ಮಲೇಷಿಯನ್ ಓಪನ್: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಸಿಂಧು, ಶ್ರೀಕಾಂತ್


ಕ್ವಾಲಾಲಂಪುರ, ಜೂನ್ 29: ಮಲೇಷಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಪಿ.ವಿ. ಸಿಂಧು ಸೆಮಿಫೈನಲ್ಸ್‌ಗೆ ಲಗ್ಗೆ ಇಟ್ಟಿದ್ದಾರೆ.
ಟೂರ್ನಿಯಲ್ಲಿ ತಮ್ಮ ಚುರುಕಿನ ಆಟವನ್ನು ಮುಂದುವರಿಸಿದ ಶ್ರೀಕಾಂತ್, ಫ್ರಾನ್ಸ್‌ನ ಬ್ರೈಸ್ ಲೆವೆರ್ಡ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದರು.
ಮಹಿಳೆಯರ ವಿಭಾಗದಲ್ಲಿ ಪಿ.ವಿ.ಸಿಂಧು, ಸ್ಪೇನ್‌ನ ಕೆರೊಲಿನಾ ಮರಿನ್ ಅವರ ವಿರುದ್ಧ ನೇರ ಸೆಟ್‌ಗಳ ಗೆಲುವು ಪಡೆದುಕೊಳ್ಳುವ ಮೂಲಕ ನಾಲ್ಕರ ಘಟ್ಟ ಪ್ರವೇಶಿಸಿದರು.
ಮರಿನ್ ವಿರುದ್ಧ 22-20, 21-19 ಗೆದ್ದ ಸಿಂಧು, ಸೆಮಿಫೈನಲ್‌ನಲ್ಲಿ ವಿಶ್ವದ ನಂಬರ್ ಒನ್ ಶ್ರೇಯಾಂಕಿತ ಆಟಗಾರ್ತಿ ಥಾಯ್ ತ್ಸು ಯಿಂಗ್ ಅವರನ್ನು ಎದುರಿಸಲಿದ್ದಾರೆ.
ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ನಾಲ್ಕನೇ ಶ್ರೇಯಾಂಕದ ಶ್ರೀಕಾಂತ್, 39 ನಿಮಿಷಗಳ ಆಟದಲ್ಲಿ 22ನೇ ಶ್ರೇಯಾಂಕದ ಲೆವೆರ್ಡ್ ಅವರನ್ನು 21-18, 21-14 ಅವರನ್ನು ಸೋಲಿಸಿದರು.
ಶ್ರೀಕಾಂತ್ ಅವರು ನಾಲ್ಕರ ಘಟ್ಟದಲ್ಲಿ ವಿಶ್ವದ ನಂಬರ್ 2 ಆಟಗಾರ ಮತ್ತು 2015 ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ, ಕೆಂಟೊ ಮೊಮೊಟಾ ಅವರ ವಿರುದ್ಧ ಸೆಣೆಸಲಿದ್ದಾರೆ.
ಮೊದಲ ಸುತ್ತಿನಲ್ಲಿ 5-8ರ ಹಿನ್ನಡೆ ಅನುಭವಿಸಿದ್ದ ಶ್ರೀಕಾಂತ್, ವಿರಾಮದ ವೇಳೆಗೆ 11-9ರ ಮುನ್ನಡೆ ಸಾಧಿಸಿದರು. ಬಳಿಕ ಮರು ಹೋರಾಟ ನಡೆಸಿದ ಲೆವೆರ್ಡ್, 12-12ರ ಸಮಬಲ ಸಾಧಿಸಿದರು.
ಚುರುಕಿನ ಆಟವಾಡಿದ ಶ್ರೀಕಾಂತ್ 17-14ರಿಂದ ಮುನ್ನಡೆ ಪಡೆದರೆ, ಲೆವೆರ್ಡ್ ಮತ್ತೆ ಮೂರು ಅಂಕಗಳನ್ನು ಪಡೆದು ಸಮಬಲ ಪಡೆದುಕೊಂಡರು. ಆದರೆ, ಶ್ರೀಕಾಂತ್ ಕೊನೆಯಲ್ಲಿ ಮೇಲುಗೈ ಸಾಧಿಸಿದರು.
ಎರಡನೆಯ ಸುತ್ತಿನಲ್ಲಿ 5-5ರ ಸಮಬಲವಿತ್ತು. ಅಲ್ಲಿಂದ ಶ್ರೀಕಾಂತ್ ಹಿಡಿತ ಪಡೆದುಕೊಂಡರು. ವಿರಾಮದ ವೇಳೆಗೆ 11-5ರ ಮುನ್ನಡೆ ಪಡೆದವರು ಸುಲಭವಾಗಿ ಗೆಲುವಿನ ಗುರಿ ತಲುಪಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications