ಮೇ 26 ಭಾನುವಾರ, ಭಾರತ ಬ್ಯಾಡ್ಮಿಂಟನ್ ತಾರೆ ಹಾಗು ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಪಿವಿ ಸಿಂಧು ಅವರು ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ.
ಈ ವರ್ಷದ ಮೊದಲ ಫೈನಲ್ ಆಡಿದ ಪಿವಿ ಸಿಂಧು ಅವರು ಪ್ರಶಸ್ತಿ ಕಳದುಕೊಂಡಿದ್ದಾರೆ. ಸಿಂಧು ವಿರುದ್ಧ ಚೀನಾದ ಆಟಗಾರ್ತಿ ವಾಂಗ್ ಕ್ಸಿ ಯಿ ಅವರು ಗೆಲುವು ಸಾಧಿಸಿದ್ದಾರೆ. ವಾಂಗ್ ಕ್ಸಿ ಯಿ ಎದುರು 21-16, 5-21, 16-21 ಅಂತರದಲ್ಲಿ ಸಿಂಧು ಸೋಲು ಕಂಡಿದ್ದಾರೆ.

ಫೈನಲ್ ಪಂದ್ಯವನ್ನು ಅಬ್ಬರದಿಂದಲೇ ಆರಂಭಿಸಿದ ಪಿವಿ ಸಿಂಧು ಆಕ್ರಮಣಕಾರಿ ಆಟದ ಮೂಲಕ ಮೊದಲ ಸೆಟ್ ಅನ್ನು 21-16ರಲ್ಲಿ ಗೆದ್ದುಕೊಂಡರು. ಈ ಸೆಟ್‌ನಲ್ಲಿ ಸಿಂಧು ತಮ್ಮ ಹಳೆಯ ಆಕ್ರಮಣ ಶೈಲಿಯಲ್ಲಿ ಕಾಣಿಸಿಕೊಂಡರು.
ಆದರೆ, ಎರಡನೇ ಸೆಟ್‌ನಲ್ಲಿ ಚೀನಾ ಆಟಗಾರ್ತಿ ಆಟಕ್ಕೆ ಕಮ್‌ಬ್ಯಾಕ್ ಮಾಡಿ ಸಿಂಧುಗೆ ಪಾಯಿಂಟ್ಸ್ ಗಳಿಸುವ ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಎರಡನೇ ಸೆಟ್‌ನಲ್ಲಿ 5-21 ಅಂತರದಿಂದ ವಾಂಗ್ ಕ್ಸಿ ಯಿ ಜಯ ಸಾಧಿಸಿದರು.
ಕೊನೆಯ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಉಭಯ ಆಟಗಾರರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಚೀನಾ ಆಟಗಾರ್ತಿ ಸಿಂಧುಗೆ ಆಟಕ್ಕೆ ಮರಳಲು ಅವಕಾಶ ಕೊಡಲಿಲ್ಲ. ಸಿಂಧು ಅವರನ್ನು 16-21 ರಿಂದ ಸೋಲಿಸುವ ಮೂಲಕ ಮಲೇಷ್ಯಾ ಮಾಸ್ಟರ್ಸ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ವಾಂಗ್ ಕ್ಸಿ ಯಿ ವಶಪಡಿಸಿಕೊಂಡರು.
ಶನಿವಾರ 1 ಗಂಟೆ 28 ನಿಮಿಷಗಳ ಕಾಲ ನಡೆದ ಸೆಮಿಫೈನಲ್‌ನಲ್ಲಿ ಪಿವಿ ಸಿಂಧು ಅವರು ಥಾಯ್ಲೆಂಡ್‌ನ ಇನ್ ಫಾರ್ಮ್ ಬುಸಾನನ್ ಒಂಗ್‌ಬಾಮ್ರುಂಗ್‌ಫಾನ್ ವಿರುದ್ಧ ಸೆಣಸಾಡಿದ್ದರು.
ಪಿವಿ ಸಿಂಧು ಮೊದಲ ಸೆಟ್‌ನಲ್ಲಿ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ 13-21 ರಿಂದ ಸೋತಿದ್ದರು. ಬಳಿಕ ಸಿಡಿದೆದ್ದ ಪಿವಿ ಸಿಂಧು 21-16 ರಲ್ಲಿ ಬುಸಾನನ್‌ರನ್ನು ಸೋಲಿಸಿ 2ನೇ ಸೆಟ್ ಗೆದ್ದುಕೊಂಡರು.
ನಂತರ ನಿರ್ಣಾಯಕ ಸೆಟ್‌ನಲ್ಲಿ ಸಿಂಧು ಯಾವುದೇ ತಪ್ಪುಗಳನ್ನು ಮಾಡಲಿಲ್ಲ. ಬುಸಾನನ್ ಅವರು ಆಕ್ರಮಣ ಮಾಡಲು ಯಾವುದೇ ಅವಕಾಶ ನೀಡದೆ 21-12 ರಲ್ಲಿ ಗೆದ್ದು ಮಲೇಷ್ಯಾ ಮಾಸ್ಟರ್ಸ್‌ನ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದರು.
ಈ ಟೂರ್ನಿಯನ್ನು ಮಲೇಷ್ಯಾದ ಕೌಲಾಲಂಪುರದಲ್ಲಿ ಆಯೋಜಿಸಲಾಗಿದೆ. ಮಲೇಷ್ಯಾ ಮಾಸ್ಟರ್ಸ್, ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡ್ಲ್ಯೂಎಫ್) ವರ್ಲ್ಡ್ ಟೂರ್ ಸೂಪರ್ 500 ಮಟ್ಟದ ಪಂದ್ಯಾವಳಿಯಾಗಿದೆ. ಪಿವಿ ಸಿಂಧು 2013 ಮತ್ತು 2016ರಲ್ಲಿ ಎರಡು ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.