Thailand Open Badminton: ಪಿವಿ ಸಿಂಧು, ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್‌ಗೆ
ಬ್ಯಾಂಕಾಕ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಪಿವಿ ಸಿಂಧು ಹಾಗೂ ಲಕ್ಷ್ಯ ಸೇನ್ ಅವರು ಥಾಯ್ಲೆಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ತಮ್ಮ ವೈಯಕ್ತಿಕ ವಿಭಾಗದಲ್ಲಿ ಮುನ್ನಡೆ ಸಾಧಿಸಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಎರಡು ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ, ಡೆನ್ಮಾರ್ಕ್‌ನ ಅಮಾಲಿ ಶುಲ್ಜ್ ವಿರುದ್ಧ 28 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದರು. 21-13, 21-15 ರಿಂದ ಡೆನ್ಮಾರ್ಕ್ ಆಟಗಾರ್ತಿಯನ್ನು ಮಣಿಸಿದ ಸಿಂಧು ಮುನ್ನಡೆ ಸಾಧಿಸಿದರು. ತಮ್ಮ ಅನುಭವ ಬಳಸಿಕೊಂಡು ಆಡಿದ ಭಾರತದ ಆಟಗಾರ್ತಿ ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಇವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್‌ನ ಅಕಾನೆ ಯಮಾಗುಚಿ ವಿರುದ್ಧ ಕಾದಾಟ ನಡೆಸಲಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗಲ್ಲಿ ಭಾರತದ ಸ್ಟಾರ್ ಆಟಗಾರ ಲಕ್ಷ್ಯ ಸೇನ್ ಅಮೋಘ ಪ್ರದರ್ಶನ ನೀಡಿದರು. ಇವರು ಜು ಜಂಗ್ ಚೆನ್ ವಿರುದ್ಧ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದರು. ಇವರು ಮೊದಲ ಗೇಮ್‌ನಲ್ಲಿ ಅಂಕ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರು. ಆರಂಭದಲ್ಲಿ ಚೀನಾದ ಆಟಗಾರ ಅಂಕದ ಖಾತೆ ತೆರೆದರು. 0-2 ರಿಂದ ಹಿನ್ನಡೆ ಅನುಭವಿಸುತ್ತಿದ್ದ ಲಕ್ಷ್ಯ ಸೇನ್ ಉತ್ತಮ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿದರು. ಗೇಮ್‌ನ ಮೊದಲ ಭಾಗದಲ್ಲಿ ಲಕ್ಷ್ಯ 11-9 ರಿಂದ ಮುನ್ನಡೆ ಸಾಧಿಸಿದರು.
ಚೀನಾ ಆಟಗಾರ ಬಳಿಕ ಪುಟಿದೇಳುವ ಸೂಚನೆ ನೀಡಿದರು. ಅಲ್ಲದೆ 11 ಅಂಕಗಳ ಸಮಬಲ ಸಾಧಿಸಿದರು. ಆದರೆ ಇಲ್ಲಿಂದ ಸತತ 6 ಅಂಕಗಳನ್ನು ಕಲೆ ಹಾಕಿದ ಭಾರತದ ಆಟಗಾರ ಅಂಕಗಳಿಕೆಯ ಅಂತರವನ್ನು ಹಿಗ್ಗಿಸಿಕೊಂಡರು. ಕೊನೆಯಲ್ಲಿ ಪುಟಿದೇಳುವ ಜು ಜಂಗ್ ಚೆನ್ ಅವರ ಆಸೆ ಫಲಿಸಲಿಲ್ಲ. ಮೊದಲ ಗೇಮ್‌ನ್ನು ಲಕ್ಷ್ಯ ಸೇನ್ 21-12 ರಿಂದ ಗೆದ್ದು ಕೊಂಡರು.

ಎರಡನೇ ಗೇಮ್‌ನಲ್ಲೂ ಲಕ್ಷ್ಯ ಸೇನ್ ಸಮಯೋಚಿತ ಆಟದ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿ ಮುನ್ನಡೆ ಸಾಧಿಸಿ ಸುಲಭವಾಗಿ 21-13 ರಿಂದ ಪಂದ್ಯ ಗೆದ್ದು ಬೀಗಿದರು. 39 ನಿಮಿಷದ ಆಟದಲ್ಲಿ ಲಕ್ಷ್ಯ ಸೇನ್ ಅಬ್ಬರಿಸಿ ಮುನ್ನಡೆ ಸಾಧಿಸಿದರು.
ಡಬಲ್ಸ್ ಜೋಡಿಗೆ ಜಯ
ಭಾರತದ ಭರವಸೆಯ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಿಂಕಿರೆಡ್ಡಿ, ಚಿರಾಗ್ ಶೆಟ್ಟಿ ಜೋಡಿ ಎರಡು ನೇರ ಸೆಟ್‌ಗಳಲ್ಲಿ ಮಲೇಷ್ಯಾದ ಆಟಗಾರರನ್ನು ಮಣಿಸಿತು. ಭಾರತದ ಜೋಡಿ 21-12, 21-19 ರಿಂದ ಮಲೇಷ್ಯಾದ ಗೂನಿಂಗ್ ಬ್ರಿಯಾನ್ ಜೆರೆಮಿ, ಹೈಕಲ್ ಮುಹಮ್ಮದ್ ಅವರ ವಿರುದ್ಧ 44 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿತು. ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ 16-21, 21-11, 18-21 ರಿಂದ ಚೈನೀಸ್ ತೈಪಿಯ ಸು ಲಿ ಯಾಂಗ್ ಅವರ ವಿರುದ್ಧ ಸೋಲು ಕಂಡರು.
ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮಾಳ್ವಿಕಾ ಬನ್‌ಸೋದ್, ದೇವಿಕಾ ಸಿಹಾಗ್ ನಿರಾಸೆ ಅನುಭವಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications