ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ 2ನೇ ಪದಕ, ಕಂಚು ಗೆದ್ದ ಪಿವಿ ಸಿಂಧು!

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಭಾರತಕ್ಕೆ ಎರಡನೇ ಪದಕ ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಚೀನಾ ಆಟಗಾರ್ತಿ ಹಿ ಬಿಂಗ್ ಜಿಯಾವೋ ವಿರುದ್ಧ ಸಿಂಧು 21-13, 21-15ರ ಅಂತರದಿಂದ ನೇರ ಸೆಟ್ ಗೆಲುವನ್ನಾಚರಿಸಿದ್ದಾರೆ. ಇದರೊಂದಿಗೆ ಸಿಂಧು ಹೆಸರಿಗೆ ಹಲವಾರು ದಾಖಲೆಗಳೂ ಸೇರ್ಪಡೆಯಾಗಿವೆ.
ಭಾನುವಾರ (ಆಗಸ್ಟ್ 1) ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಆರಂಭದಿಂದಲೂ ಪಿವಿ ಸಿಂಧು ಮುನ್ನಡೆ ಕಾಯ್ದುಕೊಂಡಿದ್ದರು. ಆರಂಭಿಕ ಸೆಟ್ ಸುಲಭವಾಗಿ ಭಾರತೀಯ ಆಟಗಾರ್ತಿಯ ವಶವಾಯ್ತು. ದ್ವಿತೀಯ ಸೆಟ್‌ನಲ್ಲಿ ಎದುರಾಳಿ ಹಿ ಬಿಂಗ್ ಜಿಯಾವೋ ಕೊಂಚ ಪೈಪೋಟಿ ನೀಡಿದರು. ಆದರೆ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ದ್ವಿತೀಯ ಸೆಟ್ ಅನ್ನು ಕೂಡ ತನ್ನದಾಗಿಸಿಕೊಂಡರು.

ಸಿಂಧು ಹೆಸರಿಗೆ ಹೊಸ ದಾಖಲೆ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪಿವಿ ಸಿಂಧು, ಭಾರತೀಯ ಒಲಿಂಪಿಕ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ. ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯೆ ದಾಖಲೆಗೆ ಸಿಂಧು ಗುರುತಿಸಿಕೊಂಡಿದ್ದಾರೆ. 2019ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ವಿಶ್ವ ಚಾಂಪಿಯನ್ ಪಟ್ಟವನ್ನೂ ಅಲಂಕರಿಸಿದ್ದ ಸಿಂಧು ವಿಶ್ವ ನಂ.9 ಶ್ರೇಯಾಂಕಿತೆ ಹಿ ಬಿಂಗ್ ಜಿಯಾವೋ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದರು. ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದ ವಿಶೇಷ ದಾಖಲೆಗೂ ಕಾರಣರಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸಿಂಧು 2 ಒಲಿಂಪಿಕ್ಸ್, ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ದೇಶಕ್ಕೆ ಎರಡನೇ ಪದಕ ಗೆದ್ದಿರುವ ಸಿಂಧು ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಅನೇಕರುವ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

ಸೆಮಿಫೈನಲ್‌ಲ್ಲಿ ನಿರಾಸೆ ಅನುಭವಿಸಿದ್ದ ಸಿಂಧು
ಜುಲೈ 31ರ ಶನಿವಾರ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಅವರು ಚೀನೀಸ್ ತೈಪೆಯ ತೈ ತ್ಸು ಯಿಂಗ್ ವಿರುದ್ಧ 18-21, 11-21ರ ನೇರ ಸೆಟ್‌ಗಳ ಅಂತರದಲ್ಲಿ ಸೋಲು ಕಂಡಿದ್ದರು. ಹೀಗಾಗಿ ಬಂಗಾರದ ಪದಕದ ಯೋಜನೆಯಲ್ಲಿದ್ದ ಸಿಂಧುಗೆ ತೀವ್ರ ನಿರಾಸೆಯಾಗಿತ್ತು. ಸೆಮಿಫೈನಲ್‌ನಲ್ಲಿ ಸೋತಿದ್ದರಿಂದಲೇ ಕಂಚಿನ ಪದಕಕ್ಕಾಗಿ ಇಂದು (ಆಗಸ್ಟ್ 1) ಪಂದ್ಯ ನಡೆಸಲಾಗಿತ್ತು. ಇದರಲ್ಲಿ 26ರ ಹರೆಯದ ಸಿಂಧು ಸುಲಭ ಜಯ ಕಂಡಿದ್ದಾರೆ. ಅಚ್ಚರಿಯೆಂದರೆ ಒಲಿಂಪಿಕ್ಸ್‌ಗೆ ಮುನ್ನ ಸುದ್ದಿಗಾರರ ಜೊತೆ ಮಾತನಾಡುವಾಗ ಸಿಂಧು, ತನಗೆ ಚೀನೀಸ್ ತೈಪೆಯ ತೈ ತ್ಸು ಯಿಂಗ್ ಎದುರಿನ ಆಟವೇ ಕೊಂಚ ಭಯ ತರಿಸುತ್ತೆ ಎಂಬಂತೆ ಹೇಳಿಕೆ ನೀಡಿದ್ದರು. ತೈ ತ್ಸು ಯಿಂಗ್ ನನ್ನ ಪಾಲಿಗೆ ಕಠಿಣ ಸ್ಪರ್ಧಿ ಎಂದು ಹೇಳಿದ್ದರು. ಅವರು ಹೇಳಿದಂತೆಯೇ ಒಲಿಂಪಿಕ್ಸ್‌ನಲ್ಲಿ ಸಿಂಧು ಸೋತಿದ್ದು ತೈ ತ್ಸು ಯಿಂಗ್ ವಿರುದ್ಧ ಮಾತ್ರ.

ಭಾರತಕ್ಕೆ ಇನ್ನೆರಡು ಪದಕಗಳ ನಿರೀಕ್ಷೆ
ಒಟ್ಟಿನಲ್ಲಿ ಸಿಂಧು ಗೆದ್ದಿರುವುದು ಇದು ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲಭಿಸುತ್ತಿರುವ ಎರಡನೇ ಪದಕ. ಇದಕ್ಕೂ ಮುನ್ನ ಮಹಿಳಾ ವಿಭಾಗದ 49 ಕೆಜಿ ವೇಟ್ ಲಿಫ್ಟಿಂಗ್‌ನಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಇದಲ್ಲದೆ ಭಾರತಕ್ಕೆ ಇನ್ನೊಂದು ಪದಕ ಖಾತ್ರಿಯಾಗಿದೆ. ಮಹಿಳಾ ಬಾಕ್ಸಿಂಗ್ 69 ಕೆಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿರುವ ಲವ್ಲಿನಾ ಬೊರ್ಗೊಹೈನ್ ಈಗಾಗಲೇ ಭಾರತಕ್ಕೆ ಮತ್ತೊಂದು ಪದಕ ಖಾತರಿಪಡಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು. ಇದು ಬಿಟ್ಟರೆ ಮಹಿಳಾ ಡಿಸ್ಕಸ್ ಥ್ರೋನಲ್ಲೂ ಭಾರತಕ್ಕೆ ಪದಕ ಸಿಗುವ ಸಾಧ್ಯತೆಯಿದೆ. ಭಾರತದ ಕಮಲ್‌ಪ್ರೀತ್ ಕೌರ್ ಗ್ರೂಪ್ ಹಂತದಲ್ಲಿ ಫೈನಲ್‌ಗೆ ಆಯ್ಕೆಯಾಗಿದ್ದಾರೆ. ಆಗಸ್ಟ್ 2ರಂದು ಕೌರ್‌ಗೆ ಸ್ಪರ್ಧೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications