Saina Nehwal Retirement: ಭಾರತದ ಮೊದಲ ಬ್ಯಾಡ್ಮಿಂಟನ್ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಬ್ಯಾಡ್ಮಿಂಟನ್‌ಗೆ ವಿದಾಯ ಘೋಷಿಸಿದ್ದಾರೆ. ಪಾಡ್‌ಕಾಸ್ಟ್‌ವೊಂದರಲ್ಲಿ ತಾವು ನಿವೃತ್ತಿ ಘೋಷಿಸಿರುವುದನ್ನು ದೃಢಪಡಿಸಿದ್ದಾರೆ. ಹಾಗಾದ್ರೆ ಕಾರಣ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಇವರ ಸಾಧನೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಮಹತ್ವದ ಸಾಧನೆ ಮಾಡಿರುವ ಸೈನಾ ನೆಹ್ವಾಲ್ ಅವರು ಇದೀಗ ಬ್ಯಾಡ್ಮಿಂಟನ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಮೊದಲ ಬ್ಯಾಡ್ಮಿಂಟನ್ ಒಲಿಂಪಿಕ್ ಪದಕ ವಿಜೇತೆಯಾದ ಅವರು, ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡುತ್ತಾ ನಿವೃತ್ತಿ ಬಗ್ಗೆ ದೃಢಪಡಿಸಿದರು. ಕಳೆದ ಎರಡು ವರ್ಷಗಳಿಂದ ಅವರು ದೀರ್ಘಕಾಲದ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದು, ಉನ್ನತ ಮಟ್ಟದ ಕ್ರೀಡೆಯಲ್ಲಿ ಬೇಕಾಗುವ ದೈಹಿಕ ಒತ್ತಡವನ್ನು ತಮ್ಮ ದೇಹ ಇನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಆಗಿರುವ ಸೈನಾ, 2023ರಲ್ಲಿ ನಡೆದ ಸಿಂಗಾಪುರ್ ಓಪನ್‌ನಲ್ಲಿ ಕೊನೆಯ ಬಾರಿ ಸ್ಪರ್ಧಾತ್ಮಕ ಪಂದ್ಯವನ್ನಾಡಿದ್ದರು. ಆದರೆ ಆ ಸಮಯದಲ್ಲಿ ಅವರು ಅಧಿಕೃತವಾಗಿ ನಿವೃತ್ತಿ ಘೋಷಿಸಿರಲಿಲ್ಲ. ಆದರೆ, ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಅವರು, ವಿದಾಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸೈನಾ ನೆಹ್ವಾಲ್ ಹೇಳಿದ್ದೇನು?: "ನಾನು ಎರಡು ವರ್ಷಗಳ ಹಿಂದೆಯೇ ಆಟವನ್ನು ನಿಲ್ಲಿಸಿದ್ದೆ. ನಾನು ಕ್ರೀಡಾ ಕ್ಷೇತ್ರಕ್ಕೆ ನನ್ನ ಇಚ್ಛೆಯಂತೆ ಬಂದೆ ಮತ್ತು ಅದೇ ರೀತಿಯಲ್ಲಿ ಹೊರಬಂದೆ. ಇನ್ನು ಆಡಲು ಸಾಮರ್ಥ್ಯ ಹೊಂದಿರದಿದ್ದರೆ, ಅದನ್ನು ಒಪ್ಪಿಕೊಳ್ಳುವುದು ಸಹಜ. ಅದರಲ್ಲಿ ಬೇಸರಪಡಬೇಕಾದ ಅವಶ್ಯಕತೆಯಿಲ್ಲ," ಎಂದು ಹೇಳಿದ್ದಾರೆ.
ಮಾಜಿ ವಿಶ್ವ ನಂಬರ್ 1 ಆಗಿದ್ದ ಸೈನಾ ಅವರು, ಮೊಣಕಾಲಿನ ಗಾಯದ ಕಾರಣದಿಂದ ನಿರಂತರ ಹಾಗೂ ಹೆಚ್ಚಿನ ತೀವ್ರತೆಯ ತರಬೇತಿ ನಡೆಸುವುದು ಅಸಾಧ್ಯವಾಗಿತ್ತು ಅಂತಲೂ ಇದೇ ವೇಳೆ ಸ್ಪಷ್ಟಪಡಿಸಿದರು. ಸೈನಾ ನೆಹ್ವಾಲ್ ಅವರ ನಿವೃತ್ತಿ ಭಾರತೀಯ ಬ್ಯಾಡ್ಮಿಂಟನ್‌ಗೆ ದೊಡ್ಡ ನಷ್ಟವಾದರೂ, ಅವರ ಸಾಧನೆಗಳು ಮುಂದಿನ ಪೀಳಿಗೆ ಆಟಗಾರರಿಗೆ ಸದಾ ಪ್ರೇರಣೆಯಾಗಿ ಉಳಿಯಲಿವೆ. ಅವರ ಹಾದಿಯಲ್ಲಿ ನಡೆದು ಅನೇಕ ಯುವ ಶೆಟ್ಲರ್‌ಗಳು ರಾಷ್ಟ್ರಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೂ ತಮ್ಮ ಚಾಪು ಮೂಡಿಸಿದ್ದಾರೆ.
ಕಾರ್ಟಿಲೆಜ್‌ನಲ್ಲಿ ಸವೆತ ಮತ್ತು ಹರಿದುಹೋಗುವಿಕೆ ಇದೆ. ಸಂಧಿವಾತವಿದೆ. "ನನ್ನ ಪೋಷಕರು ಮತ್ತು ತರಬೇತುದಾರರು ಇದರ ಬಗ್ಗೆ ತಿಳಿದಿರಬೇಕಿತ್ತು. ನಾನು ಇನ್ಮುಂದೆ ಅದನ್ನು ಮಾಡಲು ಸಾಧ್ಯವಿಲ್ಲ ಮತ್ತು ಅದು ಕಷ್ಟ ಎಂದು ಅವರಿಗೆ ಹೇಳಿದೆ" ಎಂದು ಸೈನಾ ಹೇಳಿದರು.
ಸೈನಾ ಪಡೆದ ಪ್ರಶಸ್ತಿಗಳು: 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ, ಇತರ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಹಲವಾರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಈ ಮೂಲಕ ತಮ್ಮ ವೃತ್ತಿಜೀವನದಲ್ಲಿ ಒಟ್ಟು 18 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು ಕಂಚು ಪದಕಗಳನ್ನು ಗೆಲ್ಲುವ ಮೂಲಕ ಅಭಿಯಾನ ಆರಂಭಿಸಿದ್ದ ಸೈನಾ ನೆಹ್ವಾಲ್, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಮತ್ತು ಉಬರ್ ಕಪ್‌ನಲ್ಲಿ ಎರಡು ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳು, ಒಂದು ಬೆಳ್ಳಿ ಪದಕ ಮತ್ತು ಒಂದು ಕಂಚಿನ ಪದಕ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಬಾರಿ ಕಂಚಿನ ಪದಕ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಕೂಡ ಪಡೆದುಕೊಂಡಿದ್ದಾರೆ.
2015ರಲ್ಲಿ ವಿಶ್ವದ ನಂ.1 ಬ್ಯಾಡ್ಮಿಂಟನ್ ತಾರೆಯಾಗಿ ಹೊರಹೊಮ್ಮಿದ್ದರು. ಅಷ್ಟೇ ಅಲ್ಲದೆ 2009ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2010 ರಲ್ಲಿ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇನ್ನು 2010 ರಲ್ಲಿ ಪದ್ಮಶ್ರೀ ಮತ್ತು 2016ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ. ಇದೀಗ ಅವರು 35ನೇ ವಯಸ್ಸಿನಲ್ಲಿ ಅವರು ನಿವೃತ್ತಿ ಘೋಷಣೆ ಮಾಡಿ ಶಾಕ್ ನೀಡಿದ್ದಾರೆ.