
ಹೈದರಾಬಾದ್: ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಕಂಚಿನ ಪದಕ ವಿಜೇತ ಪಿವಿ ಸಿಂಧು ಟೋಕಿಯೋದಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲೇ ದೇಶಕ್ಕೆ ಎರಡು ಪದಕಗಳನ್ನು ಗೆದ್ದ ಏಕಮಾತ್ರ ಕ್ರೀಡಾಪಟು ಎಂಬ ದಾಖಲೆಗೆ ಸಿಂಧು ಪಾತ್ರರಾಗಿದ್ದಾರೆ. ಹೈದರಾಬಾದ್‌ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಿಂಧು ಅವರನ್ನು ಅಲ್ಲಿನ ಕ್ರೀಡಾಸಚಿವ ವಿ ಶ್ರೀನಿವಾಸ ಗೌಡ್, ಅಧಿಕಾರಿಗಳು ಆದರದಿಂದ ಬರಮಾಡಿಕೊಂಡರು.
ಟೋಕಿಯೋ ಒಲಿಂಪಿಕ್ಸ್‌ಗೆ ತೆರಳಿದ್ದ 127 ಭಾರತೀಯ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದ ಪಿವಿ ಸಿಂಧು ಬುಧವಾರ (ಆಗಸ್ಟ್ 4) ಭಾರತಕ್ಕೆ ವಾಪಸ್ಸಾಗಿದ್ದಾರೆ. ಪ್ರತಿಷ್ಠಿತ ಗೇಮ್ಸ್‌ನಲ್ಲಿ ಸಿಂಧು ಭಾರತಕ್ಕೆ ಎರಡನೇ ಪದಕವಾಗಿ ಕಂಚು ಗೆದ್ದಿದ್ದರು. ಹಿಂದಿನ ರಿಯೋ ಒಲಿಂಪಿಕ್ಸ್‌ನಲ್ಲೂ (2016) ಸಿಂಧು ಬೆಳ್ಳಿಯ ಪದಕ ಜಯಿಸಿದ್ದರು.
ಮುಂದಿನ ಬಾರಿ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆಲ್ಲು
ತಾಯ್ನೆಲಕ್ಕೆ ಬಂದಿಳಿದ ವಿಪಿ ಸಿಂಧು ಅವರನ್ನು ಹೈದರಾಬಾದ್ ಕ್ರೀಡಾ ಸಚಿವ ಬರಮಾಡಿಕೊಂಡು, ಮುಂದಿನ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಬಂಗಾರ ಗೆಲ್ಲುವಂತೆ ಶುಭಹಾರೈಸಿದರು. "ಸಿಂಧು ಅವರು ಪದಕ ಗೆದ್ದು ಇಡೀ ದೇಶಕ್ಕೆ ಮತ್ತು ತೆಲುಗು ಮಾತನಾಡುವ ಆಂಧ್ರಪ್ರದೇಶ ಮತ್ತು ತೆಲಂಗಾಣ ಜನರಿಗೆ ಹೆಮ್ಮೆ ಮೂಡುವಂತೆ ಮಾಡಿದ್ದಾರೆ. ಮುಂದಿನ ಬಾರಿ ಸಿಂಧು ಬಂಗಾರ ಗೆಲ್ಲಲಿ," ಎಂದು ಗೌಡ್ ಹೇಳಿದರು. ಕ್ರೀಡಾ ಸಚಿವರಿಗೂ ಧನ್ಯವಾದ ಸಲ್ಲಿಸಿದ ಸಿಂಧು, ತನ್ನ ಸಾಧನೆಗೆ ರಾಜ್ಯ ಕ್ರೀಡಾ ಸಚಿವಾಲಯವೂ ಸಾಕಷ್ಟು ಬೆಂಬಲ ನೀಡಿದೆ ಎಂದರು. ಭಾನುವಾರ (ಆಗಸ್ಟ್ 1) ನಡೆದ ಟೋಕಿಯೋ ಒಲಿಂಪಿಕ್ಸ್ ಮಹಿಳಾ ಸಿಂಗಲ್ಸ್ ಕಂಚಿನ ಪದಕದ ಪಂದ್ಯದಲ್ಲಿ ಚೀನಾ ಆಟಗಾರ್ತಿ ಹಿ ಬಿಂಗ್ ಜಿಯಾವೋ ವಿರುದ್ಧ ಸಿಂಧು 21-13, 21-15ರ ಅಂತರದಿಂದ ನೇರ ಸೆಟ್ ಗೆಲುವನ್ನಾಚರಿಸಿದ್ದರು. ಜುಲೈ 31ರ ಶನಿವಾರ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಅವರು ಚೀನೀಸ್ ತೈಪೆಯ ತೈ ತ್ಸು ಯಿಂಗ್ ವಿರುದ್ಧ 18-21, 11-21ರ ನೇರ ಸೆಟ್‌ಗಳ ಅಂತರದಲ್ಲಿ ಸೋಲು ಕಂಡಿದ್ದರು. ಹೀಗಾಗಿ ಬಂಗಾರದ ಪದಕದ ಯೋಜನೆಯಲ್ಲಿದ್ದ ಸಿಂಧುಗೆ ತೀವ್ರ ನಿರಾಸೆಯಾಗಿತ್ತು. ಆದರೆ ಕಂಚಿನ ಪದಕ ಸಿಕ್ಕಿತ್ತು.
ಭಾರತಕ್ಕೆ ಎರಡು ಬೆಳ್ಳಿ, ಎರಡು ಕಂಚಿನ ಪದಕಗಳು
ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈಗ ನಾಲ್ಕು ಪದಕಗಳು ಬಂದಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಮೂರನೇ ಪದಕವಾಗಿ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದಿದ್ದಾರೆ. ಈಗ ರಸ್ಲರ್ ರವಿಕುಮಾರ್ ದಾಹಿಯ ಮತ್ತೊಂದು ಬೆಳ್ಳಿ ಖಾತರಿಪಡಿಸಿದ್ದಾರೆ. 4 ಆಗಸ್ಟ್ 6.30 PM ವೇಳೆ ಭಾರತದ ಖಾತೆಯಲ್ಲಿ ಎರಡು ಬೆಳ್ಳಿ, ಎರಡು ಕಂಚಿನ ಪದಕಗಳು ಇದ್ದವು. ಪದಕ ಪಟ್ಟಿಯಲ್ಲಿ ಭಾರತ 62ನೇ ಸ್ಥಾನದಲ್ಲಿತ್ತು. ಇನ್ನು ಪುರುಷರ ಅಥ್ಲೆಟಿಕ್ಸ್ ವಿಭಾಗದ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಪದಕ ಬರುವ ಸಾಧ್ಯತೆಯಿದೆ. ಆಗಸ್ಟ್ 7ರಂದು ನೀರಜ್ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ನಿರಾಸೆಯಾಗಿದೆ.
ಭಾರತೀಯ ತಂಡದ ಬಗ್ಗೆ ಸಂಕ್ಷಿಪ್ತ ಮಾಹಿತಿ
ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಿಂದ ಒಟ್ಟು 127 ಅಥ್ಲೀಟ್‌ಗಳು ತೆರಳಿದ್ದರು. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೂ ಸೇರಿ ಒಟ್ಟಾರೆ 228 ಮಂದಿಯ ಬೃಹತ್ ತಂಡ ಪ್ರತಿಷ್ಠಿತ ಕ್ರೀಡಾಕೂಟಕ್ಕಾಗಿ ಟೋಕಿಯೋಗೆ ತೆರಳಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಲ್ಗೊಳ್ಳುತ್ತಿರುವ ಅತೀ ದೊಡ್ಡ ಭಾರತೀಯ ತಂಡವಿದು. ಒಟ್ಟು 17 ಕ್ರೀಡಾಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಹಿಂದಿ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 117 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ಇದರಲ್ಲಿ 63 ಪುರುಷರು, 54 ಮಹಿಳಾ ಸ್ಪರ್ಧಿಗಳಿದ್ದರು.