ಆಗಸ್ಟ್ 1 ಗುರುವಾರ, ಭಾರತದ ಸ್ಟಾರ್ ಶಟ್ಲರ್‌ಗಳಾದ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ 2024ರ ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನ ಕೊನೆಗೊಂಡಿದೆ.
ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಷಟ್ಲರ್ ಜೋಡಿ ಮಲೇಷ್ಯಾ ವಿರುದ್ಧ ಸೋಲನುಭವಿಸಬೇಕಾಯಿತು. ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವುಯಿ ಯಿಕ್ ಜೋಡಿಯು ಸಾತ್ವಿಕ್ ಮತ್ತು ಚಿರಾಗ್ ಅವರನ್ನು 21-13, 14-21, 21-16 ಸೆಟ್‌ಗಳ ಅಂತರದಿಂದ ಸೋಲಿಸಿದರು.

ಈ ಗೆಲುವಿನೊಂದಿಗೆ ಮಲೇಷ್ಯಾ ಜೋಡಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾರತ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಂದ ಪದಕದ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಈ ಸ್ಟಾರ್ ಜೋಡಿಯ ಪದಕ ಗೆಲ್ಲುವ ಕಸನು ಮೊದಲ ಒಲಿಂಪಿಕ್ಸ್‌ನಲ್ಲಿ ಭಗ್ನವಾಗಿದೆ.
ಎಂದಿನಂತೆ ಗೆಲ್ಲುವ ಉತ್ಸಾಹದಲ್ಲಿ ಭಾರತದ ಜೋಡಿ ಮೊದಲ ಸೆಟ್‌ನ ಆರಂಭದಲ್ಲಿಯೇ ಹಲವು ಅದ್ಭುತ ಸ್ಮ್ಯಾಷ್‌ಗಳನ್ನು ಮಾಡಿತು. ಮಲೇಷ್ಯಾ ಜೋಡಿಯು ಸಹ ಕಠಿಣ ಹೋರಾಟವನ್ನು ನೀಡಿತು.
ಮೊದಲ ಗೇಮ್‌ನಲ್ಲಿ ಮಧ್ಯ ವಿರಾಮದವರೆಗೆ, ಸಾತ್ವಿಕ್-ಚಿರಾಗ್ 11-10 ಸ್ಕೋರ್‌ನೊಂದಿಗೆ ಅಲ್ಪ ಅಂತರದಿಂದ ಮುನ್ನೆಡೆ ಸಾಧಿಸಿದ್ದರು. ಆದರೆ, ವಿರಾಮದ ಬಳಿಕ ಅದ್ಭುತ ಪ್ರದರ್ಶನ ನೀಡಿದ ಭಾರತ ಎದುರಾಳಿಗಳಿಗೆ ಹೆಚ್ಚಿನ ಅವಕಾಶ ನೀಡದೆ 21-13ರಿಂದ ಮೊದಲ ಸೆಟ್ ಗೆದ್ದು ಪ್ರಾಬಲ್ಯ ಸಾಧಿಸಿತ್ತು.
ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಕಂಡ ಭಾರತದ ಜೋಡಿ ಎರಡನೇ ಗೇಮ್ ನಲ್ಲಿ ಕಠಿಣ ಪೈಪೋಟಿ ಎದುರಿಸಿತು. ಟೋಕಿಯೊ 2020ರ ಕಂಚಿನ ಪದಕ ವಿಜೇತ ಮಲೇಷ್ಯಾದ ಚಿಯಾ-ಸೋಹ್ ಎರಡನೇ ಸೆಟ್‌ನಲ್ಲಿ ಅದ್ಭುತ ಪುನರಾಗಮನ ಮಾಡಿದರು.
ಎರಡನೇ ಸೆಟ್‌ನಲ್ಲಿ ಮಲೇಷ್ಯಾ ಜೋಡಿ ಮೊದಲ ಬಾರಿಗೆ 5-4 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು. ಈ ಗೇಮ್ ನಲ್ಲಿ ಮಲೇಷ್ಯಾ ಜೋಡಿ ಯಾವುದೇ ತಪ್ಪು ಮಾಡದೆ ಆಕ್ರಮಣಕಾರಿಯಾಗಿ ಆಡಿ ಭಾರತದ ಜೋಡಿಯನ್ನು 21-14 ರಿಂದ ಸೋಲಿಸಿತು.
ತಲಾ ಒಂದೊಂದು ಸೆಟ್‌ಗಳನ್ನು ಗೆದ್ದಿದ್ದ ಭಾರತ ಮತ್ತು ಮಲೇಷ್ಯಾ ನಡುವಿನ ಮೂರನೇ ಗೇಮ್ ರೋಮಂಚನಕಾರಿ ಆಗಿತ್ತು. 5-2 ಅಂಕಗಳಿಂದ ಹಿನ್ನಡೆಯಲ್ಲಿದ್ದ ಭಾರತದ ಜೋಡಿ ಅಮೋಘ ಆಟವಾಡಿ 5-5 ರಲ್ಲಿ ಸಮಬಲ ಸಾಧಿಸಿತು.
ಈ ಸಂದರ್ಭದಲ್ಲಿ ಎರಡೂ ಜೋಡಿಗಳು ಸೋಲು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಸಾತ್ವಿಕ್-ಚಿರಾಗ್ ತಮ್ಮ ದಾಳಿಯನ್ನು ಮುಂದುವರೆಸಿ ಮಧ್ಯ ವಿರಾಮದವರೆಗೆ 11-9 ಮುನ್ನಡೆಯಲ್ಲಿದ್ದರು. ಆದರೆ, ಮಲೇಷ್ಯಾ ಜೋಡಿ ಕೂಡ ಹಲವು ಅತ್ಯುತ್ತಮ ಹೊಡೆತಗಳನ್ನು ನೀಡಿ ಪಂದ್ಯವನ್ನು ಕಠಿಣಗೊಳಿಸಿ 14-14ರಲ್ಲಿ ಸಮಬಲಗೊಳಿಸಿತು.
ವಿರಾಮದ ನಂತರ ಭಾರತದ ಜೋಡಿ ತನ್ನ ವೇಗವನ್ನು ಕಳೆದುಕೊಂಡಿತು. ಈ ವೇಳೆ ಸಾತ್ವಿಕ್ ಮತ್ತಿ ಚಿರಾಗ್ ಅವರಿಂದ ಕೇವಲ 3 ಅಂಕಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಅಂತಿಮವಾಗಿ ಸಾತ್ವಿಕ್ ಮತ್ತು ಚಿರಾಗ್ 21-16 ರಿಂದ ಸೋಲನುಭವಿಸಬೇಕಾಯಿತು.