ಕೌಲಾಲಂಪುರ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಭರ್ಜರಿ ಪ್ರದರ್ಶನ ಮುಂದುವರಿಸಿದ್ದಾರೆ. ಮಲೇಷ್ಯಾ ಓಪನ್ ಸೂಪರ್ 1000 ನಲ್ಲಿ ಸಿಂಧು ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ. ದೀರ್ಘಾವಧಿ ಗಾಯದಿಂದ ಬಳಲುತ್ತಿದ್ದ ಸಿಂಧು ಅವರು ಮೈದಾನಕ್ಕೆ ಮರಳಿದ ಬಳಿಕ ಅಮೋಘ ಪ್ರದರ್ಶನ ನೀಡುತ್ತಿದ್ದು ಭರವಸೆ ಮೂಡಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 30 ವರ್ಷದ ಸಿಂಧು ಮೊದಲ ಗೇಮ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರು. ಈ ವೇಳೆ ಸಿಂಧು 21-11 ರಿಂದ ಏಕಪಕ್ಷೀಯ ಮುನ್ನಡೆ ಸಾಧಿಸಿದ್ದರು. ಜಪಾನ್ ಆಟಗಾರ್ತಿ ಅಕಾನೆ ಯಮಗುಚಿ ಎರಡನೇ ಗೇಮ್‌ಗೂ ಮುನ್ನ ಗಾಯದ ಸಮಸ್ಯೆಯನ್ನು ಎದುರಿಸಿದರು. ಹೀಗಾಗಿ ಅವರು ಮೈದಾನದಿಂದ ದೂರ ಉಳಿಯಬೇಕಾಯಿತು.ಇದರ ಲಾಭವನ್ನು ಪಡೆದ ಸಿಂಧು ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.

ಆರಂಭದಲ್ಲಿ ಮೊಣಕಾಲಿಗೆ ಬ್ರೇಸ್ ಧರಿಸಿ ಅಂಗಳಕ್ಕೆ ಇಳಿದಿದ್ದರು. ಇದೇ ವೇಳೆ ಇವರಿಗೆ ನೋವು ಬಹುವಾಗಿ ಕಾಡಿತ್ತು. ಮೊದಲ ಗೇಮ್‌ನಲ್ಲಿ ಅಕಾನೆ ಆಡಿದರೂ, ಸಹ ಈ ಆಟವನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಕಾನೆ ಅವರ ಪ್ರದರ್ಶನಕ್ಕೆ ಗಾಯ ಅಡ್ಡಿಯಾಯಿತು. ಮೂರು ವರ್ಷಗಳ ನಂತರ ಪಿವಿ ಸಿಂಧು ಸೂಪರ್ 1000 ಟೂರ್ನಮೆಂಟ್‌ನ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈಗ ಭಾರತೀಯ ಅಭಿಮಾನಿಗಳ ಕಣ್ಣುಗಳು ನಾಲ್ಕರ ಘಟ್ಟದ ಪಂದ್ಯದ ಮೇಲೆ ನೆಟ್ಟಿವೆ. ಸಿಂಧು, ಅಕಾನೆ ವಿರುದ್ಧ 15ನೇ ಜಯ ದಾಖಲಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಅವರು ಇಂಡೋನೇಷ್ಯಾ ಅಥವಾ ಚೀನಾದ ಆಟಗಾರ್ತಿಯರ ಸವಾಲು ಎದುರಿಸಲಿದ್ದಾರೆ.
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಪದಕ ಗೆದ್ದು ಬೀಗಿದ್ದಾರೆ. ರಿಯೊದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದರೆ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.