ್ನ ಗೆದ್ದಿರುವುದು ಖುಷಿಯಾಗಿದೆ ಮತ್ತು ವಿಶ್ವ ಚಾಂಪಿಯನ್ ಆಗಿರುವುದಕ್ಕೆ ಹೆಮ್ಮೆಯಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಪ್ರಸ್ತುತ ಉತ್ತರಪ್ರದೇಶ ರಾಜ್ಯ ಸರ್ಕಾರದಲ್ಲಿ ಯುವ ಕಲ್ಯಾಣ ಮತ್ತು ಪ್ರಾಂತೀಯ ರಕ್ಷಕ ದಳದ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕರಾಗಿದ್ದಾರೆ.
ಪ್ರಮೋದ್ ಭಗತ್ ಹ್ಯಾಟ್ರಿಕ್ ಸಾಧನೆ
ಚೀನಾದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಮತ್ತು ಎರಡು ಕಂಚು ಗೆದ್ದಿದ್ದ ಪ್ರಮೋದ್ ಭಗತ್, ಎಸ್‌ಎಲ್ 3 ಫೈನಲ್‌ನಲ್ಲಿ ಇಂಗ್ಲೆಂಡ್‌ನ ಡೇನಿಯಲ್ ಬೆಥೆಲ್ ಅವರನ್ನು 14-21, 21-15, 21-14 ಅಂತರದಿಂದ ಸೋಲಿಸಿದರು.

35 ವರ್ಷದ ಪ್ರಮೋದ್ ಭಗತ್, ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ. ಹೀಗೆ 2015ರಲ್ಲಿ ಸ್ಟೋಕ್ ಮ್ಯಾಂಡೆವಿಲ್ಲೆ ಮತ್ತು 2019ರಲ್ಲಿ ಬಾಸೆಲ್ ನಂತರ ಹ್ಯಾಟ್ರಿಕ್ ಕಿರೀಟವನ್ನು ಪೂರ್ಣಗೊಳಿಸಿದರು. ಅಲ್ಲದೆ 2022ರ ಟೊಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು.
SH6 ವಿಭಾಗದಲ್ಲಿ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಕೃಷ್ಣ ನಗರ್ ಅವರು ಮತ್ತೊಂದು ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ಲಿನ್ ನೈಲಿ ವಿರುದ್ಧ 22-20, 22-20 ಅಂತರದಿಂದ ಮೇಲುಗೈ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಸಿಂಗಲ್ಸ್ SU5ನಲ್ಲಿ ಮನಿಶಾ ರಾಮದಾಸ್ ಅವರು ಫೈನಲ್‌ನಲ್ಲಿ ಚೀನಾದ ಯಾಂಗ್ ಕ್ಯು ಕ್ಸಿಯಾ ವಿರುದ್ಧ 16-21, 16-21 ಅಂತರದಿಂದ ಸೋತ ನಂತರ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಪುರುಷರ ಡಬಲ್ಸ್ ಜೋಡಿ ಚಿರಾಗ್ ಬರೆತಾ ಮತ್ತು ರಾಜ್‌ಕುಮಾರ್ ಮತ್ತು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ರಚನಾ ಶೈಲೇಶ್‌ಕುಮಾರ್ ಮತ್ತು ನಿತ್ಯಶ್ರೀ ಸುಮತಿ ಶಿವನ್ ಅವರು ಎಸ್‌ಯು 5 ಮತ್ತು ಎಸ್‌ಎಚ್ 6 ವಿಭಾಗಗಳಲ್ಲಿ ತಮ್ಮ ಅಂತಿಮ ಪಂದ್ಯಗಳಲ್ಲಿ ಸೋತು ತಲಾ ಒಂದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications