ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ : ಸಿಂಧುಗೆ ವೀರೋಚಿತ ಸೋಲು
ಗ್ಲಾಸ್ಗೋ, ಆಗಸ್ಟ್ 27 : ಕಟ್ಟಕಡೆಯ ಕ್ಷಣದವರೆಗೆ ಅದ್ಭುತ ಹೋರಾಟ ನಡೆಸಿದ ಭಾರತದ ಪಿವಿ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಜಪಾನ್ ನ ಓಕುಹಾರಾ ವಿರುದ್ಧ ವೀರೋಚಿತ ಸೋಲು ಕಂಡರು.
ಮೊದಲನೇ ಗೇಮ್ ಅನ್ನು 19-21ರಿಂದ ಸೋತಿದ್ದ ಪಿವಿ ಸಿಂಧು, ಎರಡನೇ ಗೇಮ್ ಅನ್ನು 22-20ರಿಂದ ಗೆದ್ದು ತಿರುಗೇಟು ನೀಡಿದ್ದರು. ಕಡೆಯ ಗೇಮ್ ನಲ್ಲಿ ಕಡೆಯ ಕ್ಷಣದ ವರೆಗೆ ಮೈನವಿರೇಳಿಸುವಂತೆ ಇಬ್ಬರೂ ಹೋರಾಡಿದರು. ಕಡೆಗೆ ಜಯ ಓಕುಹಾರಾ ಅವರಿಗೆ ಒಲಿಯಿತು.
2016ರ ರಿಯೋ ಓಲಿಂಪಿಕ್ಸ್ ನಲ್ಲಿ ಪಿವಿ ಸಿಂಧು ವಿರುದ್ಧ ಸೆಮಿ ಫೈನಲ್ ನಲ್ಲಿ ಸೋತಿದ್ದ 5.1 ಅಡಿ ಎತ್ತರವಿರುವ ಓಕುಹಾರಾ ನಂತರ ಕಂಚಿನ ಪದಕ ಗೆದ್ದಿದ್ದರು. ಈಗ ಆ ಸೋಲಿನ ಸೇಡನ್ನು ತೀರಿಸಿಕೊಂಡು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಾರೆ.

ಕಡೆಯ ಗೇಮ್ ನಲ್ಲಿ ಆರಂಭದಲ್ಲಿ ಸಿಂಧು 1-5ರಿಂದ ಸ್ವಲ್ಪ ಹಿನ್ನಡೆ ಕಂಡರೂ ಸತತ 4 ಪಾಯಿಂಟ್ ಗಳಿಸಿ 5-5 ಸಮ ಮಾಡಿಕೊಂಡರು. ನಂತರ ಒಂದೊಂದು ಅಂಕಕ್ಕೂ ಹೋರಾಟ ಆರಂಭವಾಯಿತು. ಇಬ್ಬರೂ ಸೇರಿಗೆ ಸವ್ವಾಸೇರು ಎಂಬಂತೆ ಅಂಕ ಗಳಿಸುತ್ತಲೇ ಸಾಗಿದರು. 19 ಅಂಕಗಳವರೆಗೂ ಹೋರಾಟ ಸರಿಸಮವಾಗಿತ್ತು.
ಕಡೆಯ ಹಂತದಲ್ಲಿ ಸಿಂಧು ಸ್ವಲ್ಪ ತಾಳ್ಮೆ ಕಳೆದುಕೊಂಡಂತೆ ಕಂಡರೂ, ಓಕುಹಾರಾ 20 ಅಂಕ ಗಳಿಸಿ ಚಾಂಪಿಯನ್ ಶಿಪ್ ಹಂತದಲ್ಲಿದ್ದಾಗ 20-20ರಿಂದ ಮತ್ತೊಂದು ಪಾಯಿಂಟ್ ಗಳಿಸಿ ಸಿಂಧು ಫೈನಲ್ ಪಂದ್ಯಕ್ಕೆ ರೋಚಕತೆ ತಂದರು. ಆದರೆ, ಜಯದ ಮಾಲೆ ಧರಿಸಿದ್ದು ಓಕುಹಾರಾ ಎಂಬುದು ಭಾರತೀಯರಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿತ್ತು.
ಅದ್ಭುತ ರ್ಯಾಲಿಗಳನ್ನು ಕಂಡ ಈ ಫೈನಲ್ ಬಹುದಿನಗಳ ಕಾಲ ನೆನಪಿನಲ್ಲುಳಿಯುವಂಥದ್ದು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಬಾರಿ ಸಿಂಧು ಫೈನಲ್ ಪ್ರವೇಶಿಸಿದ್ದರು. ಸ್ಮಾಶ್ ಮಾಡುವಾಗಲಾಗಲಿ, ಡ್ರಾಪ್ ಶಾಟ್ ಹೊಡೆಯುವಾಗಲಾಗಲಿ ಇಬ್ಬರೂ ಒಬ್ಬರನ್ನೊಬ್ಬರನ್ನು ಮೀರಿಸುವಂತೆ ಆಡುತ್ತಿದ್ದರು.
ಈ ಟೂರ್ನಾಮೆಂಟ್ ನಲ್ಲಿ ಭಾರತ ಎರಡು ಪದಕಗಳನ್ನು ಗೆದ್ದುಕೊಂಡಿದೆ. ನೇಹಾ ಸೆಹ್ವಾಲ್ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರೆ, ಸಿಂಧು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications