ಆಗಸ್ಟ್ 13 ಮಂಗಳವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಈ ಬಾರಿಯೂ ಭಾರತ ಒಂದಲ್ಲ ಎರಡಲ್ಲ ಮೂರು ಪದಕಗಳನ್ನು ಗೆಲ್ಲುವ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ನಿರೀಕ್ಷೆಗೆ ತಕ್ಕಂತೆಯೇ ಭಾರತದ ಷಟ್ಲರ್‌ಗಳು ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಭಾರತ ಷಟ್ಲರ್‌ಗಳು ನಿರಾಸೆ ಅನುಭವಿಸಿದರು.
ಭಾರತ ಇಷ್ಟೊಂದು ಬ್ಯಾಡ್ಮಿಂಟನ್‌ನಿಂದ ಪದಕ ಗೆಲ್ಲವು ನಿರೀಕ್ಷೆ ಇಟ್ಟುಕೊಳ್ಳಲು ಕೆಲವು ಕಾರಣಗಳಿವೆ. ಸತತ ಮೂರು ಒಲಿಂಪಿಕ್ಸ್ ಆವೃತ್ತಿಗಳಲ್ಲಿ (2012, 2016, 2020) ಭಾರತ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದರೆ, ಪಿವಿ ಸಿಂಧು 2016ರ ರಿಯೊದಲ್ಲಿ ಬೆಳ್ಳಿ ಮತ್ತು ಟೋಕಿಯೊದಲ್ಲಿ ಕಂಚಿನ ಪದಕಗಳಿಗೆ ಮುತ್ತಿಕ್ಕಿದ್ದರು.

ಹೀಗಾಗಿ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಭಾರತದ ಬ್ಯಾಡ್ಮಿಂಟನ್ ತಾರೆಯರು ಪದಕಗಳನ್ನು ಗೆಲ್ಲುವು ಭರವಸೆಯನ್ನು ತೋರಿದ್ದರು. ಆದರೆ ಕಳೆದ ಎರಡು ಒಲಿಂಪಿಕ್ಸ್ ಆವೃತ್ತಿಗಳಲ್ಲಿ ಪದಕ ಗೆದ್ದಿದ್ದ ಪಿವಿ ಸಿಂಧು ತನ್ನ ಹಳೆಯ ಖದರ್ ತೋರಲಿಲ್ಲ. ಹ್ಯಾಟ್ರಿಕ್ ಪದಕ ಗೆದ್ದು ಇತಿಹಾಸ ನಿರ್ಮಿಸುವ ಸಿಂಧು ಕನಸು ಭಗ್ನವಾಯಿತು.
ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಅವರು ವಿಶ್ವದ 9ನೇ ಶ್ರೇಯಾಂಕಿತೆ ಚೀನಾದ ಆಟಗಾರ್ತಿ ಹೀ ಬಿಂಗ್ ಜಿಯಾವೊ ವಿರುದ್ಧ ನೇರ ಸೆಟ್‌ಗಳಿಂದ ಸೋತು ಪ್ಯಾರಿಸ್ ಕ್ರೀಡಕೂಟದಿಂದ ಹೊರಗುಳಿದಿದ್ದರು.
ಮತ್ತೊಂದೆಡೆ ಪುರುಷರ ಸಿಂಗಲ್ಸ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿದ್ದ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯಸೇನ್ ಅವರಿಂದಲ್ಲೂ ಭಾರತಕ್ಕೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಇದಲ್ಲದೆ ಪುರುಷರ ಡಬಲ್ಸ್‌ನಲ್ಲಿ ವಿಶ್ವದ ಆಗ್ರ ಶ್ರೇಯಾಂಕದ ಶಟ್ಲರ್‌ಗಳಿಗೆ ಸೋಲಿನ ರುಚಿ ತೋರಿಸಿ ಹಲವು ಓಪನ್ ಟೂರ್ನಿ ಪ್ರಶಸ್ತಿಯನ್ನು ಗೆದ್ದಿದ್ದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಮೇಲೂ ಬೆಟ್ಟದಷ್ಟು ನಿರೀಕ್ಷೆಗಳಿದ್ದರೂ, ಒಲಿಂಪಿಕ್ ಪದಕ ಗೆಲ್ಲುವಲ್ಲಿ ವಿಫಲವಾದರು.
ಇನ್ನು ಮಹಿಳೆಯರ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಅವರು ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಈ ರೀತಿ ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಸರಣಿ ಸೋಲಿಗೆ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ನೀಡಿಲ್ಲ ಎಂದೇನಿಲ್ಲ. ಪ್ಯಾರಿಸ್ ಕ್ರೀಡಾಕೂಟಕ್ಕೆ ಭಾಗವಹಿಸಿದ್ದ ಬ್ಯಾಡ್ಮಿಂಟನ್ ತಾರೆಗಳಿಗೆ ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿದೆ. ಜೊತೆಗೆ ಎಲ್ಲಾ ರೀತಿಯಲ್ಲೂ ಕ್ರೀಡಾಪಟುಗಳಿಗೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸಿದೆ. ಆದರೂ ಭಾರತಕ್ಕೆ ಪದಕ ಗೆದ್ದು ಕೊಡುವಲ್ಲಿ ಕ್ರೀಡಾಪಟುಗಳು ಮುಗ್ಗರಿಸಿದ್ದಾರೆ.
ಕಳೆದ ಬಾರಿ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 7 ಪದಕಗಳನ್ನು ಗೆದ್ದಿತ್ತು. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕಗಳ ಸಂಖ್ಯೆಯನ್ನು ಎರಡಂಕಿಗೆ ದಾಟಿಸಲು ಕ್ರೀಡಾಪಟುಗಳ ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರ ಮುಂದಾಗಿತ್ತು.
ಹೀಗಾಗಿ ಬ್ಯಾಡ್ಮಿಂಟನ್‌ಗಳ ಮೇಲೆ ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿತ್ತು. ಇದು ಉಳಿದ ಸ್ಪರ್ಧೆಗಳಿಗೆ ಖರ್ಚು ಮಾಡದ ಹಣಕ್ಕಿಂತ ಹೆಚ್ಚಾಗಿತ್ತು.
ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಒಟ್ಟು 117 ಅಥ್ಲೀಟ್ಸ್‌ಗೆ 470 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿತ್ತು. ಅದರಲ್ಲಿ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೇ 72.03 ಕೋಟಿ ರೂಪಾಯಿ ಖರ್ಚು ಮಾಡಿರುವುದು ವಿಶೇಷವಾಗಿತ್ತು. ಆದರೆ ಯಾವೋಬ್ಬ ಬ್ಯಾಡ್ಮಿಂಟನ್ ತಾರೆಗಳು ಪದಕ ಗೆಲ್ಲದೆ ಬರಿಗೈಯಲ್ಲಿ ತವರಿಗೆ ಹಿಂತಿರುಗಿರುವುದು ಬೇಸರ ತರಿಸಿದೆ. ಇದನ್ನೂ ಹೊರತು ಪಡಿಸಿದರೇ ಅಥ್ಲೆಟಿಕ್ಸ್‌ಗಾಗಿ ಬರೋಬ್ಬರಿ 96.08 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
1) ಪಿವಿ ಸಿಂಧು ಮತ್ತು ತರಬೇತಿ- 3.13 ಕೋಟಿ ರೂ.
2) ಸಾತ್ವಿಕ್-ಚಿರಾಗ್ ಜೋಡಿ- 5.62 ಕೋಟಿ ರೂ.
3) ಎಚ್‌ಎಸ್ ಪ್ರಣಯ್- 1.8 ಕೋಟಿ ರೂ.
4) ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ- 3 ಕೋಟಿ ರೂ.
5) ಲಕ್ಷ್ಯ ಸೇನ್- 9.33 ಲಕ್ಷ ರೂ.