
ಹೈದರಾಬಾದ್, ಡಿಸೆಂಬರ್ 26: ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಸೋಲಿನ ಹೊರತಾಗಿಯೂ ಹಾಲಿಚಾಂಪಿಯನ್ ಹೈದರಾಬಾದ್ ಹಂಟರ್ಸ್ ತಂಡ ಹೈದರಾಬಾದ್‌ನ ಗಚಿಬೌಲಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ನಲ್ಲಿ ಚೆನ್ನೈ ಸ್ಮ್ಯಾಶರ್ಸ್ ವಿರುದ್ಧ 5-0ಯ ಗೆಲುವು ಸಾಧಿಸಿದೆ.
ಮಂಗಳವಾರ (ಡಿಸೆಂಬರ್ 25) ಮಹಿಳಾ ವಿಭಾಗದ ಸಿಂಗಲ್ಸ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ವಿಶ್ವ ನಂ.8ನೇ ಕೊರಿಯಾ ಆಟಗಾರ್ತಿ ಸುಂಗ್ ಜಿ-ಹ್ಯುನ್ ಎದುರು 15-13, 14-15, 15-7ರ ಹಿನ್ನಡೆ ಅನುಭವಿಸಿದರು. ಆದರೆ ಡಬಲ್ಸ್ ವಿಭಾಗದಲ್ಲಿ ಗೆಲುವು ದಾಖಲಿಸಿದ್ದು ಹಂಟರ್ಸ್ ಗೆಲುವಿಗೆ ನೆರವು ನೀಡಿತು.
ಪುರುಷರ ಡಬಲ್ಸ್‌ನಲ್ಲಿ ಹೈದರಾಬಾದ್ ಹಂಟರ್ಸ್ ಪ್ರತಿನಿಧಿಸಿದ್ದ ಬೋಡಿನ್ ಇಸಾರಾ (ಥೈಲ್ಯಾಂಡ್) ಮತ್ತು ಕಿಮ್ ಸಾ ರಂಗ್ (ಕೊರಿಯಾ) ಜೋಡಿ ಚೆನ್ನೈಯ ಚಿನ್ ಚುಂಗ್ ಓರ್ ಮತ್ತು ಬಿ ಸುಮೀತ್ ರೆಡ್ಡಿ ಜೊತೆಯನ್ನು ಹಿಮ್ಮೆಟ್ಟಿಸಿತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಹಂಟರ್ಸ್ ತಂಡ ಪುಣೆ 7 ಏಸಸ್ ವಿರುದ್ಧ ಶುಭಾರಂಭ ಕಂಡಿತ್ತು.