
ಗುವಾಂಗ್ಝೌ, ಡಿಸೆಂಬರ್ 15: ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಚೀನಾದ ಗುವಾಂಗ್ಝೌನಲ್ಲಿ ನಡೆಯುತ್ತಿರುವ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಸೆಮಿಫೈನಲ್‌ನಲ್ಲಿ ಸಿಂಧು, ರಾಚ್ಟಾನೋಕ್ ಇಂಟನಾನ್ ಅವರನ್ನು ಹಿಮ್ಮೆಟ್ಟಿಸಿದರು.
ಶನಿವಾರ (ಡಿಸೆಂಬರ್ 15) ನಡೆದ ಮಹಿಳಾ ವಿಭಾಗದ ಸಿಂಗಲ್ಸ್ ಸೆಮಿಫೈನಲ್ ಸ್ಪರ್ಧೆಯಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಸಿಂಧು, ಥೈಲ್ಯಾಂಡ್ ಆಟಗಾರ್ತಿ ರಾಚ್ಟಾನೋಕ್ ಅವರನ್ನು 21-16, 25-23ರ ನೇರ ಸೆಟ್ ನಿಂದ ಕೆಡವಿ ಮುನ್ನಡೆ ಗಿಟ್ಟಿಸಿಕೊಂಡರು.
ಇದು ಮೂರನೇ ಬಾರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಸಿಂಧು, ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.2ರ ಜಪಾನ್ ಆಟಗಾರ್ತಿ, ಹಾಲಿ ಚಾಂಪಿಯನ್ ಅಕೆನೆ ಯಮಾಗುಚಿ ಅವರನ್ನು, ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.1 ಆಟಗಾರ್ತಿ ತೈ ಝು ಯಿಂಗ್ ಅವರನ್ನು ಕೆಡವಿದ್ದರು. ಫೈನಲ್‌ನಲ್ಲಿ ಸಿಂಧು, ಜಪಾನ್ ಆಟಗಾರ್ತಿ ನೋಜೊಮಿ ಒಕುಹರಾ ಸವಾಲು ಸ್ವೀಕರಿಸಲಿದ್ದಾರೆ.