
ವುಹಾನ್, ಏಪ್ರಿಲ್ 25: ಭಾರತದ ಅನುಭವಿ ಆಟಗಾರ್ತಿ ಪಿವಿ ಸಿಂಧೂ ಮತ್ತು ಪ್ರತಿಭಾನ್ವಿತ ಆಟಗಾರ ಸಮೀರ್ ವರ್ಮಾ ಇಲ್ಲಿ ನಡೆಯುತ್ತಿರುವ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ಸ್ ತಲುಪಿದ್ದಾರೆ.
ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ವಿಶ್ವದ 6ನೇ ಶ್ರೇಯಾಂಕಿತೆ ಸಿಂಧೂ, ಗುರುವಾರ ನಡೆದ ಪ್ರಿಕ್ವಾರ್ಟರ್‌ಫೈನಲ್ಸ್ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಇಂಡೋನೇಷ್ಯಾದ ಆಟಗಾರ್ತಿ ಚೊರುನಿಸಿಯಾ ವಿರುದ್ಧ21-15, 21-19 ಅಂತರದ ನೇರ ಗೇಮ್‌ಗಳ ಜಯ ದಾಖಲಿಸಿದರು.
ಕೇವಲ 33 ನಿಮಿಷಗಳಲ್ಲಿ ಪಂದ್ಯ ಗೆದ್ದುಕೊಂಡ 23 ವರ್ಷದ ಹೈದರಾಬಾದ್ ಆಟಗಾರ್ತಿ ಸಿಂಧೂ, ಇದೀಗ ಸೆಮಿಫೈನಲ್ಸ್ ಅರ್ಹತೆಗಾಗಿ ಚೀನಾದ ಆಟಗಾರ್ತಿ ಕಾಯ್ ಯಾನ್‌ಯಾನ್ ವಿರುದ್ಧ ಸೆಣಸಲಿದ್ದಾರೆ. ಯಾನ್‌ಯಾನ್, ಅಂತಿಮ 16ರ ಘಟ್ಟದ ಪಂದ್ಯದಲ್ಲಿ 21-9, 21-15ರ ನೇರ ಗೇಮ್‌ಗಳಿಂದ ತಮ್ಮದೇ ದೇಶದವರಾದ ಯಿಪ್ ಪುಯ್ ಯಿನ್ ಅವರನ್ನು ಮಣಿಸಿದರು.
ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಏಕೈಕ ಭರವಸೆಯಾಗಿ ಉಳಿದಿರುವ ಮಾಜಿ ರಾಷ್ಟ್ರೀಯ ಚಾಂಪಿಯನ್ 24 ವರ್ಷದ ಸಮೀರ್ ವರ್ಮಾ, ಪ್ರಿಕ್ವಾರ್ಟರ್‌ಫೈನಲ್ಸ್ ಕದನದಲ್ಲಿ 21-12, 21-19 ಅಂತರದ ನೇರ ಗೇಮ್‌ಗಳಿಂದ ಹಾಂಕಾಂಗ್‌ನ ಆಟಗಾರ ಎನ್‌ಜಿ ಕಾ ಲಾಂಗ್ ಎದುರು ಗೆದ್ದು 8ರ ಘಟ್ಟಕ್ಕೆ ಕಾಲಿಟ್ಟಿದ್ದಾರೆ. ಸಮೀರ್ ತಮ್ಮ ಮುಂದಿನ ಪಂದದ್ಯದಲ್ಲಿ ಥಾಯ್ಲೆಂಡ್‌ನ ಸಿತ್ತಿಕೊಮ್ ಥಮಾಸಿನ್ ಅಥವಾ 2ನೇ ಶ್ರೇಯಾಂಕಿತ ಆಟಗಾರ ಚೀನಾದ ಶಿ ಯೂಕಿ ಅವರ ಸವಾಲೆದುರಿಸಲಿದ್ದಾರೆ.
ಇದೇ ವೇಳೆ ಮಿಶ್ರ ಡಬಲ್ಸ್ ವಿಭಾಗದಲ್ಲೂ ಭಾರತದ ಹೋರಾಟ ಕೊನೆಗೊಂಡಿದೆ. ಉತ್ಕರ್ಷ್ ಅರೋರಾ ಮತ್ತು ಕರಿಷ್ಮಾ ವಾಡ್ಕರ್ ಜೋಡಿ, 2ನೇ ಸುತ್ತಿನ ಪಂದ್ಯದಲ್ಲಿ 10-21, 15-21ರಲ್ಲಿ ಇಂಡೊನೇಷ್ಯಾದ ಹಫೀಜ್ ಫೈಝಲ್ ಮತ್ತು ಗ್ಲೋರಿಯಾ ಎಮ್ಯಾನುಯೆಲ್ ಎದುರು ಮುಗ್ಗರಿಸಿತು.