
ಪಾಣಾಜಿ: ಸೋಲಿಲ್ಲದ ಸರದಾರನಾಗಿ ವಿಶ್ವಮಟ್ಟದಲ್ಲಿ ಮಿಂಚಿದ್ದ ಭಾರತದ ಸ್ಟಾರ್ ಬಾಕ್ಸರ್ ವಿಜೆಂದರ್ ಸಿಂಗ್ ಅವರ ಗೆಲುವಿನೋಟ ಕೊನೆ ಕಂಡಿದೆ. ಗೋವಾದ ಪಾಣಾಜಿಯಲ್ಲಿ ಶುಕ್ರವಾರ (ಮಾರ್ಚ್ 19) ನಡೆದ ಬ್ಯಾಟಲ್ ಆನ್ ಶಿಪ್ ಪಂದ್ಯದಲ್ಲಿ ರಷ್ಯಾದ ಸ್ಪರ್ಧಿ ಆರ್ಟಿಶ್ ಲೋಪ್ಸನ್ ಎದುರು ವಿಜೇಂದರ್ ಶರಣಾಗಿದ್ದಾರೆ.
2015ರಲ್ಲಿ ವೃತ್ತಿಪರ ಬಾಕ್ಸಿಂಗ್‌ಗೆ ಬದಲಾದ ವಿಜೇಂದರ್ ಸಿಂಗ್ 2008ರಲ್ಲೇ ಬೀಜಿಂಗ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾರತಕ್ಕೆ ಕಂಚು ಜಯಿಸಿದ್ದರು. ವಿಜೇಂದರ್ ಹೆಸರಿನಲ್ಲಿ ಸತತ 12-0 ಪಂದ್ಯಗಳಲ್ಲಿ ಗೆದ್ದ ಗೆಲುವಿನ ಸ್ಟ್ರೀಕ್ ಇತ್ತು. ಆದರೆ ಲೋಪ್ಸನ್ ಎದುರು ಸೋಲುವುದರೊಂದಿಗೆ ವಿಜೇಂದರ್ ಗೆಲುವಿನ ದಾಖಲೆಯ ಓಟಕ್ಕೆ ಕೊನೆ ಹಾಡಿದ್ದಾರೆ.
ಆರಂಭಿಕ ಸುತ್ತಿನಿಂದಲೂ ಹರ್ಯಾಣದ ಬಾಕ್ಸರ್ ವಿಜೇಂದರ್ ಮತ್ತು ರಷ್ಯನ್ ಬಾಕ್ಸರ್ ಲೋಪ್ಸನ್ ವಿರುದ್ಧ ಜಿದ್ದಾಜಿದ್ದಿಯ ಗುದ್ದಾಟ ನಡೆಯಿತು. ಲೋಪ್ಸನ್ ಕೂಡ ವಿಜೇಂದರ್‌ಗೆ ತಕ್ಕ ಸ್ಪರ್ಧೆ ನೀಡುತ್ತಿದ್ದುದ್ದು ಕಂಡು ಬಂದಿತ್ತು. ಅಂತಿಮವಾಗಿ ಲೋಪ್ಸನ್ ಮೇಲುಗೈ ಸಾಧಿಸಿದರು.
5ನೇ ಸುತ್ತಿನ ಪಂದ್ಯದ ವೇಳೆ 1 ನಿಮಿಷ 9 ಸೆಕೆಂಡ್‌ಗಳು ಕಳೆದಿದ್ದಾಗ ವಿಜೇಂದರ್ ಕುಸಿತ ಕಂಡಿದ್ದರು. ಹೀಗಾಗಿ ರೆಫರೀ, 26ರ ಹರೆಯದ ರಷ್ಯನ್ ಆಟಗಾರ ಲೋಪ್ಸನ್‌ನನ್ನು ವಿಜೇತನೆಂದು ಘೋಷಿಸಿದರು. ಹೀಗಾಗಿ 8ನೇ ಸುತ್ತಿನವರೆಗೆ ನಡೆಯಬೇಕಿದ್ದ ಗುದ್ದಾಟ 5ನೇ ಸುತ್ತಿನಲ್ಲಿ ನಾಕೌಟ್ ಎಂದು ಮುಕ್ತಾಯಕಂಡಿತು.