ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಈ ವರ್ಷದ ಆರಂಭವನ್ನು ಗೆಲುವಿನೊಂದಿಗೆ ಮಾಡಿದ್ದಾರೆ. ಇವರು ಮಲೇಷ್ಯಾ ಓಪನ್ ಸೂಪರ್ 1000 ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಚೈನೀಸ್ ತೈಪೆಯ ಸುಂಗ್ ಶುವೊ ಯುನ್ ವಿರುದ್ಧ ಭರ್ಜರಿ ಜಯ ಸಾಧಿಸಿದರು.
ಕಳೆದ ಕೆಲವು ದಿನಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸಿಂಧು ಈಗ ಚೇತರಿಸಿಕೊಂಡಿದ್ದು, ಭರ್ಜರಿ ಪ್ರದರ್ಶನ ನೀಡಿದ್ದಾರೆ. 30 ವರ್ಷದ ಪಿವಿ ಸಿಂಧು ಅಕ್ಟೋಬರ್‌ನಲ್ಲಿ ಕಾಲಿನ ಗಾಯದಿಂದ ಬಳಲುತ್ತಿದ್ದರು. ಇವರು ಮಲೇಷ್ಯಾ ಓಪನ್‌ನಲ್ಲಿ ಎರಡೂ ಗೇಮ್‌ಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದರು. ಸಿಂಧು 21-14, 22-22 ರಿಂದ ಚೈನೀಸ್ ತೈಪೆಯ ಆಟಗಾರ್ತಿಯನ್ನು 51 ನಿಮಿಷಗಳ ಹೋರಾಟದಲ್ಲಿ ಮಣಿಸಿದರು.

ಸಿಂಧು ಮೊದಲ ಗೇಮ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಈ ವೇಳೆ ಆರಂಭದಲ್ಲಿ ಕೊಂಚ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಸಿಂಧು ಬಳಿಕ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಸಫಲರಾದರು. ಇವರು ಮೊದಲಾವಧಿಯಲ್ಲಿ 11-5 ರಿಂದ ಮುನ್ನಡೆ ಸಾಧಿಸಿದರು. ಬಳಿಕವೂ ಹಿಂತಿರುಗಿ ನೋಡದ ಸಿಂಧು ಭರ್ಜರಿ ಜಯ ದಾಖಲಿಸಿ ಮುನ್ನಡೆದರು. ಎರಡನೇ ಗೇಮ್‌ನಲ್ಲೂ ಸಿಂಧು ಸಮಯೋಚಿತ ಆಟದ ಪ್ರದರ್ಶನ ನೀಡಿದರು. ಇವರು ಈ ವೇಳೆ ಎದುರಾಳಿ ಆಟಗಾರ್ತಿಗೆ ಸುಲಭವಾಗಿ ಅಂಕಗಳನ್ನು ಬಿಟ್ಟುಕೊಡಲಿಲ್ಲ. ಫಸ್ಟ್ ಹಾಫ್‌ನಲ್ಲಿ ಸಿಂಧು 11-8ರಿಂದ ಮುನ್ನಡೆ ಪಡೆದರು. ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಭರ್ಜರಿ ಸ್ನ್ಯಾಷ್ ಹಾಗೂ ಗ್ಯಾಪ್ ಶಾಟ್‌ಗಳನ್ನು ಪ್ರಯೋಗಿಸಿದ ಸಿಂಧು ಅರ್ಹ ಜಯ ಸಾಧಿಸಿದರು.
ಟ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ ಜೋಡಿ ಮಹಿಳಾ ಡಬಲ್ಸ್‌ಬನಲ್ಲಿ ಜಯ ಸಾಧಿಸುವಲ್ಲಿ ವಿಫಲವಾಯಿತು. ಈ ಜೊಡಿ 1 ಗಂಟೆ ಆರು ನಿಮಿಷ ನಡೆದ ಹೋರಾಟದಲ್ಲಿ ಇಂಡೋನೇಷ್ಯಾದ ಜೋಡಿ ವಿರುದ್ಧ ಸೋಲು ಕಂಡಿತು. ಇನ್ನೊಂದು ಮಹಿಳೆಯ ಡಬಲ್ಸ್ ಪಂದ್ಯದಲ್ಲಿ ರುತಪರ್ಣ ಪಾಂಡಾ ಜೋಡಿ ಸಹ ಸೋಲು ಕಂಡಿತು. ಈ ಜೋಡಿ ಕೇವಲ 30 ನಿಮಿಷದ ಹೋರಾಟದಲ್ಲಿ ಮಲೇಷ್ಯಾ ಜೋಡಿಯ ವಿರುದ್ಧ ಸೋಲು ಕಂಡಿತು.