
ನವದೆಹಲಿ, ಸೆಪ್ಟೆಂಬರ್ 29: ಬಾಲಿವುಡ್ ನಲ್ಲಿ ಮತ್ತೊಂದು ಕ್ರೀಡಾಧಾರಿತ ಸಿನಿಮಾ ಬರುವುದರಲ್ಲಿದೆ. ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾ ಇದಾಗಿದ್ದು, ಸ್ಟಾರ್ ಶೆಟ್ಲರ್ ಪಾತ್ರಕ್ಕೆ ಶ್ರದ್ಧಾ ಕಪೂರ್ ಜೀವ ತುಂಬುತ್ತಿದ್ದಾರೆ. 'ಸೈನಾ' ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಮೊದಲ ನೋಟಕ್ಕೆ ಇಷ್ಟ ಆಗುವಂತಿದೆ.
ಈ ಫೋಟೋವನ್ನೊಮ್ಮೆ ದಿಟ್ಟಿಸಿ ನೋಡಿ; ಈ ಹುಡುಗಿಯೂ ಥೇಟ್ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ರೀತಿಯೇ ಇದ್ದಾಳೆ ಅಲ್ವಾ. ಆದರೆ ಶ್ರದ್ಧಾ ಅವರು ಸೈನಾ ಆಗಿ ಪರಕಾಯ ಪ್ರವೇಶಿಸುವುದು ಸುಲಭವಾಗಿಲ್ಲ. ಪಾತ್ರಕ್ಕೆ ನೈಜತೆ ಬರಬೇಕಾದರೆ ಶ್ರದ್ಧಾ ಅವರು ಖುದ್ದಾಗಿ ಸೈನಾ ಮತ್ತು ಬ್ಯಾಡ್ಮಿಂಟನ್ ರಾಷ್ಟ್ರೀಯ ಕೋಚ್ ಗೋಪಿ ಚಂದ್ ಅವರೊಟ್ಟಿಗೆ ತರಬೇತಿ ಪಡೆಯಬೇಕಾಗಿ ಬಂದಿದ್ದಿದೆ.
ಸೈನಾ ಪಾತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿರುವ ಶ್ರದ್ಧಾ, ಬಹಳ ದಿನಗಳ ಕಾಲ ಬ್ಯಾಡ್ಮಿಂಟನ್ ಅಭ್ಯಾಸ ನಡೆಸಿದ್ದಾರೆ. ಸೈನಾ ಲುಕ್ ಬರಲು ಸಾಕಷ್ಟು ಕಸರತ್ತು ಕೂಡ ಮಾಡಿದ್ದಾರೆ. ಸಪ್ಟೆಂಬರ್ 22ರಂದು ಈ ಸಿನಿಮಾ ಶೂಟಿಂಗ್ ಶುರು ಆಗಿದೆ. ಅಮೊಲ್ ಗುಪ್ತ್ (Amol Gupte) ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.
ಸ್ಪೋರ್ಟ್ಸ್ ಥೀಮ್ ನಲ್ಲಿ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಕ್ರೀಡಾ ವಿಷಯಾಧಾರಿತ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಿಸಿದ ನಿದರ್ಶನಗಳೂ ಸಾಕಷ್ಟಿವೆ. ಭಾಗ್ ಮಿಲ್ಖಾ ಭಾಗ್, ಅನ್ ಟೋಲ್ಡ್ ಸ್ಟೋರಿ ಆಫ್ ಎಂಎಸ್ ಧೋನಿ, ದಂಗಲ್ ಇವೆಲ್ಲ ಕ್ರೀಡಾ ಥೀಮ್ ನಡಿಯಲ್ಲಿ ಮಿಂಚಿದ ಸಿನಿಮಾಗಳು. ಸೈನಾ ಕೂಡ ಈ ಸಾಲಿನಲ್ಲಿ ಸೇರುವುದರಲ್ಲಿದೆ.
'ಸೈನಾ' ಚಿತ್ರದಲ್ಲಿ ತಾನು ನಟುಸುತ್ತಿರುವ ಬಗ್ಗೆ ಖುಷಿ ಹಂಚಿಕೊಂಡಿರುವ ಕಪೂರ್, ಚಿತ್ರದ ಫಸ್ಟ್ ಲುಕ್ ಅನ್ನು ತಮ್ಮ ಇನ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಚಿತ್ರದ ಫಸ್ಟ್ ಲುಕ್ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದುಕೊಂಡಿದೆ.