ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಹಾಗೂ ಭರವಸೆಯ ಆಟಗಾರ ಲಕ್ಷ್ಯ ಸೇನ್ ಅವರು ಸೈಯ್ಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಹಂತ ಪ್ರವೇಶಿಸಿದ್ದಾರೆ. ಎಂಟರ ಘಟ್ಟದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಉಭಯ ಆಟಗಾರರು ತಮ್ಮ ತಮ್ಮ ವಿಭಾಗದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇಬ್ಬರೂ ಸ್ಟಾರ್ ಆಟಗಾರರು ಎರಡು ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುನ್ನಡೆ ಸಾಧಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ, ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿರುವ ಪಿವಿ ಸಿಂಧು 21-15, 21-13 ಅಂಕಗಳಿಂದ ಚೀನಾದ ದೆ ವಾಂಗ್ ವಿರುದ್ಧ ಜಯ ಸಾಧಿಸಿದರು. ಪ್ತಾರೀಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಅಪಾರ ಅಭಿಮಾನಿಗಳನ್ನು ಗಳಿಸಿರುವ ಭಾರತದ ಸ್ಟಾರ್ ಶೆಟ್ಲರ್ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ವಿಭಾಗದ ಎಂಟರ ಘಟ್ಟದ ಪಂದ್ಯದಲ್ಲಿ 21-8, 21-19 ರಿಂದ ಮೈರಾಬಾ ಲುವಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿದರು.

ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಅವರ ಜಿದ್ದಿಗೆ ಯಾವುದೇ ಹಂತದಲ್ಲೂ ಚೀನಾದ ಆಟಗಾರ್ತಿ ಪ್ರತಿ ಸ್ಪರ್ಧೆ ಒಡ್ಡಲು ಸಾಧ್ಯವೇ ಆಗಲಿಲ್ಲ. ಉಭಯ ಆಟಗಾರರು ಆರಂಭದಲ್ಲಿ ಕೊಂಚ ಜಿದ್ದಾಜಿದ್ದು ಪ್ರದರ್ಶಿಸಿದರು. ಆರಂಭದಲ್ಲಿ 4-4 ಅಂಕಗಳಿಂದ ಪಂದ್ಯ ಸಮಬದಲ್ಲಿ ಸಾಗಿತ್ತು. ಆದರೆ ಈ ಅವಧಿಯ ಯಾವುದೇ ಹಂತದಲ್ಲಿ ಸಿಂಧು ಎದುರಾಳಿ ಮುನ್ನಡೆ ಸಾಧಿಸುವ ಅವಕಾಶವನ್ನೇ ನೀಡಲಿಲ್ಲ. ಪರಿಣಾಮ ಮೊದಲ ಗೇಮ್ ಸುಲಭಾವಗಿ 21-16ರಿಂದ ತಮ್ಮ ವಶಕ್ಕೆ ಮಾಡಿಕೊಂಡರು.
ಎರಡನೇ ಅವಧಿಯ ಆರಂಭದಲ್ಲೂ ಜಿದ್ದಾಜಿದ್ದಿನ ಆಟ ಕೂಡಿಬಂದಿತ್ತು. ಆದರೆ ಈ ಅವಧಿಯಲ್ಲಿ ಸಿಂಧು ತಮ್ಮ ಅನುಭವವನ್ನು ಬಳಸಿ ಆಟವನ್ನು ಆಡಿದರು. ಪರಿಣಾಮ ಅರ್ಹ ಜಯದ ಸನಿಹದಲ್ಲಿ ನಿಂತರು. ಎರಡನೇ ಗೇಮ್‌ನ ಎರಡನೇ ಅವಧಿಯಲ್ಲಿ 16-15 ಅಂಕಗಳಿಂದ ಆಟ ರೋಚಕತೆ ಹುಟ್ಟಿಸಿತ್ತು. ಆದರೆ ಈ ವೇಳೆಯೂ ಧೃತಿ ಗೆಡದ ಸಿಂಧು ಅಮೋಘ ಆಟವನ್ನು ಆಡಿ ಜಯ ಸಾಧಿಸಿದರು.
ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿರುವ ಲಕ್ಷ್ಯ ಸೇನ್ ಅವರು ಮೈರಾಬಾ ಲುವಾಂಗ್ ವಿರುದ್ಧ ಅಮೋಘ ಆಟದ ಪ್ರದರ್ಶನ ನೀಡಿದರು. 41 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಲಕ್ಷ್ಯ ಸೇನ್ ಜಯ ಸಾಧಿಸಿದರು. ಮೊದಲ ಗೇಮ್‌ನಲ್ಲಿ ಭಾರೀ ಅಂತರವನ್ನು ಕಾಯ್ದುಕೊಂಡಿದ್ದ ಲಕ್ಷ್ಯ ಸೇನ್, ಈ ವೇಳೆ ಸತತ ಏಳು ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಎರಡನೇ ಗೇಮ್‌ನಲ್ಲೂ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿದರು.
ಶನಿವಾರ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಎಲ್ಲರ ಚಿತ್ತ ಭಾರತದ ಸ್ಟಾರ್ ಅಥ್ಲೀಟ್‌ಗಳ ಮೇಲೆ ನೆಟ್ಟಿರಲಿದೆ.